ಬಿಎಸ್​ವೈ ರೈತರ ಪರ ನಾಯಕನೆಂದು ಹೊಗಳಿ ಸಿದ್ದರಾಮಯ್ಯರನ್ನು ಮೆಚ್ಚಿದ ಕೇಂದ್ರ ಸಚಿವ ರಾಜನಾಥ್​ ಸಿಂಗ್​

Rajnath Singh
Published on

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ದಕ್ಷಿಣ ಭಾರತದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿ ಪ್ರಸಿದ್ಧಿಯಾಗಿದ್ದಾರೆ. ಜನರ ಸೇವೆ ಮಾಡಿದ್ದಕ್ಕೆ ಜನರು ಅವರನ್ನು ಇಲ್ಲಿ ತಂದು ಕೂರಿಸಿದ್ದಾರೆ ಎಂದು ಕೇಂದ್ರ ಸಚಿವ ರಾಜನಾಥ್​ ಸಿಂಗ್​ ಬಿಎಸ್​ವೈರನ್ನು ಕೊಂಡಾಡಿದರು.

ಸಿಎಂ ಬಿಎಸ್​ವೈ 78ನೇ ಹುಟ್ಟುಹಬ್ಬ ಆಚರಣೆ ಹಿನ್ನೆಲೆಯಲ್ಲಿ ಬೆಂಗಳೂರು ಅರಮನೆ ಮೈದಾನಲ್ಲಿ ನಡೆಯುತ್ತಿರುವ ಅಭಿನಂದನಾ ಸಮಾರಂಭದಲ್ಲಿ ರಾಜನಾಥ್​ ಸಿಂಗ್​ ಮಾತನಾಡಿದರು.

ಯಡಿಯೂರಪ್ಪ ಅವರು ಹುದ್ದೆಯಿಂದ ದೊಡ್ಡವರೆನಿಸಿಲ್ಲ, ಕೆಲಸಗಳಿಂದ ದೊಡ್ಡವರೆನಿಕೊಂಡಿದ್ದಾರೆ. ಅವರು ಶ್ರೀಮಂತ ಕುಟುಂಬದಲ್ಲಿ ಜನಿಸಿದವರಲ್ಲ, ಪರಿಶ್ರಮದಿಂದ ಮೇಲೆ ಬಂದವರು. ಅವರ ಕೆಲಸದ ಮೇಲಿನ ಶ್ರದ್ಧೆ ಇವತ್ತು ಅವರನ್ನು ಇಲ್ಲಿ ತಂದು ಕೂರಿಸಿದೆ. ಜನರ ಸೇವೆ ಮಾಡಿದಕ್ಕೆ ಅವರನ್ನು ಇಲ್ಲಿ ತಂದು ಕೂರಿಸಿದ್ದಾರೆ ಎಂದು ಗುಣಗಾನ ಮಾಡಿದರು.

ಬಿಎಸ್​ವೈ ಅವರಿಗೆ ದಲಿತರು ಹಾಗೂ ರೈತರ ಪರವಾಗಿ ಇರುವ ಕಾಳಜಿ ಎಲ್ಲರಿಗೂ ಗೊತ್ತಿದೆ. ಯಡಿಯೂರಪ್ಪ ಕರ್ನಾಟಕ ರಾಜಕೀಯದ ಮಿಂಚು ಎಂದು ರಾಜ್ಯದ ಮೀಡಿಯಾ ಹೇಳಿದೆ. ಸೈಕಲ್ ಮೇಲೆ ಹೋಗಿ ಹಳ್ಳಿ ಹಳ್ಳಿ ಓಡಾಡಿ ಪಕ್ಷ ಸಂಘಟಿಸಿದ್ದಾರೆ. ಒಮ್ಮೆ ಅವರ ಮೇಲೆ ದಾಳಿಯೂ ಆಗಿತ್ತು. ಆದರೆ ಯಡಿಯೂರಪ್ಪ ಬಡವರ ಹಾಗೂ ರೈತರ ಸೇವೆ ಮಾಡುತ್ತಲೇ ಬಂದರು ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.

