

ಬೆಳಗಾವಿ(ಸವದತ್ತಿ) : ದಿ.ಆನಂದ ಮಾಮನಿ ಅವರ ಕನಸಾಗಿದ್ದ ಸತ್ತಿಗೇರಿ ಏತ ನೀರಾವರಿ ಯೋಜನೆಗೆ 'ಆನಂದ ಮಾಮನಿ ಏತ ನೀರಾವರಿ' ಎಂದು ಮರುನಾಮಕರಣ ಮಾಡಿ, ಒಂದೂವರೆ ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸಿ ರೈತರಿಗೆ ನೀರಾವರಿ ಸೌಲಭ್ಯ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.
ಬೆಳಗಾವಿ ಜಿಲ್ಲಾಡಳಿತ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಸವದತ್ತಿ-ಯಲ್ಲಮ್ಮ ಪುರಸಭೆ ಸಹಯೋಗದಲ್ಲಿ
ಸವದತ್ತಿ ಪಟ್ಟಣದಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, "ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರೂ ಬದುಕುವನು ಸಾಧಕ"ಎನ್ನುವುದಕ್ಕೆ ಆನಂದ ಮಾಮನಿ ಅವರು ಇಂದು ಸವದತ್ತಿ ಯಲ್ಲಮ್ಮ ಕ್ಷೇತ್ರದ ಜನಮಾನಸದಲ್ಲಿದ್ದಾರೆ ಎಂದರು.
'ಆನಂದ ಮಾಮನಿ ಅವರೊಂದಿಗೆ ತಮ್ಮ ಸ್ನೇಹ 25 ವರ್ಷಕ್ಕೂ ಹಿಂದಿನದು. ತಮ್ಮ ತಂದೆಯವರೊಂದಿಗೆ ಅವರಿಗೆ ಉತ್ತಮ ಬಾಂಧವ್ಯ ಇತ್ತು. ರಾಜಣ್ಣ ಮಾಮನಿ ಅವರು ಶಾಸಕರಿದ್ದಾಗಲೂ ನಮ್ಮ ಕುಟುಂಬದೊಂದಿಗೆ ಪ್ರೀತಿ ವಿಶ್ವಾಸ ಸಂಬಂಧ ಇತ್ತು. ಈ ಭಾಗದ ರೈತರ ಏಳಿಗೆಗಾಗಿ ಆನಂದ ಮಾಮನಿ ಅವರು ಕಾಮಗಾರಿ ಹಾಗೂ ವಿವಿಧ ಯೋಜನೆಗಳಿಗೆ ಒಪ್ಪಿಗೆ ಹಾಗೂ ಅನುದಾನ ಪಡೆಯಲು ಮಾಡುತ್ತಿದ್ದ ಪ್ರಯತ್ನ ಹಾಗೂ ಮನವರಿಕೆ ನನಗೀವ ಕಣ್ಮುಂದೆ ಬರುತ್ತಿದೆ. ಮಾಮನಿ ಅವರದು ಜನಪ್ರತಿನಿಧಿಗಳ ಸಂಬಂಧ ಮೀರಿ, ಜನತೆಯೊಂದಿಗೆ ಆತ್ಮೀಯತೆಯಿಂದ ಸಹೋದರ-ಸಹೋದರಿಯರ ಭಾವನೆಯೊಂದಿಗೆ ಬೆರೆಯೊತ್ತಿದ್ದರು. ಕ್ಷೇತ್ರಾದ್ಯಂತ ಅವರು ಆರಂಭಿಸಿರುವ ಅಭಿವೃದ್ಧಿ ಪರ್ವ ಇಂದಿಗೂ ಮುಂದುವರಿದಿದೆ. ಸಿಎಂ ಬಸವರಾಜ ಬೊಮ್ಮಾಯಿ ಭಾವುಕರಾದರು.
ಕಳಸಾ ಬಂಡೂರಿ ಯೋಜನೆಗಾಗಿ ಹೋರಾಟಕ್ಕೆ ನಾನು ಈ ಭಾಗಕ್ಕೆ ಬಂದಾಗೆಲ್ಲ ಆನಂದ ಮಾಮನಿ ಅವರು ಹೆಚ್ಚಿನ ಬೆಂಬಲ ನೀಡುತ್ತಿದ್ದರು. ರೈತರ ಅಭಿವೃದ್ಧಿ ಬಗ್ಗೆ ಅವರಿದ್ದ ಕಾಳಜಿ ಮಾದರಿಯಾಗಿದೆ. 'ಬೆಳಗಾವಿ ಜಿಲ್ಲೆ ದೊಡ್ಡದಿದ್ದು, ಪ್ರಗತಿ ಪರಿಶೀಲನೆ ಒಮ್ಮೆಯೇ ಮಾಡುವುದು ಸಮಂಜಸವಲ್ಲ. ಜಿಲ್ಲೆಯ ಮೂರೂ ಉಪ ವಿಭಾಗಗಳಲ್ಲಿ ಪ್ರಗತಿ ಪರಿಶೀಲನೆ ಮಾಡಿ' ಎಂದು ಮಾಮನಿ ಅವರು ಸಲಹೆ ನೀಡಿದ್ದರಿಂದ ಹಾಗೇಯೇ ಉಪವಿಭಾಗವಾರು ಪರಿಶೀಲಿಸಲು ಪ್ರಾರಂಭಿಸಿದೆನು ಎಂದು ಬೊಮ್ಮಾಯಿ ಅವರು ಒಡನಾಡ ಸ್ಮರಿಸಿಕೊಂಡರು.
