

ಬೆಂಗಳೂರು: ಮಹಾನಗರದಲ್ಲಿ ಕಸದ ಸಮಸ್ಯೆಯನ್ನು ಕಡಿಮೆ ಮಾಡಲು ರೂಪಿಸಿರುವ ಸ್ವಯಂಚಾಲಿತ ತ್ಯಾಜ್ಯ ವಿಂಗಡಣೆ ಘಟಕ ಹಾಗೂ ದ್ವಿತೀಯ ಹಂತದ ಘನತ್ಯಾಜ್ಯ ವರ್ಗಾವಣೆ ಘಟಕಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರವಾರ ಚಾಲನೆ ನೀಡಿದರು.
ಬಿಬಿಎಂಪಿ ಹಾಗೂ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಗಮ (ಬಿಎಸ್‌ಡಬ್ಲ್ಯುಎಂಎಲ್) ಚಾಮರಾಜಪೇಟೆಯ ಛಲವಾದಿಪಾಳ್ಯ ವಾರ್ಡ್ ವ್ಯಾಪ್ತಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ಈ ಎರಡೂ ಘಟಕಗಳನ್ನು ಪರವೀಕ್ಷಿಸಿ ಲೋಕಾರ್ಪಣೆ ಮಾಡಿದರು. ಇದೇ ವೇಳೆ ಸಿಎಂ, ನಗರದಲ್ಲಿ ಕಸ ಸಮಸ್ಯೆಯನ್ನು ಪೂರ್ಣವಾಗಿ ನಿವಾರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
12.50 ಕೋಟಿ ರೂ. ವೆಚ್ಚ:
ದ್ವಿತೀಯ ಹಂತದ ಘನತ್ಯಾಜ್ಯ ವರ್ಗಾವಣೆ ಘಟಕ ಹಾಗೂ ಸ್ವಯಂಚಾಲಿತ ತ್ಯಾಜ್ಯ ವಿಂಗಡಣೆ ಘಟಕಗಳನ್ನು 12.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಚಾಮರಾಜಪೇಟೆ ವಿಭಾಗದ 6 ವಾರ್ಡ್ ಹಾಗೂ ಗಾಂಧಿನಗರ ವಿಭಾಗದ 3 ವಾರ್ಡ್ ಸೇರಿ ಒಟ್ಟು 9 ವಾರ್ಡ್‌ಗಳಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ಈ ಘಟಕದಲ್ಲಿ ಸ್ವೀಕರಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತದೆ.
ದ್ವಿತೀಯ ಹಂತದ ಘನತ್ಯಾಜ್ಯ ವರ್ಗಾವಣೆ ಘಟಕ:
ಬಿಬಿಎಂಪಿ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುತ್ತಿರುವ ತ್ಯಾಜ್ಯವನ್ನು ಮೂಲದಲ್ಲಿಯೇ ಹಸಿ, ಒಣ ಮತ್ತು ಗೃಹ ಹಾನಿಕಾರಕ ನೈರ್ಮಲ್ಯ ತ್ಯಾಜ್ಯವನ್ನಾಗಿ ಬೇರ್ಪಡಿಸಿ ಸಂಗ್ರಹಿಸಲಾಗುತ್ತಿದೆ. ಈ ಕಾರ್ಯವು ವಿವಿಧ ಹಂತಗಳನ್ನು ಒಳಗೊಂಡಿದೆ. ಪ್ರಸ್ತುತ ತ್ಯಾಜ್ಯವನ್ನು ಪ್ರಾಥಮಿಕ ಸಂಗ್ರಹಣಾ ವಾಹನಗಳಿಂದ ದ್ವಿತೀಯ ಹಂತದ ಸಾಗಾಣಿಕಾ ವಾಹನಗಳಿಗೆ ವರ್ಗಾಯಿಸಿ ರಸ್ತೆ ಬದಿ ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ನಿರ್ವಹಿಸಲಾಗುತ್ತಿದೆ. ಪಾಲಿಕೆಯ ರಸ್ತೆಗಳಲ್ಲಿ ಬ್ಲಾಕ್ ಸ್ಪಾಟ್‌ಗಳನ್ನು ತೆರವುಗೊಳಿಸಿ, ರಸ್ತೆಯಲ್ಲಿ ಸೋರುವ ಲೀಚೆಟ್ (ದ್ರವ) ತಡೆದು ತ್ಯಾಜ್ಯ-ಮುಕ್ತ ಪ್ರದೇಶಗಳನ್ನಾಗಿ ಮಾರ್ಪಡಿಸಲು ಯಾಂತ್ರೀಕೃತ ತ್ಯಾಜ್ಯ ವರ್ಗಾವಣಾ ಕೇಂದ್ರಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ.
