ಪಕ್ಷ ಸಂಘಟನೆಗೆ ಸಿಎಂ, ಡಿಸಿಎಂ ಸೂಚನೆ

SharanaGouda Bayyapura MLC Raichur 2021
??????????
Published on

ಲಿಂಗಸುಗೂರು: ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಅಭಯಹಸ್ತ ನನ್ನ ಮೇಲಿದೆ. ಅವರ ನಿರ್ದೇಶನದಂತೆ ಪ್ರತಿ ತಿಂಗಳು 10 ದಿನ ಕಾಂಗ್ರೆಸ್ ಮುಖಂಡರೊಂದಿಗೆ ಕ್ಷೇತ್ರದಲ್ಲಿ ಪ್ರವಾಸ ಮಾಡಿ ಜನರ ಸಮಸ್ಯೆಗಳಿಗೆ ಸ್ಪಂದಿಸುವುದರ ಜತೆಗೆ ಪಕ್ಷ ಸಂಘಟನೆಯಲ್ಲಿ ತೊಡಗುವುದಾಗಿ ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಪುರ ಹೇಳಿದರು.

ಪಟ್ಟಣದಲ್ಲಿ ಬ್ಲಾಕ್ ಕಾಂಗ್ರೆಸ್‌ನ ವಿವಿಧ ಸಮಿತಿಗಳಿಗೆ ನೇಮಕವಾದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಭಾನುವಾರ ಮಾತನಾಡಿದರು. ಗುಪ್ತಚರ ಮಾಹಿತಿ ಪ್ರಕಾರ ಲಿಂಗಸುಗೂರಿನಲ್ಲಿ ಕಾಂಗ್ರೆಸ್ ನಿಷ್ಕ್ರಿಯಗೊಂಡಿದೆ. ನೀವು ಮುಂದೆ ಬಂದು ಪಕ್ಷವನ್ನು ಸಂಘಟಿಸುವಂತೆ ಸಿಎಂ, ಡಿಸಿಎಂ ಅವರು ತಿಳಿಸಿದ್ದಾರೆ. ಅಲ್ಲದೆ, ಸಿಎಂ ಸಿದ್ದರಾಮಯ್ಯ ಅವರು ಏನೇ ಸಮಸ್ಯೆಗಳಿದ್ದರೂ ನನ್ನನ್ನು ಕೇಳಿ ಎಂದಿದ್ದಾರೆ. ಹೀಗಾಗಿ ಕ್ಷೇತ್ರ ಪ್ರವಾಸ ಕೈಗೊಂಡು ಪಕ್ಷ ಸಂಘಟನೆ ಮಾಡಲು ಮುಂದಾಗಿದ್ದೇವೆ ಎಂದರು.

ಮಾಜಿ ಶಾಸಕ ಡಿ.ಎಸ್.ಹೂಲಗೇರಿ ಅವರು ಚುನಾವಣೆಯಲ್ಲಿ ಗೆದ್ದ ನಂತರ ಒಂದು ಮಾತು, ಸೋತ ನಂತರ ಮತ್ತೊಂದು ಮಾತನಾಡುತ್ತ ಬಂದಿದ್ದಾರೆ. ಪಕ್ಷದಲ್ಲಿ ಗೊಂದಲ ಮೂಡಿದರೆ ಅದನ್ನು ಸರಿಪಡಿಸಬೇಕು. ಆದರೆ, ದ್ವೇಷಿಸಬಾರದು. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಕಾರ್ಯಕರ್ತರು ಹೇಳಿದಂತೆ ನಾವು ಕೆಲಸ ಮಾಡುತ್ತೇವೆ. ಜವಾಬ್ದಾರಿ ಹೊತ್ತು ಕಾಂಗ್ರೆಸ್ ಟಿಕೆಟ್ ತಂದವರಿಗೆ ಎಲ್ಲರೂ ದುಡಿಯೋಣ ಎಂದು ಶರಣಗೌಡ ಬಯ್ಯಪುರ ತಿಳಿಸಿದರು.

ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಪಾಮಯ್ಯ ಮುರಾರಿ ಮಾತನಾಡಿದರು.

ಮುದಗಲ್ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಉಪ್ಪಾರ, ಪರಿಶಿಷ್ಟ ಪಂಗಡ ವಿಭಾಗದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ ಹಾಲಭಾವಿ, ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಪ್ರಕಾಶ ಕುರಿ ಅಧಿಕಾರ ವಹಿಸಿಕೊಂಡರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭೂಪನಗೌಡ ಪಾಟೀಲ್, ಕಾಂಗ್ರೆಸ್ ಮುಖಂಡರಾದ ಅಮರೇಶ ಧಣಿ ಕಾಳಾಪುರ, ಗುಂಡಪ್ಪ ನಾಯಕ, ಡಿಜಿ ಗುರಿಕಾರ, ಲಿಂಗಪ್ಪ ಪರಂಗಿ, ಪ್ರಮೋದ ಕುಲಕರ್ಣಿ, ಸೋಮಶೇಖರ ಐದನಾಳ, ಮಲ್ಲಯ್ಯ ನರಕಲದಿನ್ನಿ, ಆದಪ್ಪ ಮನಗೂಳಿ, ಅನೀಸ್ ಪಾಷಾ, ಕುಮಾರಸ್ವಾಮಿ ಸಾಲ್ಮನಿ, ನಾಗರಾಜ ತಿಪ್ಪಣ್ಣ, ನಾಗರೆಡ್ಡಿ ರಾಠೋಡ, ಲಾಲಪ್ಪ ರಾಠೋಡ, ನಾಗವೇಣಿ ಪಾಟೀಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net