

ರಾಜಕೀಯ ವಿಪ್ಲವದ ನಡುವೆ ಬಿಜೆಪಿ ರಾಜ್ಯದಲ್ಲಿ ಮತ್ತೆ ಅಧಿಕಾರದ ಗದ್ದುಗೆ ಹಿಡಿದಿದೆ. 2019ರ ಜುಲೈ 26ರಂದು ಬಿ.ಎಸ್.ಯಡಿಯೂರಪ್ಪ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ವಿರಾಜಮಾನರಾದರು. ಅಧಿಕಾರ ದಂಡ ಹಿಡಿಯುತ್ತಿದ್ದಂತೆ ರೈತರಿಗೊಂದು ಶುಭ ಸುದ್ದಿ ನೀಡಿಯೇ ಬಿಟ್ಟರು. ಆ ಮೂಲಕ ತಮ್ಮ ರೈತ ಪರ ಮನಸ್ಸನ್ನು ಅನಾವರಣಗೊಳಿಸಿದರು.
ಅಭಿವೃದ್ಧಿಯೇ ನಮ್ಮ ಸರ್ಕಾರದ ಆಡಳಿತ ಮಂತ್ರ ಎಂದು ಪದೇಪದೆ ಹೇಳುವ ಬಿಎಸ್ವೈ ಅದಕ್ಕೆ ಪೂರಕವಾಗಿ ಕೃಷಿ, ಕೈಗಾರಿಕೆ, ಮಹಿಳೆಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯಪ್ರವೃತ್ತರಾಗಿದ್ದಾರೆ. ಅಧಿಕಾರ ಪಡೆದ ಸಂದರ್ಭದಲ್ಲಿ ಅದಾಗಲೇ ಮಂಡನೆಯಾಗಿದ್ದ 2019-20ನೇ ಸಾಲಿನ ಬಜೆಟ್ ಅನ್ನೇ ಒಪ್ಪಿಕೊಂಡು, ಈ ಆರ್ಥಿಕ ವರ್ಷ ಮುಗಿಸಲು ಗಟ್ಟಿ ನಿರ್ಧಾರ ಮಾಡಿದ ಅವರು, ಇರುವ ಇತಿ ಮಿತಿಯಲ್ಲೇ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸಿದರು. ರಾಜ್ಯ ಸರ್ಕಾರದ ನೀತಿ ಮತ್ತು ನಿಲುವುಗಳಿಂದಾಗಿ ಪ್ರಕೃತಿ ವಿಕೋಪದ ನಕಾರಾತ್ಮಕ ಪರಿಣಾಮಗಳನ್ನು ಆದಷ್ಟು ಕಡಿಮೆ ಮಾಡುವಲ್ಲಿಯೂ ಯಶಸ್ವಿಯಾದರು.
ರಾಜ್ಯ ಏಕಕಾಲದಲ್ಲಿ ನೆರೆ ಮತ್ತು ಬರ ಪರಿಸ್ಥಿತಿ ಎದುರಿಸಿತು. 118 ವರ್ಷಗಳಲ್ಲೇ ಈ ಪ್ರಮಾಣದಲ್ಲಿ ಮಳೆ ಆಗಿರಲಿಲ್ಲ. ವಾಡಿಕೆ ಮಳೆಗಿಂತ ಸುಮಾರು ಶೇ.279 ಹೆಚ್ಚು ಮಳೆಯಾಗಿದೆ. 22 ಜಿಲ್ಲೆಗಳ 103 ತಾಲೂಕು ಪ್ರವಾಹ ಪೀಡಿತವಾದರೆ, ಮಳೆಯ ಚದುರುವಿಕೆಯಲ್ಲಿ ವ್ಯತ್ಯಾಸಗಳಾಗಿ 18 ಜಿಲ್ಲೆಗಳ 49 ತಾಲೂಕುಗಳು ಬರ ಪೀಡಿತವಾಗಿದ್ದವು. ಪ್ರಕೃತಿಯ ಅವಕೃಪೆಯಿಂದ ರಾಜ್ಯಾದ್ಯಂತ ಜನ, ಪ್ರಧಾನವಾಗಿ ರೈತಾಪಿ ವರ್ಗ ಸಂಕಷ್ಟಕ್ಕೀಡಾಯಿತು. ಸಂತ್ರಸ್ತರ ಬದುಕಿನಲ್ಲಿ ನೆಮ್ಮದಿ ತರಲು ಸರ್ಕಾರ ಸಾಧ್ಯವಾದ ಎಲ್ಲ ಕ್ರಮಗಳನ್ನು ಕೈಗೊಂಡಿತು. ಈಗಲೂ ಕೈಗೊಳ್ಳುತ್ತಿದೆ.
