ಲೋಕಾಯುಕ್ತ ತನಿಖೆಗೆ ಸಿಎಂ ಸಹಕಾರ

RVD
Published on

ಶಿರಸಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾಯುಕ್ತ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳಬೇಕಿತ್ತಾದರೂ ಅದನ್ನು ಬಿಟ್ಟು ಲೋಕಾಯುಕ್ತಕ್ಕೆ ಸಹಕರಿಸಿದ್ದಾರೆ ಎಂದು ಸಂಸದೀಯ ಸುಧಾರಣಾ ಆಯೋಗದ ಅಧ್ಯಕ್ಷ ಆರ್. ವಿ. ದೇಶಪಾಂಡೆ ಹೇಳಿದರು.

ನಗರದ ಮಾರಿಕಾಂಬಾ ದೇವಾಲಯಕ್ಕೆ ಬುಧವಾರ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪರ ವಾತಾವರಣವಿದೆ. ಉಪಚುನಾವಣೆಯಲ್ಲಿ ಮೂರೂ ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಗೆಲ್ಲಲಿದ್ದಾರೆ. ನ. 8ರಿಂದ ಶಿಗ್ಗಾಂವಿಗೆ ಪ್ರಚಾರಕ್ಕೆ ತೆರಳುತ್ತಿದ್ದೇನೆ ಎಂದ ಅವರು, ಶಿರಸಿ-ಕುಮಟಾ ರಸ್ತೆ ನಿರ್ಮಾಣಕ್ಕಾಗಿ ಈ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಳಿಸಬೇಕೇ ಬೇಡವೆ ಎಂಬುದನ್ನು ಜಿಲ್ಲಾಡಳಿತವೇ ನಿರ್ಧರಿಸಿಕೊಳ್ಳಬೇಕು. ಆದರೆ, ವಾಹನ ಸಂಚಾರ ಸ್ಥಗಿತಗೊಳಿಸಿ ಕಾಮಗಾರಿ ನಡೆಸುವುದು ಉತ್ತಮ. ಸಾರ್ವಜನಿಕರ ಹಣದಿಂದ ಮಾಡುತ್ತಿರುವ ಈ ರಸ್ತೆ ಉತ್ತಮವಾಗಿ ನಿರ್ಮಾಣವಾಗಬೇಕೆಂದರೆ ವಾಹನ ಸಂಚಾರದ ತೊಂದರೆ ಉಂಟಾಗಬಾರದು. ಸಂಚಾರ ಸ್ಥಗಿತಗೊಂಡ ವೇಳೆ ಪರ್ಯಾಯ ರಸ್ತೆಗಳಲ್ಲಿ ಸಂಚರಿಸುವಾಗ ದೂರ ಜಾಸ್ತಿ ಆಗುವುದು ಸಹಜ. ಜಿಲ್ಲೆಯಲ್ಲಿ ಬಹಳಷ್ಟು ಕಡೆ ರಸ್ತೆ ಹಾಳಾಗಿದೆ. ಕೆಲವೆಡೆ ಸಂಚಾರಕ್ಕೆ ಸಮಸ್ಯೆಯಾಗುತ್ತಿದ್ದು, ಮುಖ್ಯಮಂತ್ರಿಗಳ ಗಮನಕ್ಕೂ ತಂದು ತ್ವರಿತ ರಿಪೇರಿಗೆ ಹಣ ಬಿಡುಗಡೆಗೊಳಿಸುವಂತೆ ವಿನಂತಿಸಿದ್ದೇನೆ ಎಂದರು.

ಕಸ್ತೂರಿ ರಂಗನ್ ವರದಿ ಜಾರಿಯಿಂದ ರಾಜ್ಯದ ಜನ ತೊಂದರೆ ಅನುಭವಿಸುತ್ತಾರೆ. ಈ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರನ್ನೂ ಒಳಗೊಂಡು ಸಭೆ ನಡೆಸಿ ರಾಜ್ಯ ಸರ್ಕಾರ ವಿರೋಧಿಸಿ ಈಗಾಗಲೇ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಕಳಿಸಿದ್ದೇವೆ. ಕಸ್ತೂರಿ ರಂಗನ್ ವರದಿ ಹಾನಿಕಾರಕ, ಅದನ್ನು ವಾಪಸ್ ಪಡೆಯಬೇಕು ಎಂಬ ಕುರಿತು ಕೇಂದ್ರಕ್ಕೆ ಪತ್ರ ಬರೆದಿದ್ದೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net