

ಬೆಂಗಳೂರು: ನಿನ್ನೆ ಮತ್ತು ಮೊನ್ನೆಗೆ ಹೋಲಿಸಿದರೆ, ಇಂದು ಕರೊನಾ ಸೋಂಕಿತರ ಸಂಖ್ಯೆ ಇಳಿಕೆಯಾಗಿರುವುದು ಸ್ವಲ್ಪ ಸಮಾಧಾನ ತಂದಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದರು.
ಸೋಂಕಿತರ ಸಂಖ್ಯೆ ಇಳಿಕೆ
ಶನಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಕೋವಿಡ್-19 ನಿರ್ವಹಣೆ ಕುರಿತಂತೆ ಸಚಿವರು ಮತ್ತು ಅಧಿಕಾರಿಗಳ ಜತೆ ಸಭೆ ನಡೆಸಿದ್ದೇವೆ. ಮೊನ್ನೆ ಒಂದೇ ದಿನ 36 ಹಾಗೂ ನಿನ್ನೆ 44 ಪ್ರಕರಣಗಳು ವರದಿಯಾಗಿದ್ದವು. ಆದರೆ, ಇಂದು 12 ಪ್ರಕರಣಗಳು ಮಾತ್ರ ಧೃಡವಾಗಿವೆ. ಹೀಗಾಗಿ ಇಂದು ಸ್ವಲ್ಪ ಸಮಾಧಾನ ತಂದಿದೆ ಎಂದರು.
ದ್ವಿಚಕ್ರ ವಾಹನ ಸಂಚಾರಕ್ಕೆ ಅವಕಾಶ
ಸಭೆಯಲ್ಲಿ ಏಪ್ರಿಲ್ 20ರ ಬಳಿಕ ತೆಗೆದುಕೊಳ್ಳಬೇಕಾದ ಕ್ರಮದ ಕುರಿತು ಚರ್ಚೆ ನಡೆಸಲಾಯಿತು. ಕಂಟೈನ್ಮೆಂಟ್ ಜೋನ್ನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಅವರ ಮನೆಗೆ ಆಹಾರ ಸಾಮಗ್ರಿಗಳನ್ನು ಒದಗಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಕಟೈನ್ಮೆಂಟ್ ಜೋನ್ ಇಲ್ಲದ ಪ್ರದೇಶದಲ್ಲಿ ದ್ವಿಚಕ್ರ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುವುದೆಂದು ತಿಳಿಸಿದರು.
ಮೇ 3 ರವರೆಗೂ ನಿಷೇದಾಜ್ಞೆ
ಮೇ 3ರವರೆಗೆ ಪಾಸ್ ಮುಂದುವರೆಯಲಿದೆ. ಅಗತ್ಯವಸ್ತುಗಳ ಸಾಗಾಟಕ್ಕೆ ಯಾವುದೇ ತೊಂದರೆ ಇಲ್ಲ. ಜಲ್ಲಿ ಹಾಗೂ ಮರಳು ಸಾಗಾಟಕ್ಕೂ ತೊಂದರೆ ಇಲ್ಲ. ಎಸ್ಇಜೆಡ್ನಲ್ಲಿ ಕೈಗಾರಿಕೆಗಳ ಆರಂಭಕ್ಕೆ ಯಾವುದೇ ಅಡ್ಡಿ ಇಲ್ಲ. ಅಂತರಾಜ್ಯ ಓಡಾಟಕ್ಕೂ ಅನುಮತಿ ಇಲ್ಲ. ಮೇ 3 ರವರೆಗೂ ನಿಷೇದಾಜ್ಞೆ ಮುಂದುವರೆಯಲಿದೆ ಎಂದರು.
ಕಟ್ಟಡ ನಿರ್ಮಾಣಕ್ಕೆ ಅನುಮತಿ
ಕಟ್ಟಡ ಕಾರ್ಮಿಕರ ಅನುಕೂಲಕ್ಕಾಗಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ. ಏಪ್ರಿಲ್ 20ರ ಬಳಿಕ ಕಟ್ಟಡ ನಿರ್ಮಾಣ ಮುಂದುವರೆಸಬಹುದು. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ರಸ್ತೆ, ಕಟ್ಟಡ ಕಾಮಗಾರಿಗೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.
ಬೆಂಗಳೂರು ಸೇರಿದಂತೆ 8 ಹಾಟ್ಸ್ಪಾಟ್ ಜೆಲ್ಲೆಗಳು ಹೊರತುಪಡಿಸಿ ಇತರೆ ಪ್ರದೇಶಗಳಲ್ಲಿ ಲಾಕ್ಡೌನ್ನಲ್ಲಿ ಸ್ವಲ್ಪ ಸಡಿಲವಾಗುತ್ತದೆ. ಐಟಿ ಬಿಟಿಗಳಲ್ಲಿ ಶೇ 33 ರಷ್ಡು ಸಿಬ್ಬಂದಿ ಹಾಜರಾಗಲು ಅನುಮತಿ ನೀಡಲಾಗಿದೆ. ಬೆಂಗಳೂರಿನಲ್ಲಿ ಒಟ್ಟು 32 ಕಂಟೈನ್ಮೆಂಟ್ ಝೋನ್ ರಚಿಸಲಾಗಿದೆ. ಮೇ 3ರವರೆಗೂ ಮದ್ಯ ಮಾರಾಟಕ್ಕೆ ಅನುಮತಿ ಇಲ್ಲ. ನಂತರ ಪರಿಶೀಲಿಸಲಾಗುವುದು ಎಂದರು. (ದಿಗ್ವಿಜಯ ನ್ಯೂಸ್)