ಪರಿಹಾರ ಕಾರ್ಯಗಳಿಗೆ 6500 ಕೋಟಿ ರೂ.ಗಳನ್ನು ಸರ್ಕಾರ ಬಿಡುಗಡೆ ಮಾಡಿದೆ. ಕೇಂದ್ರದ ನೆರವಿನೊಂದಿಗೆ ರಾಜ್ಯದ ಬೊಕ್ಕಸದಿಂದ ಹೆಚ್ಚಿನ ಹಣಕಾಸು ಹೊಂದಾಣಿಕೆ ಮಾಡಿ ನೆರೆ ಪೀಡಿತರಿಗೆ ಆಸರೆಯಾಯಿತು. ತಕ್ಷಣದ ಪರಿಹಾರವಾಗಿ ಪ್ರತಿ ಪ್ರವಾಹ ಸಂತ್ರಸ್ತ ಕುಟುಂಬಕ್ಕೂ 10 ಸಾವಿರ ರೂ. ನೆರವನ್ನು ನೀಡಲಾಗಿದೆ. ಸಾವಿಗೀಡಾದ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ವಿತರಿಸಲಾಯಿತು. ಶೇ.25 ಹಾನಿಗೀಡಾದ ಮನೆಗಳಿಗೂ ಹೆಚ್ಚಿನ ಪರಿಹಾರ ನೀಡಲಾಯಿತು. ಹೆಚ್ಚು ಹಾನಿಗೀಡಾದ ಮನೆಗಳ ಪುನರ್ನಿರ್ವಣಕ್ಕೆ 5 ಲಕ್ಷ ರೂ. ಘೋಷಿಸಲಾಯಿತಲ್ಲದೆ, ಮೊದಲ ಕಂತನ್ನು ಬಿಡುಗಡೆಗೊಳಿಸಿ ಸಂತ್ರಸ್ತರ ಜತೆ ನಾವಿದ್ದೇವೆ ಎಂದು ತೋರಿಸಿತು. ಎರಡನೇ ಕಂತಿನ ಬಿಡುಗಡೆ ಪ್ರಕ್ರಿಯೆ ನಡೆದಿದೆ. ಮನೆ ಕಟ್ಟಿಕೊಳ್ಳುವವರೆಗೆ ಶೆಡ್ ನಿರ್ವಿುಸಿಕೊಳ್ಳುವ ಕುಟುಂಬಗಳಿಗೆ 50 ಸಾವಿರ ರೂ. ಅಥವಾ 10 ತಿಂಗಳ ಅವಧಿಗೆ 5 ಸಾವಿರ ರೂ.ದಂತೆ ಬಾಡಿಗೆ ನೀಡುವ ವ್ಯವಸ್ಥೆ ಮಾಡಲಾಯಿತು. ಪ್ರವಾಹಕ್ಕೊಳಗಾಗಿ ಅಸುನೀಗಿದ ಜಾನುವಾರುಗಳಿಗೆ 16 ಸಾವಿರದಿಂದ 30 ಸಾವಿರ ರೂ.ವರೆಗೆ ಪರಿಹಾರವನ್ನೂ ನೀಡಲಾಯಿತು.
ಪ್ರಕೃತಿ ವಿಕೋಪದ ಸವಾಲು ಎದುರಿಸುವ ಜತೆಗೆ ಅಭಿವೃದ್ಧಿ ಕೆಲಸಗಳೂ ಸುಗಮವಾಗಿ ನಡೆಯುವಂತೆ ಆಡಳಿತ ಯಂತ್ರ ಸಜ್ಜುಗೊಳಿಸಿದ್ದು ಬಿಎಸ್ವೈ. ಸರ್ಕಾರದ ಪ್ರಯತ್ನಗಳಿಗೆ ಚುನಾಯಿತ ಪ್ರತಿನಿಧಿಗಳೂ ಮತ್ತು ಅಧಿಕಾರಿ, ನೌಕರ ವರ್ಗ ಸಹ ಕೈ ಜೋಡಿಸಿತು. ಹೀಗಾಗಿ ನೊಂದ ಜನರ ಬದುಕಿಗೆ ನೆಮ್ಮದಿ ತರಲೂ ಸಾಧ್ಯವಾಯಿತು.
