

ಶಿಗ್ಗಾಂವಿ: ಬೆಂಗಳೂರಿನಿಂದ ‘ಜಯವಾಹಿನಿ’ ಮೂಲಕ ಪ್ರಚಾರ ಆರಂಭಿಸಿದ್ದು, ಬೆಳಗಾವಿವರೆಗೂ ಸುಮಾರು 25 ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದೇನೆ. ಎಲ್ಲ ಕಡೆಗಳಲ್ಲೂ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಈವರೆಗೂ ಒಮ್ಮೆಯೂ ಗೆಲ್ಲದಿರುವ ಕ್ಷೇತ್ರಗಳಲ್ಲಿನ ಜನಬೆಂಬಲ ನೋಡಿದರೆ ಅನೇಕ ಕ್ಷೇತ್ರಗಳಲ್ಲಿ ಮೊದಲ ಬಾರಿಗೆ ಗೆಲುವು ಸಾಧಿಸಿ ನಾವು ಹೊಸ ದಾಖಲೆ ಸೃಷ್ಟಿಸುತ್ತೇವೆ. ರಾಜ್ಯದಲ್ಲಿ ಒಂದು ರೀತಿ ಬಿಜೆಪಿ ಸುನಾಮಿ ಎದ್ದಿದೆ. ದಕ್ಷಿಣ, ಉತ್ತರದ ಜಿಲ್ಲೆಗಳಲ್ಲಿ ಭಾರಿ ಜನಬೆಂಬಲ ವ್ಯಕ್ತವಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಶಿಗ್ಗಾಂವಿ ತಾಲೂಕಿನ ಅಂದಲಗಿ ಗ್ರಾಮದಲ್ಲಿ ರೋಡ್ ಶೋ ವೇಳೆ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ತಾವು ಅಧಿಕಾರಕ್ಕೆ ಬಂದರೆ ಮೀಸಲಾತಿ ಪ್ರಮಾಣವನ್ನು ಶೇ.75ಕ್ಕೆ ಹೆಚ್ಚಿಸುತ್ತೇವೆ ಎಂಬ ಕಾಂಗ್ರೆಸ್ಸಿನ ಭರವಸೆ ದೊಡ್ಡ ಹಾಸ್ಯಾಸ್ಪದವಾಗಿದೆ. ಅವರು ಅಧಿಕಾರದಲ್ಲಿ ಇದ್ದಾಗ ಎಸ್‌ಸಿಗೆ ಶೇ.2ರಷ್ಟು, ಎಸ್‌ಟಿಗೆ ಶೇ.4ರಷ್ಟು ಮೀಸಲಾತಿ ಹೆಚ್ಚಿಸಲು ಸಾಧ್ಯವಾಗಲಿಲ್ಲ. ಇದೊಂದು ಅಪ್ಪಟ ಸುಳ್ಳು. ಚುನಾವಣೆಯಲ್ಲಿ ಗೆಲುವು ಸಾಧಿಸಲು ಸುಳ್ಳು ಹೇಳುತ್ತಿದ್ದಾರೆ. ಇದು ಚುನಾವಣೆಯ ಸ್ಟಂಟು. ಅವರಿಗೆ ಬದ್ಧತೆ ಇಲ್ಲ, ನೈತಿಕತೆ ಇಲ್ಲ, ನಾವು ಮೀಸಲಾತಿ ಹೆಚ್ಚಿಸಿ ಹೊರಡಿಸಿರುವ ಆದೇಶದಿಂದಾಗಿ ಕಾಂಗ್ರೆಸ್ಸಿನ ವೋಟ್ ಬ್ಯಾಂಕ್‌ನ ಡ್ಯಾಮ್ ಒಡೆದು ಹೋಗಿದೆ. ನಮ್ಮ ಆದೇಶದಿಂದ ಜನತೆ ಜಾಗೃತರಾಗಿದ್ದಾರೆ. ಕಾಂಗ್ರೆಸ್‌ನಿಂದ ಜನ ದೂರ ಸರಿಯುತ್ತಿದ್ದಾರೆ. ಹಾಗಾಗಿ, ಈ ರೀತಿ ಹೇಳಿಕೆ ಮೂಲಕ ವಿಷಯಾಂತರ ಮಾಡುತ್ತಿದ್ದಾರೆ ಎಂದರು.
ಜನತೆ ಹೊಸತನ ಬಯಸುತ್ತಾರೆ. ಹೀಗಾಗಿ, ನಾವು ಈ ಸಾರಿ ದೊಡ್ಡ ಸಂಖ್ಯೆಯಲ್ಲಿ ಹೊಸಬರಿಗೆ ಅವಕಾಶ ಕೊಟ್ಟಿದ್ದೇವೆ. ಇದು ನಮಗೆ ಫಲ ಕೊಡುತ್ತದೆ. ಫಲಿತಾಂಶದಲ್ಲಿ ಸಹಕಾರಿ ಆಗಲಿದೆ. ಸಂಪೂರ್ಣ ಬಹುಮತ ಪಡೆದು ಮತ್ತೊಮ್ಮೆ ಸರ್ಕಾರ ರಚಿಸುತ್ತೇವೆ ಎಂದರು.
ಕಾಂಗ್ರೆಸ್‌ನಲ್ಲಿ ಚಿತ್ರನಟರಿಲ್ಲವೇ ?
ಕಾಂಗ್ರೆಸ್ಸಿನಲ್ಲಿ ಯಾರೂ ಚಿತ್ರನಟರೇ ಇಲ್ಲವೇ. ಅವರಲ್ಲೂ ಎಂಟತ್ತು ಜನ ಚಿತ್ರನಟರಿದ್ದಾರೆ. ಅವರು ಮಾಡಿದರೆ ಸರಿ, ನಾವು ಮಾಡಿದರೆ ತಪ್ಪಾ ? ಎಂದು ಕಾಂಗ್ರೆಸ್‌ಗೆ ಪ್ರಶ್ನಿಸಿದರು. ಇವೆಲ್ಲಾ ಬಾಲಿಶವಾದ ವಿಚಾರಗಳು. ಚಿತ್ರನಟರು ರಾಜಕೀಯಕ್ಕೆ ಬಂದು ಶಾಸಕರಾಗಿ, ಸಂಸದರಾಗಿ ಕೆಲಸ ಮಾಡಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ರಾಹುಲ್ ಗಾಂಧಿ ಎಲ್ಲಿ ಬರುತ್ತಾರೋ ಅಲ್ಲಿ ಕಾಂಗ್ರೆಸ್ಸಿಗೆ ಸೋಲು ಗ್ಯಾರಂಟಿ. ಕಳೆದ ಸಾರಿ ನನ್ನ ಕ್ಷೇತ್ರಕ್ಕೂ ಬಂದಿದ್ದರು. ಆಗ ಕಾಂಗ್ರೆಸ್ಸಿನ ಅಭ್ಯರ್ಥಿ ಸೋತರು ಎಂದರು.