

ಮಂಡ್ಯ: ಮಂಡ್ಯದಲ್ಲಿರುವ ಬರೀ ಮಣ್ಣಲ್ಲ, ಅದು ಚಿನ್ನ, ಬಂಗಾರ. ಕಾವೇರಿ ನೀರು ಕೊಟ್ಟರೇ ಬಂಗಾರದ ಬೆಳೆ ಕೊಡುವ ಮಣ್ಣು ಇಲ್ಲಿಯದು. ಕೆ.ವಿ.ಶಂಕರಗೌಡರು ರಾಜ್ಯದಲ್ಲಿ ಶಿಕ್ಷಣ ಕ್ರಾಂತಿ ಮಾಡಿದ್ದರು. ಡಾ.ಜಿ.ಮಾದೇಗೌಡರ ಹೋರಾಟ ಕೂಡ ಅವಿಸ್ಮರಣೀಯ. ಅಂಬರೀಷ್ ನನ್ನ 40 ವರ್ಷದ ಅತ್ಯಂತ ಆತ್ಮೀಯ ಸ್ನೇಹಿತ. ಹೀಗಾಗಿ ಮಂಡ್ಯ ಜಿಲ್ಲೆ ನನ್ನ ಹೃದಯಕ್ಕೆ ಹತ್ತಿರವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಮಹಾವೀರ ವೃತ್ತದಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ವೇಳೆ ಮಾತನಾಡಿದ ಅವರು, ಮಂಡ್ಯದಲ್ಲಿ ಹೊಸ ಗಾಳಿ ಬೀಸುತ್ತಿದೆ. ಇನ್ನು ಏಳು ದಿನ ನೀವು ಶ್ರಮಪಟ್ಟರೇ ಈ ಗಾಳಿ ಸುನಾಮಿಯಾಗಲಿದೆ. ನನ್ನ ತಂದೆಯ ಒಡನಾಡಿಯಾಗಿದ್ದ ಎಸ್.ಡಿ.ಜಯರಾಂ ಅವರನ್ನು ಸ್ಮರಿಸುತ್ತೇನೆ. ಮಂಡ್ಯ ಅಭಿವೃದ್ಧಿಗೆ ಜಯರಾಂ ಶ್ರಮ ಅಪಾರ. ಅವರ ದೇಹ ಎಷ್ಟು ದೊಡ್ಡದಿತ್ತು ಅಷ್ಟೇ ದೊಡ್ಡ ಹೃದಯ ವಿಶಾಲತೆ ಹೊಂದಿದ್ದರು. ಎಲ್ಲ ಅಭಿಮಾನಿಗಳು ಅಶೋಕ್ ಅವರನ್ನ ಪಕ್ಷಾತೀತವಾಗಿ ಶಾಸಕರನ್ನಾಗಿ ಮಾಡಿ. ಮಂಡ್ಯ ಬದಲಾವಣೆಯಾದರೆ ಇಡೀ ಇಂಡಿಯಾ ಬದಲಾವಣೆ ಆಗುತ್ತದೆ. ಕೇಂದ್ರ, ರಾಜ್ಯ ಸರ್ಕಾರದ ಕೆಲಸಗಳನ್ನ ಜನರಿಗೆ ತಿಳಿಸಿ. ಅಶೋಕ್ ಅವರನ್ನು ಗೆಲ್ಲಿಸಿ, ನಾನು ಎಲ್ಲೆ ಇದ್ದರೂ ವಿಜಯೋತ್ಸವಕ್ಕೆ ಬರುತ್ತೇನೆ. ಅಶೋಕ್ ಜಯರಾಂ ಅವರನ್ನ ವಿಧಾನಸೌಧಕ್ಕೆ ಕಳುಹಿಸಿ ಕೊಡಿ, ನಾನು ಮಂಡ್ಯ ಅಭಿವೃದ್ದಿಗೆ ಎಷ್ಟು ಹಣ ಬೇಕೋ ಕಳುಹಿಸಿಕೊಡುತ್ತೇನೆ ಎಂದರು.