ರಾಜ್ಯ ಸರ್ಕಾರದ ಅನುದಾನದಲ್ಲಿ ನಿತ್ಯ 150-200 ಮೆಟ್ರಿಕ್ ಟನ್ ಸಾಮರ್ಥ್ಯದ 3 ಟ್ರಾನ್ಸ್‌ಫರ್ ಸ್ಟೇಷನ್‌ಗಳನ್ನು ಸ್ಥಾಪಿಸಲು 40 ಕೋಟಿ ರೂ. ನಿಗದಿಪಡಿಸಿದ್ದು, ಹಾಲಿ ವ್ಯವಸ್ಥೆಯನ್ನು ಉನ್ನತೀಕರಿಸಲಾಗುತ್ತದೆ. ಇದರನ್ವಯ 3 ಟ್ರಾನ್ಸ್‌ಫರ್ ಸ್ಟೇಷನ್ ನಿರ್ಮಿಸಿ ನಿರ್ವಹಿಸಲು ಟೆಂಡರ್ ಆಹ್ವಾನಿಸಿ ಕಾರ್ಯಾದೇಶ ನೀಡಲಾಗಿದೆ. ಕಳೆದ ಮಾರ್ಚ್‌ನಲ್ಲೇ ಈಜಿಪುರದಲ್ಲಿ ಒಂದು ಘಟಕ ಆರಂಭವಾಗಿದ್ದು, ಈಗಿನದು ಎರಡನೆಯದು. ಮುಂಬರುವ ಜನವರಿಯಲ್ಲಿ 3ನೇ ಘಟಕವು ಎಚ್‌ಬಿಆರ್ ಬಡಾವಣೆಯಲ್ಲಿ ಕಾರ್ಯಾರಂಭ ಮಾಡಲಿದೆ.
ಕಾರ್ಯಕ್ರಮದಲ್ಲಿ ಸಚಿವರಾದ ಜಮೀರ್ ಅಹ್ಮದ್ ಖಾನ್, ದಿನೇಶ್ ಗುಂಡೂರಾವ್, ಬಿಬಿಎಂಪಿ ಆಡಳಿತಾಧಿಕಾರಿ ಎಸ್.ಆರ್ ಉಮಾಶಂಕರ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬಿಎಸ್‌ಡಬ್ಲ್ಯುಎಂಎಲ್ ಸಿಇಒ ಡಾ. ಕೆ.ಹರೀಶ್‌ಕುಮಾರ್ ಹಾಗೂ ಮತ್ತಿತರರಿದ್ದರು.
ಸ್ವಯಂಚಾಲಿತ ತ್ಯಾಜ್ಯ ವಿಂಗಡಣೆ ಘಟಕದ ಮುಖ್ಯಾಂಶ:
ಹೊಸದಾಗಿ ಆರಂಭಿಸಲಾದ ಸ್ವಯಂಚಾಲಿತ ತ್ಯಾಜ್ಯ ವಿಂಗಡಣೆ ಘಟಕದಲ್ಲಿ ಪ್ರತಿ ಗಂಟೆಗೆ 5 ಮೆಟ್ರಿಕ್ ಟನ್ ಕಸ ವಿಂಗಡಿಸುವ (ನಿತ್ಯ ಸುಮಾರು 40 ಟನ್) ಸಾಮರ್ಥ್ಯವುಳ್ಳ 2 ಘಟಕಗಳನ್ನು ನಿರ್ಮಿಸಲಾಗಿದೆ. ಈ ಕೇಂದ್ರದಲ್ಲಿ ತ್ಯಾಜ್ಯ ಪ್ರತ್ಯೇಕಿಸುವುದರಿಂದ ಒಣತ್ಯಾಜ್ಯವು ಒಂದೇ ಪ್ರದೇಶದಲ್ಲಿ ಶೇಖರಣೆಯಾಗಲಿದೆ. ಇದರಿಂದ ಚಿಂದಿ ಆಯುವವರು, ಅಸಂಘಟಿತ ತ್ಯಾಜ್ಯ ಸಂಗ್ರಾಹಕರಿಗೆ ಸಹಾಯವಾಗುತ್ತದೆ. ತ್ಯಾಜ್ಯ ವಿಂಗಡಣೆಯಲ್ಲಿ ಪ್ರಗತಿ ಸಾಧಿಸಬಹುದಾಗಿದ್ದು, ಭೂಭರ್ತಿ ಪ್ರದೇಶಗಳ ಮೇಲೆ ಒತ್ತಡವನ್ನು ಕಡಿಮೆ ಮಾಡಬಹುದಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.