

ಚಿಕ್ಕಮಗಳೂರು: ಮುಖ್ಯಮಂತ್ರಿಗಳ ಮನಸ್ಸಿನಲ್ಲಿ ಸಚಿವ ಸಂಪುಟ ಪುನರ್ರಚನೆ ಚಿಂತನೆ ಇದ್ದು ದೆಹಲಿಯಲ್ಲಿ ಸಮಾಲೋಚನೆ ನಡೆಸಿದ ಬಳಿಕ ವರಿಷ್ಠರ ಅನುಮತಿ ಪಡೆದು ಪುನರ್ರಚನೆ ಅಥವಾ ವಿಸ್ತರಣೆ ಕಾರ್ಯ ಕೈಗೊಳ್ಳಲಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು.
ತಾಲೂಕಿನ ಬಿಂಡಿಗಾ ದೇವೀರಮ್ಮ ಬೆಟ್ಟದಲ್ಲಿ ಶನಿವಾರ ದೇವರ ದರ್ಶನ ಪಡೆದ ಬಳಿಕ ಸುದ್ದಿಗಾರರ ಜತೆ ಮಾತನಾಡಿ, ದೀಪಾವಳಿ ನಂತರ ಸಚಿವ ಸಂಪುಟದ ವಿಸ್ತರಣೆ ಬಹುತೇಕ ಸಾಧ್ಯತೆ ಇದ್ದು ಕೇಂದ್ರದ ವರಿಷ್ಠರು ಬಿಹಾರದ ರಾಜಕೀಯ ವಿದ್ಯಮಾನದಲ್ಲಿ ತೊಡಗಿರುವುದರಿಂದ ಹಬ್ಬದ ನಡುವೆ ದೆಹಲಿ ಭೇಟಿ ಸಾಧ್ಯವಾಗಲಿಲ್ಲ. ಸಿಎಂ ದೆಹಲಿಗೆ ತೆರಳಿ ವರಿಷ್ಠರ ಜತೆ ಚರ್ಚಿಸಿದ ನಂತರ ಈ ಕಾರ್ಯ ಆರಂಭವಾಗುತ್ತದೆ. ಚಿಕ್ಕಮಗಳೂರಿಗೂ ಶೀಘ್ರದಲ್ಲಿ ಉಸ್ತುವಾರಿ ಸಚಿವರು ಬರುತ್ತಾರೆ ಎಂದರು. ಈ ಜಿಲ್ಲೆಯವರೆ ಉಸ್ತುವಾರಿ ಸಚಿವರಾಗುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದನ್ನು ನಾನು ಹೇಳಲು ಸಾಧ್ಯವಿಲ್ಲ. ಮುಖ್ಯಮಂತ್ರಿಗಳ ತೀರ್ಮಾನ ಎಂದರು.