ಹಾವೇರಿ: ಎಸ್.ನಿಜಲಿಂಗಪ್ಪ ಅವರನ್ನು ಶಿಗ್ಗಾಂವಿಯಿಂದ ಅವಿರೋಧವಾಗಿ ಅಯ್ಕೆ ಮಾಡಿದ್ದೀರಿ. ನನಗೆ ಅವಿರೋಧ ಆಯ್ಕೆ ಬೇಡ. ಕುಸ್ತಿ ಅಖಾಡ ಬೇಕು. ಯಾರು ಕಣಕ್ಕೆ ಬರುತ್ತೀರಿ ಬರ್ರಿ. ಸೆಡ್ಡು ಹೊಡೆಯುತ್ತೇನೆ. ಕುಸ್ತಿ ಪಟ್ಟುಗಳನ್ನು ಹೆಚ್ಚು ಪ್ರಾಕ್ಟೀಸ್ ಮಾಡಿಕೊಂಡು ಬನ್ನಿ. ನಾನು ಎಲ್ಲದಕ್ಕೂ ತಯಾರಾಗಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ಗೆ ಪಂಥಾಹ್ವಾನ ನೀಡಿದರು.
ಶಿಗ್ಗಾಂವಿಯಲ್ಲಿ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ವಿರೋಧ ಪಕ್ಷದವರೆಲ್ಲ ಸೇರಿ ದೆಹಲಿ ಒಳಗೆ ಕುಳಿತು ಬಸವರಾಜ ಬೊಮ್ಮಾಯಿಯನ್ನು ಹೇಗೆ ಸೋಲಿಸಬೇಕು ಎಂದು ಪ್ಲಾನ್ ಮಾಡಿದ್ದೇ ಮಾಡಿದ್ದು. ನಾನು ಅದಕ್ಕೆಲ್ಲ ತಲೆ ಕೆಡಿಸಿಕೊಂಡಿಲ್ಲ. ನನಗೆ ವಿಶ್ವಾಸ ಇರುವುದು ನನ್ನ ಜನರ ಮೇಲೆ. ರೈತರ ಮೇಲೆ ಎಂದರು.
ಬಡವ ಬಲ್ಲಿದರ ಕೆಲಸ ಮಾಡಲು ನಾವೆಲ್ಲ ಒಟ್ಟಾಗಿದ್ದೇವೆ. ನಿಮ್ಮ ವಿಶ್ವಾಸಕ್ಕೆ ಚ್ಯುತಿ ಬರದಂತೆ ಕೆಲಸಮಾಡುವೆ. ೧೫ ವರ್ಷ ಮಾಡಿದ ಕೆಲಸವನ್ನು ಬರುವ ೫ ವರ್ಷಗಳಲ್ಲಿ ಮಾಡಿ ತೋರಿಸುವೆ.
ಇಲ್ಲಿನ ಜನರ ಒಡನಾಟ ಸಮಸ್ಯೆ ಕಂಡು ಅನೇಕ ಯೋಜನೆಗಳನ್ನು ರಾಜ್ಯದಲ್ಲಿ ಜಾರಿ ಮಾಡಿದ್ದೆನೆ. ಹಲವು ವೃದ್ದರು ನನ್ನ ಬಳಿ ಬಂದು ವೃದ್ದಾಪ್ಯ ವೇತನ ಬಂದಿಲ್ಲ ಎನ್ನುತ್ತಿದ್ದರು. ಅದಕ್ಕಾಗಿ ೨೦೦ ರೂ. ಹೆಚ್ಚಿಸಿ ಡಿಬಿಟಿ ಮೂಲಕ ನೇರ ಪಾವತಿ ವ್ಯವಸ್ಥೆ ಮಾಡಿದ್ದೇನೆ.
ಈ ವರ್ಷ ವಿದ್ಯಾರ್ಥಿನಿಯರಿಗೆ ಹಾಗೂ ದುಡಿಯವ ಹೆಣ್ಣು ಮಕ್ಕಳಿಗೆ ಉಚಿತ ಬಸ್ ಪಾಸ್ ಕೊಟ್ಟಿದ್ದೇನೆ.
ರಾಜ್ಯಕ್ಕೆ ನೀಡಿರುವ ಕೊಡುಗೆಗಳು ಶಿಗ್ಗಾಂವಿ ಜನರ ಪ್ರೇರಣೆಯಿಂದ ಆಗಿವೆ.
ಮೀಸಲಾತಿ ಸಾಧ್ಯವಿಲ್ಲ. ಹಿಂದಿನ ಹತ್ತಾರು ಸಿಎಂ ಮಾಡಿಲ್ಲ ಬೊಮ್ಮಾಯಿ ಏನು ಮಾಡುತ್ತಾನೆ ಎಂದು ಹಲವರು ಮಾತನಾಡಿದರು. ಈ ನಿರ್ಣಯ ಮಾಡಿದ ಮೇಲೆ ವಿರೋಧ ಪಕ್ಷದವರು ತಲೆ ಮೇಲೆ ಕೈ ಇಟ್ಟುಕೊಂಡು ಕುಳಿತಿದ್ದಾರೆ.
ಮೀಸಲಾತಿ ಪರವಾಗಿ ನೀವು ಇದ್ದೀರೋ ಇಲ್ಲವೋ ವಿರೋಧ ಪಕ್ಷದವರು ಉತ್ತರಿಸಬೇಕು ಎಂದರು. ಸರ್ವಪಕ್ಷಗಳ ಸಭೆ ಕರೆದಾಗ ಎಲ್ಲರೂ ಮಾಡಿ ಮಾಡಿ ಎಂದರು. ಈಗ ಕೇಂದ್ರದಿಂದ ಬಂದ ನಾಯಕ ಇದು ಸಂವಿಧಾನ ವಿರೋಧಿ ಎನ್ನುತ್ತಿದ್ದಾರೆ. ಅಂದರೆ ಸಿದ್ದರಾಮಯ್ಯ, ಡಿಕೆಶಿ ಅಂದು ಒಪ್ಪಿಕೊಂಡದ್ದ ಸರಿ ಅಲ್ಲವಾ ಎಂದರು.
ನಾವು ಅಧಿಕಾರಕ್ಕೆ ಬಂದರೆ ಸದಾಶಿವ ಆಯೋಗ ಜಾರಿ ಮಾಡುತ್ತೇವೆ ಎಂದಿದ್ದರು ಸಿದ್ದರಾಮಯ್ಯ. ನಂತರ ಯಾವುದೇ ಕಾರಣಕ್ಕೂ ಮಾಡಲ್ಲ ಎಂದಿದ್ದರು. ಇಂತಹ ದ್ವಿಮುಖ ನೀತಿ ಮೂಲಕ ಜನರ ಕಣ್ಣಿಗೆ ಮಣ್ಣು ಎರಚುವ ಕೆಲಸ ಮಾಡುತ್ತಿದ್ದಾರೆ ಎಂದರು.