

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಮ ಒಬ್ಬನೇ ಎಂಬುದು ಗೊತ್ತಿಲ್ಲ ಎಂದು ವಿಧಾನಸಭೆ ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಲೇವಡಿ ಮಾಡಿದರು.
ಹುಬ್ಬಳ್ಳಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಾಂಧಿ ರಾಮ-ಬಿಜೆಪಿ ರಾಮ ಎಂದು ಬೇರೆ ಬೇರೆ ಇಲ್ಲ. ರಾಮಾಯಣ ಕಾಲದಲ್ಲಿ ಬಿಜೆಪಿ ಇರಲಿಲ್ಲ ಎಂದರು.
ಭಾರತೀಯ ಸಂಸ್ಕೃತಿ, ಧರ್ಮ, ವಿಚಾರಗಳ ಬಗ್ಗೆ ಗೌರವ ಇದ್ದವರಿಗೆ ಮಾತ್ರ ಉಪವಾಸ ವ್ರತದ ಮಹತ್ವ ತಿಳಿಯುತ್ತದೆ. ಕಾಂಗ್ರೆಸ್ಸಿಗರಿಗೆ ಇಟಲಿ, ಪೋಪ್ ಮತ್ತು ಚರ್ಚ್ ಬಗ್ಗೆ ಮಾತ್ರ ತಿಳಿದಿದೆ. ಅಂಥವರಿಂದ ರಾಮನ ಬಗ್ಗೆ ಏನನ್ನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಟೀಕಿಸಿದರು.
ವೀರಪ್ಪ ಮೊಯ್ಲಿ ಅವರನ್ನು ನಾವು ಬುದ್ಧಿವಂತರು ಎಂದು ಭಾವಿಸಿದ್ದೆವು. ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ಉಪವಾಸದ ಬಗ್ಗೆ ಅನುಮಾನ ವ್ಯಕ್ತಪಡಿಸಿರುವುದು ಅವರ ಬೌದ್ಧಿಕ ದಿವಾಳಿತನವನ್ನು ಸೂಚಿಸುತ್ತದೆ ಎಂದು ಆರೋಪಿಸಿದರು.