ಜೂ.23 ರಂದು ಜಿಲ್ಲೆಗೆ ಸಿಎಂ,ಡಿಸಿಎಂ ಆಗಮನ

BASANGOUDA DADDAL
BASANGOUDA DADDAL
Published on

ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ ಜತೆಗೆ 371 ಜೆ ದಶಮಾನೋತ್ಸವ ಮತ್ತು ಬುಡಕಟ್ಟು ಉತ್ಸವ ಕಾರ್ಯಕ್ರಮಗಳಿಗೆ ಜೂ.23 ರಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ. ಶಿವಕುಮಾರ ಚಾಲನೆ ನೀಡಲಿದ್ದಾರೆಂದು ಗ್ರಾಮಿಣ ಶಾಸಕ ಬಸನಗೌಡ ದದ್ದಲ್ ಹೇಳಿದರು.

ನಗರದ ಶಾಸಕರ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ತಾಲೂಕಿನ ಯರಗೇರಾ ಗ್ರಾಮದಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದ್ದು, ಒಟ್ಟು 936 ಕೋಟಿ ರೂ. ವೆಚ್ಚದಲ್ಲಿ ನಾನಾ ಅಭಿವೃದ್ದಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಲಿದೆ. ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಎಂದು ರಾಯಚೂರ ವಿವಿಗೆ ಮರುನಾಮಕರಣ ನಡೆಯಲಿದೆ. ಒಂದೂವರೆ ಕೋಟಿ ರೂ ವೆಚ್ಚದಲ್ಲಿ ವಿವಿ ಆವರಣದಲ್ಲಿ 6 ಎಕರೆ ಪ್ರದೇಶದಲ್ಲಿ ಹೊಸದಾಗಿ ಉದ್ಯಾನವನ ನಿರ್ಮಾಣಕ್ಕೆ ಚಾಲನೆ ನೀಡಲಿದ್ದಾರೆ.

ಬುಡಕಟ್ಟು ಉತ್ಸವದ ಮಳಿಗೆಗಳ ನಿರ್ಮಾಣ ಕಾರ್ಯ ಮತ್ತೊಂದೆಡೆ ಫಲಾನುಭವಿಗಳಿಗೆ ಸೌಲಭ್ಯ ವಿತರಣೆಯ ಮಳಿಗೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಬುಡಕಟ್ಟು ಸಮುದಾಯವರ ಕರಕುಶಲ ವಸ್ತುಗಳ ಪ್ರದರ್ಶನಕ್ಕೆ ಮತ್ತು ಅವರ ಕಲೆಗಳ ಅನಾವರಣಕ್ಕೆ ಉತ್ಸವದಲ್ಲಿ ಏರ್ಪಾಡು ಮಾಡಲಾಗಿದೆ ಎಂದರು.

ಅಂಬೇಡ್ಕರ್ ಅಭಿವೃದ್ಧಿ ನಿಗಮ, ಆದಿಜಾಂಬವ ನಿಗಮ, ಬೋವಿ ನಿಗಮ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಬಿಸಿಎಂ ಇಲಾಖೆಗೆ ಸಂಬಂಧಿಸಿದ ನಾನಾ ಕಾರ್ಯಕ್ರಮಗಳಡಿ 100 ಫಲಾನುಭವಿಗಳಿಗೆ ಕಾರು, ಟ್ರಾಕ್ಟರ್ ಸೇರಿದಂತೆ ನಾನಾ ಸೌಲಭ್ಯ ವಿತರಣೆ ಕಾರ್ಯಕ್ರಮ ನಡೆಯಲಿದೆ.

60 ಜನ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ಇದೆ ವೇಳೆ ವಿತರಿಸಲಾಗುವುದು. ಇದರ ಜತೆಗೆ ಸಂವಿಧಾನದ ಅನುಚ್ಚೇದ 371(ಜೆ) ದಶಮಾನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ, 371(ಜೆ) ಹೋರಾಟ ಕಥೆ , ಈ ಮೀಸಲು ಸೌಲಭ್ಯ ಪಡೆದು ಉದ್ಯೋಗ ಗಿಟ್ಟಿಸಿದ ನೌಕರರ ಯಶೋಗಾಥೆ ಮಾಹಿತಿಯ ಮತ್ತು ಹೋರಾಟದ ವಿಭಿನ್ನ ಛಾಯಾಚಿತ್ರಗಳು ಒಳಗೊಂಡ ಪುಸ್ತಕದ ಲೋಕಾರ್ಪಣೆ ನಡೆಯಲಿದೆ ಎಂದರು.

ಸಂಸದ ಜಿ.ಕುಮಾರ ನಾಯಕ ಮಾತನಾಡಿ, ಸಂವಿಧಾನದ ಅನುಚ್ಚೇದ 371 (ಜೆ) ಕಾಯಿದೆ ಅನುಷ್ಠಾನದಿಂದಾಗಿ ಈ ಭಾಗದವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲು ಸೌಕರ್ಯ ಲಭ್ಯವಾಗಿ ನಮ್ಮ ಭಾಗದಲ್ಲಿ ಬಹುದೊಡ್ಡ ಕ್ರಾಂತಿಯಾಗುತ್ತಿದೆ. ಕೆಕೆಆರ್‌ಡಿಬಿ ಅಡಿಯಲ್ಲಿ ಇದುವರೆಗೆ 13,000 ಕೋಟಿ ರೂ ಅನುದಾನ ನೀಡಲಾಗಿದೆ. ಇದನ್ನು ಸಂಭ್ರಮಿಸಲಿಕ್ಕೆ ದಶಮಾನೋತ್ಸವ ಕಾರ್ಯಕ್ರಮ ಮಾಡುತ್ತಿದ್ದೇವೆ. ಜತೆಗೆ ರಾಯಚೂರ ಗ್ರಾಮೀಣ ಕ್ಷೇತ್ರದಲ್ಲಿ ಅಂದಾಜು 936 ಕೋಟಿ ರೂ ವೆಚ್ಚದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ಮತ್ತು ಉದ್ಘಾಟನೆಯು ಮಾನ್ಯ ಮುಖ್ಯಮಂತ್ರಿಗಳಿಂದ ನೆರವೇರಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಂಎಲ್ಸಿ ಎ.ವಸಂತಕುಮಾರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸವರಾಜ ಪಾಟಿಲ ಇಟಗಿ, ಮಲ್ಲಿಕಾರ್ಜುನ ಪಾಟೀಲ್ ಅಬ್ದುಲ್ ಖರೀಂ, ರಜಾಕ್ ಉಸ್ತಾದ್, ಜಯಂತರಾವ್ ಪತಂಗೆ, ರಾಜಶೇಖರ ರಾಮಸ್ವಾಮಿ, ಅಸ್ಲಂ ಪಾಶಾ, ಚಂದ್ರಶೇಖರ ಪಾಟೀಲ, ನಾಗೇಂದ್ರಪ್ಪ ಮಟಮಾರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net