ಬೊಮ್ಮಾಯಿ ಅವರಿಂದ ಒಗ್ಗಟ್ಟಿನ ಜಪ: ಸಮಾರಂಭದಲ್ಲಿ ಮುನ್ನ ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ ಮಾತನಾಡುತ್ತಿದ್ದಾಗ, ದಿ.ಆನಂದ ಮಾಮನಿ ಅವರ ಪತ್ನಿ ರತ್ನಾ ಮಾಮನಿ ಅವರನ್ನು ವೇದಿಕೆ ಮೇಲೆ ಕೂರಿಸುವಂತೆ ಮಾಮನಿ ಅಭಿಮಾನಿಗಳು ಹಾಗೂ ಬೆಂಬಲಿಗರು ಸಿ.ಸಿ.ಪಾಟೀಲ ಭಾಷಣಕ್ಕೆ ಅಡ್ಡಿಪಡಿಸಿ ಒತ್ತಾಯಿಸಿದರು.
ಸರ್ಕಾರಿ ಕಾರ್ಯಕ್ರಮ ಇದೆ ಸಹಕರಿಸಬೇಕು ಎಂದು ಸಚಿವರು ಮನವರಿಕೆ ಬಳಿಕ ಕಾರ್ಯಕ್ರಮ ಮುಂದುವರಿಯಿತು. ಇದಾದ ಬಳಿಕ ಮತ್ತೆ ಎರಡನೇ ಬಾರಿ, ರತ್ನಾ ಮಾಮನಿ ಅವರನ್ನು ಜತೆಯಲ್ಲೇ ಕರೆದುಕೊಂಡು ವೇದಿಕೆ ಏರಿದ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಆನಂದ ಮಾಮನಿ ಅವರ ಬಗ್ಗೆ ಕ್ಷೇತ್ರದಲ್ಲಿರುವ ಅಭಿಮಾನ ಹಾಗೂ ಅವರ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಜನರಲ್ಲಿರುವ ಅಭಿಪ್ರಾಯ ನಮಗೆ ಗೊತ್ತಿದೆ. ತಮ್ಮೆಲ್ಲರ ಭಾವನೆ ನಮಗೂ ಅರ್ಥವಾಗುತ್ತದೆ. ಮಾಮನಿ ಕುಟುಂಬವನ್ನು ಅತಿ ಹತ್ತಿರದಿಂದ ಬಲ್ಲೆ. ಆಕಾಂಕ್ಷಿಗಳೆಲ್ಲ ಒಂದಾದರೇ ಪಕ್ಷ ಗೆಲ್ಲುತ್ತದೆ ಎಂದ ಬೊಮ್ಮಾಯಿ ಅಭ್ಯರ್ಥಿಗಳು ಬಂಡಾಯವೇಳದೇ ಒಗ್ಗಟ್ಟಿನಿಂದ ದುಡಿಯಬೇಕು ಎಂದು ಸಂದೇಶ ರವಾನಿಸಿ, ವೇದಿಕೆಯಿಂದ ಹೊರಟರು.
ಬಳಿಕ ಭಾವುಕರಾಗಿ ಮಾತನಾಡಿದ ರತ್ನಾ ಮಾಮನಿ ಅವರು, 'ನಮ್ಮಯಜಮಾನರು ಇಂದು ನಮ್ಮೊಂದಿಗಿಲ್ಲದಿದ್ದರೂ ಅವರು ಮಾಡಿದ ಕೆಲಸ ನೋಡಿ ಇಂದು ಬಂದು ಹರಸಿದ ಕ್ಷೇತ್ರದ ಎಲ್ಲ ಜನತೆಗೆ ಕೃತಜ್ಣಳಾಗಿರುವೆ. ಯೋಜನೆಗಳು ಯಶಸ್ವಿಯಾಗಿರುವುದಕ್ಕೆ ಕ್ಷೇತ್ರದ ಜನತೆಯ ಸಹಕಾರವೇ ಕಾರಣ ಮುಂದೆಯೂ ಹೀಗೆಯೇ ಇರಲಿ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ವಿರೂಪಾಕ್ಷ ಮಾಮನಿ, ಸಂಜೀವಕುಮಾರ ನವಲಗುಂದ, ಈರಣ್ಣ ಚಂದರಗಿ, ರುದ್ರಣ್ಣ ಚಂದರಗಿ, ಬಸವರಾಜ್ ಪಟ್ಟಣಶೆಟ್ಟಿ, ವಿನಯಕುಮಾರ್ ದೇಸಾಯಿ, ಅಜಿತಕುಮಾರ್ ದೇಸಾಯಿ ಸೇರಿದಂತೆ ಇತರರು ಇದ್ದರು.
-----