ಕಾಳಜಿಗೊಂದೆರಡು ಉದಾಹರಣೆ
ಪ್ರವಾಹ ಪರಿಸ್ಥಿತಿ ಎದುರಾದಾಗ ಎನ್ಡಿಆರ್ಎಫ್/ ಎಸ್ಡಿಆರ್ಎಫ್ ಮಾರ್ಗಸೂಚಿಗಳಲ್ಲಿ ನಿಗದಿಪಡಿಸಿರುವ ಬೆಳೆ ಪರಿಹಾರಕ್ಕೆ 10 ಸಾವಿರ ರೂ. ಹೆಚ್ಚುವರಿಯಾಗಿ ಪರಿಹಾರ ನೀಡುವುದಾಗಿ ಘೋಷಿಸಿದ್ದು ಸರ್ಕಾರದ ಕೃಷಿ ಕಾಳಜಿಯನ್ನು ಎತ್ತಿ ತೋರುತ್ತದೆ. ಕೃಷಿ ಸಮ್ಮಾನ್ ಫಲಾನುಭವಿಗಳಿಗೆ ಹೆಚ್ಚುವರಿ ನೆರವು ನೀಡುವ ಘೋಷಣೆ ಮತ್ತು ಅನುಷ್ಠಾನ ಕೂಡ ಗಮನಾರ್ಹ ಸಂಗತಿ. ಈ ಸರ್ಕಾರ ಬಂದ ಬಳಿಕವೇ 6 ನಗರಗಳಲ್ಲಿ 18ಕ್ಕೂ ಹೆಚ್ಚು ಕರ್ನಾಟಕ ಒನ್ ಕೇಂದ್ರ ಆರಂಭಿಸಲಾಗಿದೆ, ಬೆಂಗಳೂರಲ್ಲಿ ಹೊಸದಾಗಿ 14 ಬೆಂಗಳೂರು ಒನ್ ಆರಂಭಿಸಿ ನಾಗರಿಕ ಸೇವೆ ಕೊಡುವ ನಿಟ್ಟಿನಲ್ಲಿ ಕಾಳಜಿ ವಹಿಸಲಾಗಿದೆ. ಮುಜರಾಯಿ ಇಲಾಖೆ ಅನುದಾನದಲ್ಲಿ ಸಾಮೂಹಿಕ ವಿವಾಹ ಯೋಜನೆ ಜಾರಿಗೆ ತರಲಾಗುತ್ತಿದ್ದು, ಇದು ಹೊಸ ಸಂಚಲನವನ್ನೇ ಮೂಡಿಸಿದೆ. ಹೈದರಾಬಾದ್ ಕರ್ನಾಟಕ ಹೆಸರು ಕಲ್ಯಾಣ ಕರ್ನಾಟಕವೇ ಇರಬೇಕೆಂಬ ಹಲವು ದಶಕಗಳ ಕೂಗಿಗೂ ಈ ಸರ್ಕಾರ ದನಿಯಾಯಿತು. ಕೇಂದ್ರದಿಂದ ಹತ್ತಾರು ಹೊಸ ರೈಲು ಸೇವೆ ಆರಂಭಿಸಲು ಸರ್ಕಾರದ ಪ್ರಯತ್ನ ಇಚ್ಛಾಶಕ್ತಿ ಕೂಡ ಕಾರಣವಾಗಿದೆ. ಒಟ್ಟಾರೆ ಅಭಿವೃದ್ಧಿಯೇ ಆಡಳಿತ ಮಂತ್ರ ಎಂಬ ಕಲ್ಪನೆಯಲ್ಲಿ ಸರ್ಕಾರ ಧನಾತ್ಮಕ ದಿಕ್ಕಿನತ್ತ ಹೆಜ್ಜೆ ಹಾಕಿದೆ.