

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಶುಕ್ರವಾರ ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ಜನಜೀವನ ಅಕ್ಷರಶಃ ತತ್ತರಿಸಿದ್ದು, ಮಳೆ ಹಾನಿ ವೀಕ್ಷಿಸಲು ಖುದ್ದು ಸಿಎಂ ಬಿ.ಎಸ್.ಯಡಿಯೂರಪ್ಪ ಶನಿವಾರ ಮಧ್ಯಾಹ್ನ ನಗರ ಪ್ರವಾಸ ಕೈಗೊಂಡಿದ್ದಾರೆ.
ಹೊಸಕೆರೆಹಳ್ಳಿ, ದತ್ತಾತ್ರೇಯ ಬಡಾವಣೆ ಸೇರಿದಂತೆ ಹಲವು ಪ್ರದೇಶಗಳಿಗೆ ಸಿಎಂ ಭೇಟಿ ನೀಡಲಿದ್ದು, ಆರ್.ಅಶೋಕ್ ಮತ್ತು ಅಧಿಕಾರಿಗಳು ಸಾಥ್ ನೀಡಿದ್ದಾರೆ.
ಶುಕ್ರವಾರ ಸುರಿದ ಮಳೆಗೆ ಹಲವು ಪ್ರದೇಶ ಜಲಾವೃತವಾಗಿದ್ದು, ಕಾರು-ಬಸ್ಗಳೂ ಕೊಚ್ಚಿಹೋದವು. ಸಾವಿರಾರು ಮನೆಗಳಿಗೆ ನೀರು ನುಗ್ಗಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಈಗಾಗಲೇ ಸಚಿವರು, ಶಾಸಕರು, ಅಧಿಕಾರಿಗಳ ತುರ್ತುಸಭೆಯನ್ನು ಸಿಎಂ ನಡೆಸಿದ್ದಾರೆ. ನೀರು ನುಗ್ಗಿದ ಪ್ರದೇಶಗಳಿಗೆ ಭೇಟಿ ಮಾಡಿ ಪರಿಸ್ಥಿತಿ ಅವಲೋಕಿಸಲು ಸ್ವತಃ ಅವರೇ ಸ್ಥಳಕ್ಕೆ ಭೇಟಿ ನೀಡಿದ್ದಾರೆ.