ಸಿಎಂ ಬಿಎಸ್​ವೈ ಹುಟ್ಟುಹಬ್ಬ ವಿಶೇಷ: ಕಲಾಭಿಮಾನಿ ಮಾತೃಹೃದಯಿ

BSy 4
Published on

ಯಡಿಯೂರಪ್ಪರದ್ದು ಸಿಡುಕಿನ ಸ್ವಭಾವ, ನಗುವುದೇ ಅಪರೂಪ, ಸದಾ ಪ್ರವಾಸದಲ್ಲಿರುವ ಅವರು ಕುಟುಂಬಕ್ಕೆ ಸಮಯ ನೀಡುವುದಿಲ್ಲ ಎಂದು ಹಲವರು ಭಾವಿಸಿದ್ದಾರೆ. ಆದರೆ, ಇದೆಲ್ಲ ಕಲ್ಪನೆಗಳು ಮಾತ್ರ. ಬಿಎಸ್​ವೈ ಹೃದಯದಲ್ಲಿ ಒಬ್ಬ ಕಲಾಭಿಮಾನಿ, ಶಿಸ್ತಿನ ಸಿಪಾಯಿ, ಮಾತೃಹೃದಯಿ ಇದ್ದಾನೆ. ಅವರದ್ದು ಸಾತ್ವಿಕ ಕೋಪ ಎಂಬುದು ಅನೇಕರಿಗೆ ಗೊತ್ತಿಲ್ಲ. ಅವರ ಬಗ್ಗೆ ಯಾರೂ ತಿಳಿಯದ ಅಪರೂಪದ ಸಂಗತಿಗಳು ಇಲ್ಲಿವೆ.

| ಅರವಿಂದ ಅಕ್ಲಾಪುರ ಶಿವಮೊಗ್ಗ ಅವರೆಕಾಳು ಉಪ್ಪಿಟ್ಟು: ಈ ಹೆಸರು ಕೇಳಿದರೆ ಬಿ.ಎಸ್.ಯಡಿಯೂರಪ್ಪ ಅವರಿಗೆ ಏನೋ ಸಂಭ್ರಮ. ಅವರು ಅತೀ ಹೆಚ್ಚು ಇಷ್ಟ ಪಡುವ ತಿಂಡಿಯಿದು. ಬಿಎಸ್​ವೈ ಭಾಗವಹಿಸುವ ಹಲವು ಕಾರ್ಯಕ್ರಮ, ಸುದ್ದಿಗೋಷ್ಠಿಗಳಲ್ಲಿ ಉಪಹಾರಕ್ಕೆ ಉಪ್ಪಿಟ್ಟನ್ನೇ ಮಾಡಿಸುವ ಮೂಲಕ ಆಯೋಜಕರು ಬಿ.ಎಸ್.ಯಡಿಯೂರಪ್ಪ ಇಷ್ಟದ ತಿಂಡಿಗೆ ಮನ್ನಣೆ ನೀಡುತ್ತಾರೆ.

ರೇಡಿಯೋ ಪ್ರಿಯ: ಬಿಎಸ್​ವೈ ರಾಜಕೀಯ ಜೀವನದ ಆರಂಭದಲ್ಲಿ ಸದಾ ಅವರೊಂದಿಗೆ ಸೋನಿ ಟ್ರಾನ್ಸಿಸ್ಟರ್ ಒಂದಿರುತ್ತಿತ್ತು. ಬೆಳಗ್ಗೆ ಪ್ರದೇಶ ಸಮಾಚಾರ ಕೇಳಿಯೇ ಅವರು ಕೆಲಸ ಆರಂಭಿಸುತ್ತಿದ್ದರು. ಎಲ್ಲೇ ಹೋದರೂ ಅದನ್ನು ತಮ್ಮೊಂದಿಗೆ ಕೊಂಡೊಯ್ಯುತ್ತಿದ್ದರು. ಪ್ರವಾಸದಲ್ಲಿ ಇದೇ ಇವರ ಸಂಗಾತಿಯಾಗಿತ್ತು.

ಊಟ-ತಿಂಡಿಯಲ್ಲಿ ಶಿಸ್ತು: ಊಟ, ತಿಂಡಿಯಲ್ಲಿ ಇಂದಿಗೂ ಯಡಿಯೂರಪ್ಪ ಶಿಸ್ತು ಕಾಯ್ದುಕೊಂಡಿದ್ದಾರೆ. ರುಚಿ-ಶುಚಿ ಜತೆಗೆ ಹದವಾದ ಬಿಸಿ ಅಡುಗೆ ಅವರಿಗಿಷ್ಟ. ರಸಂ, ಬಿಸಿ ಸಾಂಬಾರ್ ಇದ್ದರೆ ಇನ್ನೂ ಖುಷಿ. ಊಟದ ಬಳಿಕ ಐಸ್ಕ್ರೀಂನೊಂದಿಗೆ ಫ್ರೂಟ್ ಸಲಾಡ್ ಅಚ್ಚುಮೆಚ್ಚು. ಸಂಜೆ ರವೆ ದೋಸೆ, ಮಸಾಲೆ ರೊಟ್ಟಿ ಇದ್ದರೆ ಇಷ್ಟ.

