ಕುಂಕುಮ ಕಂಡರೆ ಸಿಎಂಗೆ ಆಗೋಲ್ಲ

DSC_8511
Published on

ತುಮಕೂರು:  ಗಣೇಶೋತ್ಸವದಲ್ಲಿ ಕುಣಿಯಲು ನಮಗೂ ಅವಕಾಶ ಮಾಡಿಕೊಡಿ ಎಂದು ಅಧಿಕಾರಿಗಳೇ ಕೇಳುವಂಥ ಸರ್ಕಾರ 2028ರಲ್ಲಿ ಅಧಿಕಾರಕ್ಕೆ ಬರಬೇಕು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಹೇಳಿದರು.

ನಗರದ ನಾಗರಕಟ್ಟೆ ಗಣಪತಿ ವಿಸರ್ಜನಾ ಮಹೋತ್ಸವದಲ್ಲಿ ಶನಿವಾರ ಭಾಗಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್​, ರಾಜ್ಯದ ಕಾಂಗ್ರೆಸ್​ ಸರ್ಕಾರ  ಔರಂಗಜೇಬ್​ ಸರ್ಕಾರದಂತಿದೆ. ಸಿದ್ದರಾಮಯ್ಯ ನನ್ನ ವಿರುದ್ಧ ಎಷ್ಟೇ ಕೇಸ್​ ಹಾಕಿದರೂ ಜಗ್ಗುವುದಿಲ್ಲ. ಇಲ್ಲಿಯವರೇ ನನ್ನ ಮೇಲೆ 71 ಕೇಸ್​ ಆಗಿದೆ. 72ನೇ ಕೇಸ್​ ಕೂಡ ಆಗಲಿ ನೋಡೋಣ ಎಂದು ಸವಾಲು ಹಾಕಿದರು.

ರಾಜ್ಯದಲ್ಲಿ ಭ್ರಷ್ಟಾಚಾರ ತುಂಬಿದೆ. ಅಲ್ಪಸಂಖ್ಯಾತರಿಗೆ ಗುತ್ತಿಗೆಯಲ್ಲೂ ಮೀಸಲಾತಿ, ಅಭಿವೃದ್ಧಿಗೆ ಒತ್ತುಕೊಡಲಾಗಿದೆ. ಪ್ರವಾದಿ ಅಂದರೆ ಶಾಂತಿಧೂತ. ಹಾಗಾದರೆ, ಮದ್ದೂರಿನಲ್ಲಿ ಕಲ್ಲು ಹೊಡೆದವರು ಯಾರು? ಪಾಕ್​ ಧ್ವಜ ಹಾರಿಸಿದವರು ಯಾರು ಸಿದ್ದರಾಮಣ್ಣ? ಎಂದು ಲೇವಡಿ ಮಾಡಿದರು.

ಕುಂಕುಮ ಹಚ್ಚಿಕೊಂಡವರ ಮುಖ ಕಂಡರೆ ಸಿಎಂಗೆ ಆಗೋಲ್ಲ. ಟೋಪಿ ಹಾಕೊಂಡವರನ್ನು ಕಂಡರೆ ಖುಷಿ ಆಗುತ್ತೆ. ಬ್ರಿಟಿಷರನ್ನು ಓಡಿಸಲು ಗಣಪತಿ ಉತ್ಸವ ಆಚರಣೆ ಮಾಡಲಾಯಿತು ಎಂದ ಅವರು, ಇಂತಹ ಭ್ರಷ್ಟ ಹಿಂದು ವಿರೋಧಿ ರಾಜಕಾರಣಿಗಳನ್ನು ಕಿತ್ತೊಗೆಯಲು ಗಣೇಶೋತ್ಸವ ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದರು.

ಈದ್​ ಮಿಲಾದ್​ ಹಬ್ಬದಲ್ಲಿ ಹಿಂದುಗಳು ಒಬ್ಬರಾದರು ಕಲ್ಲು ಎಸೆದಿದ್ದಾರಾ? ನೀವ್ಯಾಕೆ ಕಲ್ಲು ಹಾಕುತ್ತೀರಾ? ಭಾರತದಲ್ಲಿ ಇರಬೇಕಾದರೇ ವಂದೇ ಮಾತರಂ, ಭಾರತ ಮಾತಾ ಕೀ ಜೈ ಎನ್ನಬೇಕು. ಈ ದೇಶದ ಅನ್ನ ತಿನ್ನುತ್ತೀರಾ, ನೀರು ಕುಡಿಯುತ್ತೀರಾ, ಗಾಳಿ ಕುಡಿಯುತ್ತೀರಾ, ಪಾಕಿಸ್ತಾನ ಪರ ಘೋಷಣೆ ಕೂಗುತ್ತೀರಾ? ಇದನ್ನೆಲ್ಲ ಕಂಡೂ ಕಾಣದಂತಿರುವ ಕಾಂಗ್ರೆಸ್​ ಸರ್ಕಾರ ಈ ರಾಜ್ಯವನ್ನು ಪಾಕಿಸ್ತಾನ ಮಾಡಲು ಹೊರಟಿದೆ ಎಂದು ವಾಗ್ದಾಳಿ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net