ಸಿಎಂಗೆ ಬಿಎಸ್‌ವೈ ಕಡೆಯಿಂದ ಶಿಫಾರಸು ಮಾಡಿಸಿಲ್ಲ: ಹೊಸಪೇಟೆಯಲ್ಲಿ ಸಚಿವ ಆನಂದ ಸಿಂಗ್ ಹೇಳಿಕೆ

Hospet MLA Anand Singh Office
ಹೊಸಪೇಟೆಯ ರಾಣಿಪೇಟೆಯಲ್ಲಿನ ಸಚಿವ ಆನಂದ ಸಿಂಗ್ ಕಚೇರಿಯಲ್ಲಿ ಕೆಲಸದಲ್ಲಿ ತೊಡಗಿರುವ ಸಿಬ್ಬಂದಿ.
Published on

ಹೊಸಪೇಟೆ: ಬೇಡಿಕೆಯ ಖಾತೆ ಕೊಡಿಸುವಂತೆ ಸಿಎಂಗೆ ಬಿಎಸ್‌ವೈ ಕಡೆಯಿಂದ ಶಿಫಾರಸು ಮಾಡಿಸಿಲ್ಲ. ನನ್ನ ಮನವಿ ಏನಿದೆಯೋ ಅದನ್ನು ಬಸವರಾಜ ಬೊಮ್ಮಾಯಿ ಬಳಿ ನೇರವಾಗೇ ಹೇಳಿರುವೆ. ಖಾತೆ ವಿಚಾರವಾಗಿ ನಾನು ದೆಹಲಿಗೆ ಹೋಗುವುದಿಲ್ಲ. ರಾಜಕೀಯವಾಗಿ ಸದ್ಯಕ್ಕೆ ನಾನೇನೂ ಮಾತಾಡಲ್ಲ. ನೂತನ ಜಿಲ್ಲೆ ಧ್ವಜಾರೋಹಣ ನೆರವೇರಿಸುವ ಜವಾಬ್ದಾರಿ ನನಗೆ ನೀಡಿದ್ದು, ಅದು ಮುಗಿದ ನಂತರ ಬೆಂಗಳೂರಿಗೆ ತೆರಳುವೆ ಎಂದು ಸಚಿವ ಆನಂದ ಸಿಂಗ್ ಹೇಳಿದರು.

ಬೆಂಗಳೂರಿನಿಂದ ಶುಕ್ರವಾರ ಮಧ್ಯಾಹ್ನ ನಗರದ ವೇಣುಗೋಪಾಲ ದೇವಸ್ಥಾನಕ್ಕೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು. ಯಡಿಯೂರಪ್ಪ ಬಳಿ ಕೇಳಲು ಏನೂ ಉಳಿದಿಲ್ಲ. ಕೇಳಿದ್ದಕ್ಕಿಂತ ಅವರು ಹೆಚ್ಚೇ ನೀಡಿದ್ದಾರೆ. ಆಶೀರ್ವಾದ ಪಡೆಯಲು ಅವರನ್ನು ಭೇಟಿಯಾಗಿದ್ದೆ. ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡ ಎಂದು ಅವರೂ ಹೇಳಿದ್ದಾರೆ. ಅದರಂತೆ ನಾನೂ ಸ್ವಲ್ಪ ದಿನ ಕಾಯುವೆ ಎಂದರು.

ಕ್ಷೇತ್ರದ ಜನತೆ ಹಾಗೂ ಯಡಿಯೂರಪ್ಪ ಋಣ ತೀರಿಸಲು ಸಾಧ್ಯವಿಲ್ಲ. ಸುವರ್ಣ ಅಕ್ಷರದಲ್ಲಿ ಬರೆದಿಡುವ ಕೆಲಸವನ್ನು ಬಿಎಸ್‌ವೈ ಮಾಡಿಕೊಟ್ಟಿದ್ದಾರೆ. ನೂತನ ಜಿಲ್ಲೆ ಘೋಷಿಸುವ ಮೂಲಕ ದೊಡ್ಡ ಕೊಡುಗೆ ನೀಡಿದ್ದಾರೆ. ಜಿಲ್ಲೆ ವಿಚಾರ ಬಂದಾಗ ಪ್ರತಿಕ್ಷಣಕ್ಕೂ ಯಡಿಯೂರಪ್ಪ ನೆನಪಾಗುತ್ತಾರೆ.

ಶಾಸಕರ ಕಚೇರಿ ಆರಂಭ: ಆನಂದಸಿಂಗ್ ಜತೆಗೆ ಬೊಮ್ಮಾಯಿ ಹಾಗೂ ಬಿಎಸ್‌ವೈ ನಡೆಸಿದ ಸಂಧಾನ ಯಶಸ್ವಿಯಾದಂತೆ ಕಾಣುತ್ತಿದ್ದು, ನಗರದ ರಾಣಿಪೇಟೆಯಲ್ಲಿನ ಶಾಸಕರ ಕಚೇರಿಯನ್ನು ಶುಕ್ರವಾರ ತೆರೆಯಲಾಗಿದೆ. ಖಾತೆ ಬಗ್ಗೆ ತೀವ್ರ ಅಸಮಾಧಾನಗೊಂಡು ಮೂರು ದಿನಗಳ ಹಿಂದೆ ಕಚೇರಿ ನಾಮಫಲಕ ತೆರವುಗೊಳಿಸಿ, ಕಚೇರಿಗೆ ಬಾರದಂತೆ ಸಿಬ್ಬಂದಿಗೆ ಸೂಚಿಸಿದ್ದರು ಎನ್ನಲಾಗಿತ್ತು. ಸದ್ಯ ಕಚೇರಿಯನ್ನು ಮಾತ್ರ ತೆರೆದಿದ್ದು, ಕಚೇರಿ ಕೆಲಸದಲ್ಲಿ ಸಿಬ್ಬಂದಿ ತೊಡಗಿದ್ದಾರೆ. ಜನರೂ ಇಲ್ಲಿಗೆ ಬರುತ್ತಿರುವುದು ಶುಕ್ರವಾರ ಕಂಡುಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net