

ಕೂಡ್ಲಿಗಿ: ಧರ್ಮಸ್ಥಳದ ಹೆಸರಿನಲ್ಲಿ ಅಪಪ್ರಚಾರ ಖಂಡಿಸಿ ಬಿಜೆಪಿ ಮಂಡಲ ಹಾಗೂ ಇತರೆ ಸಂಘಟನೆಗಳ ಸಹಯೋಗದಲ್ಲಿ ಸೋಮವಾರ ಪ್ರತಿಭಟನೆ ನಡೆದು, ತಹಸೀಲ್ದಾರ್ ವಿ.ಕೆ.ನೇತ್ರಾವತಿಗೆ ಮನವಿ ಸಲ್ಲಿಸಲಾಯಿತು.
ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಕೆ. ನಾಗರಾಜ ಮಾತನಾಡಿ, ಧರ್ಮಸ್ಥಳವು ಕರ್ನಾಟಕವಷ್ಟೇ ಅಲ್ಲದೆ ದೇಶಾದ್ಯಂತ ಕೋಟ್ಯಂತರ ಭಕ್ತಾದಿಗಳನ್ನು ಹೊಂದಿದೆ. ಈ ಕ್ಷೇತ್ರಕ್ಕೆ ದಿನನಿತ್ಯ ಲಕ್ಷಾಂತರ ಮಂದಿ ಭಕ್ತಾದಿಗಳು ಆಗಮಿಸುತ್ತಾರೆ. ಇದು ಹಿಂದುಗಳಿಗೆ ಪ್ರಮುಖ ಧಾರ್ಮಿಕ ಶ್ರದ್ಧಾ ಕೇಂದ್ರ.
ಹಿಂದುಗಳ ಧಾರ್ಮಿಕ ಭಾವನೆಗಳನ್ನು ಅಪಮಾನಿಸುವ ದುರುದ್ದೇಶದಿಂದ ಕಿಡಿಗೇಡಿಗಳು ಹಾಗೂ ಎಡಪಂಥೀಯರು ಸುಳ್ಳು ಅಪಪ್ರಚಾರ ಮಾಡುತ್ತಿದ್ದಾರೆ. ಇದರ ಹಿಂದೆ ಹಿಂದುಗಳ ಶ್ರದ್ಧಾ ಭಕ್ತಿಯನ್ನು ಅತ್ಯಂತ ನಿಕೃಷ್ಟವಾಗಿ ಬಿಂಬಿಸುವ ಹುನ್ನಾರವಿದೆ. ಇಂಥವರಿಗೆ ಕುಮ್ಮಕ್ಕು ನೀಡುವ ಷಡ್ಯಂತ್ರವೂ ನಡೆದಿದೆ ಎಂದರು.
ಭಾರತದ ನ್ಯಾಯ ಸಂಹಿತೆ ಅಡಿಯಲ್ಲಿ ಅನಾಮಿಕ ವ್ಯಕ್ತಿಯೊಬ್ಬ ಆಧಾರಗಳಿಲ್ಲದೆ ಮಾಡಿದ ಆರೋಪಕ್ಕೆ ರಾಜ್ಯ ಸರ್ಕಾರವು ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿ ಆತ ಹೇಳಿದ ಕಡೆಗಳಲ್ಲೆಲ್ಲ ಗುಂಡಿಗಳನ್ನು ತೋಡಿದೆ. ಆದರೆ, ಈ ಅನಾಮಿಕನ ಹಿಂದಿರುವ ದುಷ್ಟ ವ್ಯಕ್ತಿಗಳು ಯಾರು? ಮತ್ತು ಅವರು ಮಾಡುತ್ತಿರುವ ಸಂಚುಗಳೇನು ಎಂಬುದನ್ನು ಈವರೆಗೂ ರಾಜ್ಯದ ಜನತೆಗೆ ಕಾಂಗ್ರೆಸ್ ಸರ್ಕಾರ ತಿಳಿಸಿಲ್ಲ.
ಆದುದರಿಂದ ಹಿಂದುಗಳ ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನು ಅವಮಾನಿಸುತ್ತಿರುವ ಸಮಾಜ ವಿರೋಧಿ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಅವರನ್ನು ಶಿಕ್ಷೆಗೆ ಒಳಪಡಿಸಬೇಕು. ಕಾಂಗ್ರೆಸ್ ಸರ್ಕಾರ ಹಿಂದುಗಳ ಭಕ್ತಿ ಭಾವನೆಗಳಿಗೆ ಧಕ್ಕೆ ತರುವ ಹುನ್ನಾರವನ್ನು ನಿರಂತರ ಮಾಡುತ್ತಿದೆ.
ಇಂತಹ ದುಷ್ಕೃತ್ಯ ತಡೆಯುವಲ್ಲಿ ವಿಫಲವಾದ ಮುಖ್ಯಮಂತ್ರಿ ಮತ್ತು ಗೃಹ ಸಚಿವ ರಾಜ್ಯದ ಜನತೆಯ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. ಈ ಸಂದರ್ಭ ವೃತ್ತಿಪರ ಪ್ರಕೋಷ್ಠದ ರಾಜ್ಯ ಸದಸ್ಯ ಗುಳಿಗಿ ವೀರೇಂದ್ರ ಕುಮಾರ್, ರೈತ ಮೋರ್ಚಾದ ಜಿಲ್ಲಾಧ್ಯಕ್ಷ ಎಚ್. ರೇವಣ್ಣ, ಮುಖಂಡರಾದ ಸೂರ್ಯಪಾಪಣ್ಣ,
ಅನಂತ ಪದ್ಮನಾಭ, ಎಸ್. ದುರುಗೇಶ್, ಪಿ. ಮಂಜುನಾಥ ನಾಯಕ, ಸಚಿನ್ ಕುಮಾರ್, ಗುರಿಕಾರ ರಾಘವೇಂದ್ರ, ಅಜೇಯ್, ಎಸ್. ಸಣ್ಣ ಬಾಲಪ್ಪ, ವಾಗೀಶ ಮೂರ್ತಿ, ಭರತ್ ಜೂಗಲ್, ಉಗ್ರಂ ಕಿಟ್ಟಿ, ಎಲ್. ಪವಿತ್ರ, ಲಕ್ಷ್ಮೀದೇವಿ, ನಾಗಣ್ಣ, ಮುತ್ತೆ ಪಾಲಯ್ಯ, ವಸಂತ ಕುಮಾರ್, ಯಜಮಾನಪ್ಪ, ಗಣೇಶ, ನಾಗರಾಜ, ಹನುಮಂತ ಸೇರಿದಂತೆ ಅನೇಕರು ಇದ್ದರು.