

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ತಾಲೂಕಿನ ಜಯಪುರ ಹೋಬಳಿಯ ಕೆ.ಸಾಲುಂಡಿ ಗ್ರಾಮಕ್ಕೆ ಗುರುವಾರ ಸಂಜೆ ಭೇಟಿ ನೀಡಿ ಕಲುಷಿತ ನೀರು ಕುಡಿದು ಮೃತಪಟ್ಟ ಕನಕರಾಜು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಅವರ ನಿವಾಸಕ್ಕೆ ಭೇಟಿ ನೀಡಿದ ಸಿಎಂ, ಸರ್ಕಾರದಿಂದ 5 ಲಕ್ಷ ರೂ. ಪರಿಹಾರ ಘೋಷಿಸಿದರು. ಜತೆಗೆ, ಮೃತ ಕಾಂತರಾಜು ಸಹೋದರ ರವಿಗೆ ಕೆಲಸ ಕೊಡಿಸುವ ಭರವಸೆ ನೀಡಿದರು. ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು ವೈಯಕ್ತಿಕವಾಗಿ ಪರಿಹಾರಧನ ನೀಡಿದರು. ಗ್ರಾಮದಲ್ಲಿ ತಾತ್ಕಾಲಿಕವಾಗಿ ಆರಂಭಿಸಲಾಗಿರುವ ತಾತ್ಕಾಲಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೋಗಾದಿ ಪಟ್ಟಣ ಪಂಚಾಯಿತಿಯ ಮೂವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದರು.
ಕುಡಿಯುವ ನೀರು ಪೂರೈಕೆ ಜವಾಬ್ದಾರಿ ಹೊಂದಿರುವ ಬೋಗಾದಿ ಪಟ್ಟಣ ಪಂಚಾಯಿತಿ ಅಧಿಕಾರಿಗಳ ಅಸಡ್ಡೆಯಿಂದಲೇ ಗ್ರಾಮಕ್ಕೆ ಕಲುಷಿತ ನೀರು ಪೂರೈಕೆಯಾಗಿದೆ ಎಂದು ಜಿಲ್ಲಾಧಿಕಾರಿ ವರದಿ ನೀಡಿದ್ದಾರೆ. ಈ ರೀತಿ ಪೂರೈಕೆಯಾದ ಕಲುಷಿತ ನೀರನ್ನು ಕುಡಿದು ಗ್ರಾಮದ 90ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿ, ಒಬ್ಬರು ಮೃತಪಟ್ಟಿದ್ದಾರೆ. ಈ ಘಟನೆಗೆ ಕಾರಣವಾಗಿರುವ ಬೋಗಾದಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ, ಕಾರ್ಯಪಾಲಕ ಇಂಜಿನಿಯರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸೇರಿ ಮೂವರನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಗ್ರಾಮದಲ್ಲಿ ಹೊಸ ಕೊಳವೆಬಾಯಿ ಕೊರೆಸಿ ಶುದ್ಧ ನೀರು ಪೂರೈಕೆ ಮಾಡಲಾಗುವುದು ಎಂದರು.
ಜಿಲ್ಲೆಯ ಎರಡು ಕಡೆ ಕಾಲರಾ ಪ್ರಕರಣ ವರದಿಯಾಗಿದ್ದು, ಕಲುಷಿತ ನೀರು ಪೂರೈಕೆಯಾಗದಂತೆ ಕ್ರಮ ತೆಗೆದುಕೊಳ್ಳಬೇಕು. ನಿತ್ಯ ನೀರಿನ ಪರೀಕ್ಷೆ ನಡೆಸಬೇಕು. ಕಾಲರಾದಂತಹ ಸಾಂಕ್ರಾಮಿಕ ರೋಗದ ಬ್ಯಾಕ್ಟೇರಿಯಾ ನೀರಿನಲ್ಲಿ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಿಎಂ ತಿಳಿಸಿದರು.
ಎಲ್ಲೆಲ್ಲಿ ನೀರು ಕಲುಷಿತವಾಗುವ ಸಾಧ್ಯತೆ ಇದೆಯೋ ಅದನ್ನು ಸರಿಪಡಿಸಲು ಎಲ್ಲ ಜಿಲ್ಲಾಧಿಕಾರಿಗಳಿಗೂ ನಿರ್ದೇಶನ ನೀಡಲಾಗಿದೆ. ಶುದ್ಧವಾದ ನೀರು ಕೊಡದಿದ್ದರೆ ಅಲ್ಲಿನ ಜಿಲ್ಲಾ ಪಂಚಾಯಿತಿ ಸಿಇಒ ಅವರನ್ನೇ ಅಮಾನತು ಮಾಡಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ ಎಂದರು.
ಸಚಿವ ಡಾ.ಎಚ್.ಸಿ.ಮಹದೇವಪ್ಪ, ಮುಡಾ ಅಧ್ಯಕ್ಷ ಕೆ.ಮರಿಗೌಡ, ಮುಖಂಡರಾದ ಎಂ.ಕೆ.ಸೋಮಶೇಖರ್, ಎಂ.ಲಕ್ಷ್ಮಣ್ ಇದ್ದರು.
ಕುಟುಂಬಕ್ಕೆ ದಿಕ್ಕಿಲ್ಲದಂತಾಗಿದೆ. ಉದ್ಯೋಗ ಕೊಡಿಸಿ ಎಂದು ಮೃತ ಕನಕರಾಜು ತಾಯಿ ರತ್ನಮ್ಮ ಸಿಎಂ ಮುಂದೆ ಕಣ್ಣೀರು ಹಾಕಿದರು.
ನನ್ನ ಗಂಡನೂ 3 ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಟುಂಬಕ್ಕೆ ದಿಕ್ಕಿಲ್ಲದಂತಾಗಿದೆ. ದೊಡ್ಡ ಮಗ ರವಿಗೆ ಕೆಲಸವನ್ನು ಕೊಡಿಸಿ, ನಮ್ಮ ಜಮೀನಿನ ವ್ಯಾಜ್ಯ ನಡೆಯುತ್ತಿದ್ದು, ಅದನ್ನು ಸರಿಮಾಡಿಸಿ ಕೊಡಿ ಎಂದು ಮನವಿ ಮಾಡಿದರು.
ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು. ಸ್ವಚ್ಛತೆ ಕಾಪಾಡಬೇಕು ಎಂದು ಊರಿನ ಮುಖಂಡರು ಸಿಎಂಗೆ ಮನವಿ ಪತ್ರ ನೀಡಿದರು. ಮುಖ್ಯಮಂತ್ರಿ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದರು.