

ಬೆಂಗಳೂರು: ರಾಜ್ಯಸಭೆ ಚುನಾವಣೆ ಟಿಕೆಟ್ ಘೋಷಣೆ ವೇಳೆ ಹೈಕಮಾಂಡ್ ನೀಡಿದ ಶಾಕ್ನಿಂದ ಜಾಗೃತರಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಾನ ಪರಿಷತ್ ಚುನಾವಣೆಯಲ್ಲಿ ಎಚ್ಚರಿಕೆ ಹೆಜ್ಜೆ ಇಡಲು ಮುಂದಾಗಿದ್ದಾರೆ. ಒಂದೆಡೆ ಮಾತು ಉಳಿಸಿಕೊಳ್ಳುವ ಅನಿವಾಯತೆ, ಇನ್ನೊಂದೆಡೆ ಪಕ್ಷದೊಳಗಿನ ಆಕಾಂಕ್ಷಿತರನ್ನು ನಿಭಾಯಿಸಬೇಕು. ಮತ್ತೊಂದೆಡೆ ಹೈಕಮಾಂಡ್ ಮನವೊಲಿಕೆ ಮಾಡಿ ವಿಶ್ವಾಸ ಉಳಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿರುವ ಬಿಎಸ್ವೈಗೆ ಪರಿಷತ್ ಚುನಾವಣೆ ರಾಜಕೀಯ ಅಗ್ನಿ ಪರೀಕ್ಷೆಯಾಗಿದ್ದು, ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.
ಬಿಜೆಪಿ 4 ಸ್ಥಾನಗಳನ್ನು ಸುಲಭವಾಗಿ ಗೆಲ್ಲಲು ಅವಕಾಶವಿದೆ. ಆದರೆ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ಪತನಕ್ಕೆ ನಾಂದಿಹಾಡಿ ಬಿಜೆಪಿ ಸರ್ಕಾರ ರಚನೆಗೆ ಕಾರಣರಾದ ಮಾಜಿ ಸಚಿವರಾದ ಆರ್. ಶಂಕರ್, ಎಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಅವರಿಗೆ ಟಿಕೆಟ್ ಕೊಡಿಸಲೇಬೇಕಾಗಿರುವ ಒತ್ತಡ ಸಿಎಂಗಿದೆ. ಕೊಟ್ಟ ಮಾತು ಉಳಿಸಿಕೊಳ್ಳಲು ಸಿಎಂ ಹರಸಾಹಸ ಮಾಡುತ್ತಿದ್ದಾರೆ. ಆದರೆ ಈ ಮೂವರಿಗೆ ಟಿಕೆಟ್ ನೀಡುವ ಕುರಿತು ಪಕ್ಷದೊಳಗೆ ಅಪಸ್ವರ ಎದ್ದಿದೆ. ಒಂದು ವೇಳೆ ಹೈಕಮಾಂಡ್, ಬಿಎಸ್ವೈ ಅವರನ್ನು ನಿರ್ಲಕ್ಷಿಸಿ, ಬೇರೆಯವರಿಗೆ ಟಿಕೆಟ್ ನೀಡಿದರೆ, ಯಡಿಯೂರಪ್ಪ ಅವರನ್ನು ಟಾರ್ಗೆಟ್ ಮಾಡಿದೆ ಎಂದರ್ಥ ಎನ್ನುವಂತೆ ಚರ್ಚೆಗಳು, ಪಕ್ಷದೊಳಗೆ ನಡೆಯುತ್ತಿವೆ. ರಾಜ್ಯಸಭೆ ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ಆಗಿರುವ ಹಿನ್ನಡೆಯನ್ನು ವಿಧಾನ ಪರಿಷತ್ ಚುನಾವಣೆಯಲ್ಲಿ ಸರಿಪಡಿಸಿಕೊಳ್ಳಬೇಕು ಎನ್ನುವ ಧಾವಂತದಲ್ಲಿರುವ ಬಿಎಸ್ವೈ ಪಡೆಗೆ ಹೈಕಮಾಂಡ್ ಎಷ್ಟರ ಮಟ್ಟಿಗೆ ಮಣೆ ಹಾಕಲಿದೆ ಎನ್ನುವುದು ಚರ್ಚೆಗೆ ಗ್ರಾಸವಾಗಿದೆ. ಎಲ್ಲವನ್ನು ಸಮಚಿತ್ತದಿಂದ ಗಮನಿಸುತ್ತಿರುವ ಬಿಎಸ್ವೈ, ಮುಂದೆ ಇದೆಲ್ಲವನ್ನು ಯಾವ ರೀತಿ ನಿಭಾಯಿಸುತ್ತಾರೆ ಕಾದು ನೋಡಬೇಕು.
ರಾಜ್ಯಸಭೆಗೆ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸುವ ಮೂಲಕ ಉಳಿದ ರಾಜಕೀಯ ಪಕ್ಷಗಳಿಗಿಂತಲೂ ಬಿಜೆಪಿ ವಿಭಿನ್ನವಾಗಿ ಚಿಂತಿಸುತ್ತದೆ ಎನ್ನುವುದನ್ನು ತೋರಿಸಿಕೊಟ್ಟಿದೆ. ಪರಿಷತ್ಗೂ ಇದು ಮುಂದುವರಿಯಬಹುದು. ಈಗಲೇ ಎಲ್ಲವನ್ನು ಊಹಿಸುವುದು ಕಷ್ಟ. |ನಳೀನ್ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷ
ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯ ನಾಮಪತ್ರ ತಿರಸ್ಕೃತವಾಗಿದ್ದು, ಉಳಿದಂತೆ ನಾಲ್ವರ ಅವಿರೋಧ ಆಯ್ಕೆಯ ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ. ಕಾಂಗ್ರೆಸ್ನ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿಯ ಈರಣ್ಣ ಕಡಾಡಿ, ಅಶೋಕ್ ಗಸ್ತಿ ಹಾಗೂ ಜೆಡಿಎಸ್ನ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ನಾಮಪತ್ರಗಳು ಕ್ರಮಬದ್ಧವಾಗಿವೆ. ಸೂಚಕರ ಸಹಿ ಇಲ್ಲದ ಪಕ್ಷೇತರ ಅಭ್ಯರ್ಥಿ ಸಂಗಮೇಶ ಚಿಕ್ಕನರಗುಂದ ಅವರ ನಾಮಪತ್ರ ತಿರಸ್ಕೃತವಾಗಿದೆ. ಶುಕ್ರವಾರ ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯ ದಿನವಾಗಿದ್ದು, ಅಂದು ನಾಲ್ವರ ಅವಿರೋಧ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಲಾಗುತ್ತದೆ.
ರಾಜ್ಯಸಭೆ ಚುನಾವಣೆಗೆ ಪಕ್ಷದ ಕಾರ್ಯಕರ್ತರಿಗೆ ಅವಕಾಶ ನೀಡಿದಂತೆ ವಿಧಾನಪರಿಷತ್ಗೂ ಪಕ್ಷದ ಸಾಮಾನ್ಯ ಕಾರ್ಯಕರ್ತರು ಹಾಗೂ ಪ್ರತಿಭಾವಂತರನ್ನೇ ಆಯ್ಕೆ ಮಾಡಲಾಗುವುದು. |ಕೆ.ಎಸ್.ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಸಚಿವ
ಮುಖ್ಯಮಂತ್ರಿ ಭೇಟಿಯಾದ ಎಂಟಿಬಿ
ಬೆಂಗಳೂರು: ರಾಜ್ಯಸಭೆಗೆ ಬಿಜೆಪಿ ಹೈಕಮಾಂಡ್ ಕಾರ್ಯಕರ್ತರನ್ನು ಆಯ್ಕೆ ಮಾಡುತ್ತಿದ್ದಂತೆ ವಲಸಿಗರಲ್ಲಿ ಆತಂಕವಾಗಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೇಲೆ ಒತ್ತಡ ಹೆಚ್ಚಿಸಿದ್ದಾರೆ.
ಬುಧವಾರ ಮುಖ್ಯಮಂತ್ರಿ ಗೃಹ ಕಚೇರಿಯಲ್ಲಿ ಸಿಎಂ ಭೇಟಿಯಾದ ಮಾಜಿ ಸಚಿವ ಎಂ.ಟಿ.ಬಿ. ನಾಗರಾಜ್ ವಿಧಾನ ಪರಿಷತ್ ಟಿಕೆಟ್ಗೆ ಸಂಬಂಧಿಸಿದಂತೆ ಒತ್ತಡ ತಂದರು.
ಉಪ ಚುನಾವಣೆಯಲ್ಲಿ ಆಗಿರುವ ಅನ್ಯಾಯಕ್ಕೆ ಪರಿಷತ್ನಲ್ಲಿ ಟಿಕೆಟ್ ನೀಡುವ ಮೂಲಕ ಸರಿದೂಗಿಸಬೇಕು ಎಂದು ಒತ್ತಾಯಿಸಿದರು ಎನ್ನಲಾಗಿದೆ. ಸಿಎಂ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಾಗರಾಜ್, ಪರಿಷತ್ ಟಿಕೆಟ್ ಬಗ್ಗೆ ನಾನು ಸಿಎಂ ಜತೆ ಚರ್ಚೆ ಮಾಡಿಲ್ಲ. ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದ್ದೇನೆ. ಕ್ಷೇತ್ರದ ಕೆಲ ಅಧಿಕಾರಿಗಳ ಬಗ್ಗೆಯೂ ಮಾತನಾಡುವುದಿತ್ತು ಎಂದರು. ಅಭ್ಯರ್ಥಿಗಳ ಆಯ್ಕೆ ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ. ಹೈಕಮಾಂಡ್ ತೀರ್ವನಕ್ಕೆ ನಾವೆಲ್ಲರೂ ಬದ್ಧವಾಗಿರುತ್ತೇವೆ ಎಂದು ಸ್ಪಷ್ಟಪಡಿಸಿದರು.