ಸ್ನಾನವೇ ಮೊದಲು: ಎಷ್ಟೇ ಬಿಡುವಿಲ್ಲದ ಕಾರ್ಯಕ್ರಮಗಳಿರಲಿ. ಸ್ನಾನ ಮುಗಿಸದೆ ಯಡಿಯೂರಪ್ಪ ಎಂದಿಗೂ ತಿಂಡಿ ತಿಂದ ನಿದರ್ಶನಗಳಿಲ್ಲ. ಯಾವುದೇ ಊರಿರಲಿ, ಯಾವುದೇ ಸಂದರ್ಭವಿರಲಿ. ಎದುರಿಗೆ ಅವರೆಕಾಳು ಉಪ್ಪಿಟ್ಟೇ ತಂದಿಡಲಿ. ಸ್ನಾನ ಮೊದಲು ತಿಂಡಿ ನಂತರ ಎಂಬುದು ಅವರ ಪಾಲಿಸಿ.

ಹೂವು ಕಂಡರೆ ಪ್ರೀತಿ: ಹೂವುಗಳೆಂದರೆ ಬಿಎಸ್​ವೈಗೆ ಪ್ರೀತಿ. ಯಾವುದೇ ವೇದಿಕೆಯಿರಲಿ, ಮನೆಯೇ ಆಗಿರಲಿ ಹೂವುಗಳಿಂದ ಅಲಂಕರಿಸಿದರೆ ಅವರಿಗೆ ಖುಷಿ ಹೆಚ್ಚು. ರಾಜಕೀಯ ಪ್ರವಾಸದ ಸಂದರ್ಭದಲ್ಲಿ ಮಂಗಳೂರು ಕಡೆಗೆ ಹೋದರೆ ಪತ್ನಿ ಮೈತ್ರಾದೇವಿಗೆ ಶಂಕರಪುರ ಮಲ್ಲಿಗೆದಂಡೆ ತಂದುಕೊಡುತ್ತಿದ್ದರು.

ನಾಟಕ-ಸಿನಿಮಾ ಇಷ್ಟ: ರಾಜಕೀಯ ಬದುಕಿನ ಆರಂಭದಲ್ಲಿ ಯಡಿಯೂರಪ್ಪ, ಪತ್ನಿ ಮೈತ್ರಾದೇವಿ ಅವರೊಂದಿಗೆ ಹಲವು ನಾಟಕ, ಸಿನಿಮಾ ವೀಕ್ಷಿಸುತ್ತಿದ್ದರು. ಈಗಲೂ ಬಿಡುವಿನ ಸಂದರ್ಭದಲ್ಲಿ ಅಪರೂಪಕ್ಕೆ ಕುಟುಂಬಸ್ಥರೊಂದಿಗೆ ಸಿನಿಮಾ ವೀಕ್ಷಿಸಿದ ನಿದರ್ಶನಗಳಿವೆ.

ಯಾರನ್ನೂ ಉಪೇಕ್ಷಿಸಲ್ಲ: ಯಡಿಯೂರಪ್ಪ ಇಂದು ರಾಜ್ಯದ ಮುಖ್ಯಮಂತ್ರಿ ಆಗಿರಬಹುದು. ಆದರೆ ಜತೆಗಿರುವವರನ್ನು ಎಂದಿಗೂ ಉಪೇಕ್ಷಿಸಿದ ಉದಾಹರಣೆಗಳಿಲ್ಲ. ತಮ್ಮ ಕೋಪದಿಂದ, ನಡೆ-ನುಡಿಯಿಂದ ಯಾರಿಗಾದರೂ ಬೇಸರವಾಗಿದೆ ಎಂದು ತಿಳಿದರೆ ಅವರನ್ನು ಮೃದುವಾಗಿ ಮಾತನಾಡಿಸಿ ನೋವು ಕಡಿಮೆ ಮಾಡುವ ಕಲೆ ಅವರಿಗೆ ಸಿದ್ಧಿಸಿದೆ.

ಕೋಪವೇ ವರ: ಯಡಿಯೂರಪ್ಪರಿಗೆ ಕೋಪ ವರವಾಗಿ ಪರಿಣಮಿಸಿದೆ. ಈಗ ಅವರು ಕೊಂಚ ಶಾಂತವಿದ್ದರೂ ಅಧಿಕಾರಿಗಳಿಗೆ ಹಿಂದಿನ ಕೋಪದ ಭಯವಿದೆ. ಹೀಗಾಗಿ ಯಡಿಯೂರಪ್ಪ ಏನೇ ಕೆಲಸ ಹೇಳಿದರೂ ತ್ವರಿತವಾಗಿ ಕಾರ್ಯರೂಪಕ್ಕೆ ಬರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net