

ಮೈಸೂರು: ಮುಡಾ ಹಗರಣಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ಮರೀಗೌಡ ಹೇಳಿದರು.
ಮೈಸೂರು ತಾಲೂಕು ಕುರುಬರ ಸಂಘದ ವತಿಯಿಂದ ಸಿದ್ಧಾರ್ಥ ನಗರದಲ್ಲಿರುವ ಕನಕಭವನದಲ್ಲಿ ಸೋಮವಾರ ಆಯೋಜಿಸಿದ್ದ ಕಾಂಗ್ರೆಸ್ ಜನಾಂದೋಲನ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ನಿವೇಶನ ಹಂಚಿಕೆ ಸಂಬಂಧಪಟ್ಟಂತೆ ಒಂದೇ ಒಂದು ಪತ್ರವನ್ನು ಸಿದ್ದರಾಮಯ್ಯ ಬರೆದಿಲ್ಲ. ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ. ಆದರೂ ಸಹ ಟಿ.ಜೆ. ಅಬ್ರಹಾಂ ಎಂಬ ಖಾಸಗಿ ವ್ಯಕ್ತಿ ನೀಡಿದ ದೂರಿನ ಮೇಲೆ ದುರುದ್ದೇಶ ಪೂರ್ವಕವಾಗಿ ಕೇಂದ್ರ ಸರ್ಕಾರದ ಕೈಗೊಂಬೆಯಾಗಿರುವ ರಾಜ್ಯಪಾಲರು, ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್‌ನಲ್ಲಿರುವ ಭ್ರಷ್ಟಾಚಾರಿಗಳೇ ಪಾದಯಾತ್ರೆ ಮಾಡುತ್ತಿರುವುದು ವಿಪರ್ಯಾಸ ಎಂದು ಕುಟುಕಿದರು.
ಅಹಿಂದ ಮತ್ತು ಶೋಷಿತರ ವರ್ಗದ ನಾಯಕ ಸಿದ್ದರಾಮಯ್ಯ ಅವರು 2ನೇ ಬಾರಿಗೆ ಮುಖ್ಯಮಂತ್ರಿಯಾಗಿರುವುದು ಬಿಜೆಪಿ ಮತ್ತು ಜೆಡಿಎಸ್‌ನವರಿಗೆ ನುಂಗಲಾರದ ತುತ್ತಾಗಿದೆ. 45 ವರ್ಷಗಳ ಸಿದ್ದರಾಮಯ್ಯ ಅವರ ರಾಜಕೀಯ ಇತಿಹಾಸದಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದೆ ಅಹಿಂದ ವರ್ಗದ ಬಲಿಷ್ಠ ನಾಯಕರಾಗಿ ಹೊರಹೊಮ್ಮಿದ್ದಾರೆ ಎಂದರು.
ಇಂತಹ ಗೊಡ್ಡು ಬೆದರಿಕೆಗಳಿಗೆ ಸಿದ್ದರಾಮಯ್ಯ ಅವರು ಹೆದರಬೇಕಾಗಿಲ್ಲ. ರಾಜ್ಯದ ಅಹಿಂದ ವರ್ಗ, ಶೋಷಿತ ವರ್ಗ ಅವರ ಬೆಂಬಲಕ್ಕೆ ನಿಂತಿದೆ. ಇದು ನಮ್ಮ ಅಳಿವು ಉಳಿವಿನ ಹೋರಾಟವಾಗಿದೆ ಎಂದರು.
1983ರಿಂದಲೂ ಸಿದ್ದರಾಮಯ್ಯ ಅವರ ಪರನಿಂತು ಹೋರಾಟ ಮಾಡಿಕೊಂಡು ಬಂದಿದ್ದು, ಈಗಲೂ ಸಹ ಸಮಾರಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿ ಊರಿನಿಂದಲೂ ಅಭಿಮಾನಿಗಳು, ಕಾರ್ಯಕರ್ತರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವುದರೊಂದಿಗೆ ಸಿದ್ದರಾಮಯ್ಯ ಅವರ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.
ರಾಜ್ಯ ಕುರುಬರ ಸಂಘದ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ಮಾತನಾಡಿ, 136 ಜನ ಶಾಸಕರಿಂದ ಆಯ್ಕೆಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಬ್ಬ ಭ್ರಷ್ಟ ಆರ್‌ಟಿಐ ಕಾರ್ಯಕರ್ತ ನೀಡಿದ ಅರ್ಜಿಗೆ ರಾಜ್ಯಪಾಲರು ನೋಟಿಸ್ ನೀಡಿದ್ದು, ಸಿಎಂ ವಿರುದ್ಧ ಎಷ್ಟು ಕುತಂತ್ರ ನಡೆದಿದೆ ಎಂಬುದನ್ನು ಜನ ಅರ್ಥಮಾಡಿಕೊಳ್ಳಬೇಕು ಎಂದರು.
ಕುರುಬರ ಸಂಘದ ತಾಲೂಕು ಅಧ್ಯಕ್ಷ ಬಸವರಾಜು, ಗೌರವಾಧ್ಯಕ್ಷ ನಾಡನಹಳ್ಳಿ ರವಿ, ಮಾಜಿ ಮೇಯರ್‌ಗಳಾದ ಟಿ.ಬಿ.ಚಿಕ್ಕಣ್ಣ, ಪುಷ್ಪಲತಾ ಚಿಕ್ಕಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಬಂಡಿಪಾಳ್ಯ ಬಸವರಾಜು, ಅಹಿಂದ ಮುಖಂಡ ಕೆ.ಎಸ್. ಶಿವರಾಮ್, ಮುಖಂಡರಾದ ಪಟೇಲ್ ಜವರೇಗೌಡ, ಕೋಟೆಹುಂಡಿ ಮಹಾದೇವ, ಶ್ರೀಕಂಠ ತೊಂಡೇಗೌಡ, ಕೆ.ಎಸ್.ಕರೀಗೌಡ, ರಾಜೇಶ್ವರಿ, ಕಮಲ ಛಾಯಾ, ಸೋಮಶೇಖರ್ ಅಪ್ಪುಗೌಡ, ಹುಯಿಲಾಳು ರಾಘವೇಂದ್ರ, ಬಿ.ಗುರುಸ್ವಾಮಿ, ಜೆ.ಸತೀಶ್ ಕುಮಾರ, ಶಿವಣ್ಣ ಇದ್ದರು.