ರೈತರು, ಬಡವರು ಹಾಗೂ ಶೋಷಿತರ ಪರ ಇರುವ ನಾಯಕರೆಂದು ಅದು ಬಿಎಸ್​ವೈ. ಅವರು ರಾಜ್ಯದಲ್ಲಿ ಪಕ್ಷ ಬೆಳೆಸಿದರು. ಅವರೊಬ್ಬ ಹುಟ್ಟು ಹೋರಾಟಗಾರ. ಯಡಿಯೂರಪ್ಪ ಅವರನ್ನು ನಾನು ಒಬ್ಬ ಹೋರಾಟಗಾರನ ದೃಷ್ಟಿಯಿಂದಲೇ ಸದಾ ನೋಡ್ತೇನೆ. ಅವರ ಮೇಲೆ ಆರೋಪ‌ ಬಂದು ಸಿಎಂ ಸ್ಥಾನ ತ್ಯಾಗ ಮಾಡಬೇಕಾಯ್ತು. ಆದರೆ, ಕಿಂಚಿತ್ತೂ ಹಿಂಜರಿಯದೇ ಸಿಎಂ‌ ಸ್ಥಾನ ತ್ಯಾಗ‌ ಮಾಡಿದರು. ಯಡಿಯೂರಪ್ಪ ಆರ್ಥಿಕ ಸಚಿವರಾಗಿ ಸಾಕಷ್ಟು ರೈತಪರ ಯೋಜನೆ ತಂದರು. ರೈತರಿಗೆ ಮೊದಲ‌ ಬಾರಿಗೆ ಶೇ.4ರ ಬಡ್ಡಿಯಲ್ಲಿ ಸಾಲ ವಿತರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಬಳಿಕ ಶೂನ್ಯ ಬಡ್ಡಿದರದಲ್ಲಿ ಸಾಲ ಕೊಡೋವರೆಗೂ ಆ ಯೋಜನೆ ಯಶಸ್ವಿಯಾಗಿ ಸಾಗಿತು. ಶೂನ್ಯ ಬಂಡವಾಳ ಕೃಷಿ ಕುರಿತು ಮೊದಲ ಸಲ ಚರ್ಚೆ ಮಾಡಿದ್ದೇ ಯಡಿಯೂರಪ್ಪ ಅವರು. ಯಡಿಯೂರಪ್ಪ ಮೊದಲ ಸಲ ಈ ಬಗ್ಗೆ ಮಾತಾಡಿದ್ದ ಪರಿಣಾಮ ಕೇಂದ್ರದ ಬಜೆಟ್​ನಲ್ಲೂ ಶೂನ್ಯ ಬಂಡವಾಳ ಕೃಷಿ ಯೋಜನೆ ಸೇರ್ಪಡೆ ಮಾಡಲಾಯ್ತು. ರೈತರ ಆದಾಯ ಹೆಚ್ಚಾಗಬೇಕು ಅನ್ನೋದು ಯಡಿಯೂರಪ್ಪರ ಆಶಯವಾಗಿದೆ. ಯಡಿಯೂರಪ್ಪ ರೈತರ ಪರ ಹಾಗೂ ರೈತ ಸ್ನೇಹಿ ನಾಯಕರು ಎಂದು ಗುಣಗಾನ ಮಾಡಿದರು.

ಸಿದ್ದರಾಮಯ್ಯರವರನ್ನು ಹೊಗಳಿದ ರಾಜನಾಥ್ ಸಿಂಗ್

ಕಾರ್ಯಕ್ರಮಕ್ಕೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ ರಾಜನಾಥ್​ ಸಿಂಗ್​, ಸಿದ್ದರಾಮಯ್ಯರವರು ಕಾರ್ಯಕ್ರಮಕ್ಕೆ ಬಂದಿದ್ದು ಖುಷಿಯಾಯ್ತು. ಇದು ನಿಜವಾದ ಪ್ರಜಾಪ್ರಭುತ್ವ. ಎಲ್ಲಾ ಪಕ್ಷದವರು ರಾಜಕೀಯವಾಗಿ ಮೀರಿ ಸಂಬಂಧವನ್ನು ಇಟ್ಟುಕೊಳ್ಳಬೇಕೆಂದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net