ಅವಕಾಶ ಸಿಕ್ಕಾಗ ಮಂತ್ರಿ: ಎಂಎಲ್ಸಿಯಾಗಿ ಮಂತ್ರಿ ಆಗಲೇಬೇಕೆಂದು ಬಯಕೆ ಇಲ್ಲ. ಅವಕಾಶ ಸಿಕ್ಕಾಗ ಹಾಗೂ ಹಣೆಯಲ್ಲಿ ಬರೆದಿದ್ದರೆ ಮಂತ್ರಿಯಾಗುತ್ತೇನೆ ಎಂದರು.
ಯಾರ ಕೈಗೆ ಟಿಕೆಟ್?
ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಾಲಿಗೆ ಲಭ್ಯವಾಗುವ ಎರಡು ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕೆಂದು ತೀರ್ವನಿಸಲು ಕಾಂಗ್ರೆಸ್ ನಾಯಕರು ಶುಕ್ರವಾರ ಸಭೆ ನಡೆಸಲಿದ್ದಾರೆ.
ವಿಧಾನಸಭೆಯಿಂದ ವಿಧಾನಪರಿಷತ್ಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಈಗಿರುವ ಶಾಸಕ ಬಲದ ಮೇಲೆ ಎರಡು ಸ್ಥಾನಗಳನ್ನಷ್ಟೇ ಗೆಲ್ಲಲು ಸಾಧ್ಯ. ಪರಿಸ್ಥಿತಿ ಹೀಗಿರುವಾಗ ಆಕಾಂಕ್ಷಿಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದಾರೆ. ಪಕ್ಷದ ಹಿರಿಯ ನಾಯಕರು ತಮ್ಮ ಬಳಗದವರಿಗೆ ಅವಕಾಶ ಕೊಡಿಸಲು ಪ್ರಯತ್ನ ನಡೆಸಿದ್ದಾರೆ. ದೆಹಲಿ ಮಟ್ಟಕ್ಕೂ ತಮ್ಮ ಕೋರಿಕೆ ಇಟ್ಟಿದ್ದಾರೆ. ಇನ್ನು ಈಗಾಗಲೆ ಪರಿಷತ್ನಲ್ಲಿ ಅವಕಾಶ ಪಡೆದವರು ಮತ್ತೊಮ್ಮೆ ಅವಕಾಶ ಕೋರಿ ಪಕ್ಷಕ್ಕೆ ಇಕ್ಕಟ್ಟು ಸೃಷ್ಟಿಸಿದ್ದಾರೆ. ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಕ್ಕೆ ಒಂದೊಂದು ಸ್ಥಾನ ಹಂಚಿಕೆ ಮಾಡಲಾಗುತ್ತದೆ ಎಂಬ ಮಾತು ಇಷ್ಟು ದಿನ ಬಲವಾಗಿ ಕೇಳಿಬರುತ್ತಿತ್ತು. ಆದರೆ, ಪಕ್ಷದ ತೀರ್ವನದಿಂದ ಅವಕಾಶ ಕಳೆದುಕೊಂಡವರು ರಾಜಕೀಯ ಅಸ್ತಿತ್ವಕ್ಕಾಗಿ ಪರಿಷತ್ ಸ್ಥಾನ ಗಿಟ್ಟಿಸುವ ಪ್ರಯತ್ನದಲ್ಲಿದ್ದಾರೆ.
ಜೂ.12 ಅಥವಾ 13ರಂದು ಪಕ್ಷದ ಪ್ರಮುಖ ನಾಯಕರು ಸಭೆ ನಡೆಸಿ ತಂತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ. ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಶಿಫಾರಸನ್ನು ಎಐಸಿಸಿ ಒಪ್ಪಿಗೆಗೆ ಕಳಿಸಲಿದ್ದಾರೆ.
ಆಕಾಂಕ್ಷಿಗಳು: ನಿವೇದಿತ್ ಆಳ್ವ, ನಸೀರ್ ಅಹ್ಮದ್, ಐವಾನ್ ಡಿಸೋಜಾ, ಜಬ್ಬಾರ್, ಎಂ. ರಾಮಚಂದ್ರಪ್ಪ, ಸಲೀಂ ಅಹ್ಮದ್, ಕೃಪ ಆಳ್ವ, ಜಯಮಾಲಾ, ರಾಣಿ ಸತೀಶ್, ಜಯಮ್ಮ, ರತ್ನಪ್ರಭಾ, ಎಂ.ಸಿ.ವೇಣುಗೋಪಾಲ್, ಎಚ್.ಎಂ.ರೇವಣ್ಣ, ಎಂ.ಆರ್.ಸೀತಾರಾಂ, ಮುದ್ದ ಹನುಮೇಗೌಡ, ಉಗ್ರಪ್ಪ, ನಟರಾಜ ಗೌಡ, ಮಾಲೂರು ನಾರಾಯಣ ಸ್ವಾಮಿ, ಮೋಹನ್ ಬಾಬು.