ನಾನು ನೀರಾವರಿ ಸಚಿವ ಆಗಿದ್ದಾಗ ಕೆಆರ್‌ಎಸ್ ಡ್ಯಾಂನಲ್ಲಿ ನೀರು ಸೋರಿಕೆ ತಡೆಗಟ್ಟಿದ್ದೆ. ಈಗ ಹೊಸ ಡ್ಯಾಂನಂತೆ ಪರಿವರ್ತನೆಯಾಗಿದೆ. ಇನ್ನು 70 ವರ್ಷ ಏನು ಆಗದಂತೆ ಮಾಡಿದ್ದೇವೆ. ಹಿಂದೆ ಇಲ್ಲಿಂದ ಆಯ್ಕೆಯಾದವರು ಯಾರೂ ಮಾಡಲಿಲ್ಲ. ಕೆಆರ್‌ಎಸ್ ಕನ್ನಡಿಗರ ಆಸ್ತಿ. ಅದನ್ನ ಉಳಿಸುವುದು ನಮ್ಮ ಕರ್ತವ್ಯ. ಇನ್ನು ಮೈಷುಗರ್ ಕಾರ್ಖಾನೆ ಆರಂಭಿಸಲು ಮುಂದಾದೆ. ಆಗ ಕೆಲವರು ಅದನ್ನ ಮುಟ್ಟಬೇಡಿ, ಖಾಸಗಿಯವರಿಗೆ ಕೊಡಿ ಎಂದಿದ್ದರು. ನನಗೆ ಸವಾಲು ಎದುರಾದರೆ ಹೆಚ್ಚು ಶಕ್ತಿ ಸಿಗುತ್ತದೆ ಎಂದು ಹೇಳಿದರು.
ನಟಿ ತಾರಾ ಮಾತನಾಡಿ, ಮಂಡ್ಯದವರು ಸುಮ್ಮನೆ ಯಾವುದನ್ನು ಒಪ್ಪಿಕೊಳ್ಳಲ್ಲ. ಅದು ಸಿನಿಮಾ ಆದರೂ ಸರಿ, ಸರ್ಕಾರವಾದರೂ ಸರಿ, ನಾಯಕನಾದರೂ ಸರಿ. ನಮ್ಮ ಸಿಎಂ ಸಾಮಾನ್ಯರಲ್ಲಿ ಸಾಮಾನ್ಯವಾಗಿದ್ದಾರೆ. ಪ್ರಧಾನಿ ಮೋದಿ ಅವರು ನಾನು ಪಿಎಂ ಅಲ್ಲ ಸಮಾಜ ಸೇವಕ ಎಂದಿದ್ದರು. ಬಸವರಾಜ ಬೊಮ್ಮಾಯಿ ಕೂಡ ಕಾಮನ್‌ಮ್ಯಾನ್‌ನಂತೆ ಮನೆ ಮಗನಾಗಿದ್ದಾರೆ. ಮಹಿಳೆಯರಿಗೆ, ವಿದ್ಯಾರ್ಥಿಗಳಿಗಾಗಿ ಹಲವು ಯೋಜನೆ ಕೊಟ್ಟಿದ್ದಾರೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ಅಭ್ಯರ್ಥಿ ಅಶೋಕ್ ಜಯರಾಂ, ರಾಜ್ಯಕಾರ್ಯಕಾರಣಿ ಸದಸ್ಯ ಡಾ.ಸಿದ್ದರಾಮಯ್ಯ, ಮಾಜಿ ಎಂಎಲ್‌ಸಿ ಡಿ.ಎಸ್.ವೀರಯ್ಯ, ಮಂಡ್ಯ ಚುನಾವಣಾ ಉಸ್ತುವಾರಿ ಡಾ.ಈ.ಸಿ.ನಿಂಗರಾಜ್‌ಗೌಡ ಇತರರಿದ್ದರು.
ರೋಡ್ ಶೋ: ನಗರಕ್ಕೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಅದ್ದೂರಿ ಸ್ವಾಗತ ನೀಡಲಾಯಿತು. ಬಳಿಕ ನೂರಡಿ ರಸ್ತೆಯಿಂದ ಆರಂಭವಾದ ರೋಡ್ ಶೋ ಪ್ರಮುಖ ಬೀದಿಗಳ ಮೂಲಕ ಮಹಾವೀರ ವೃತ್ತದಲ್ಲಿ ಮುಕ್ತಾಯವಾಯಿತು. ರೋಡ್ ಶೋ ಉದ್ದಕ್ಕೂ ಬಿಜೆಪಿ ಕಾರ್ಯಕರ್ತರ ಹರ್ಷೋದ್ಗಾರ ಮುಗಿಲುಮುಟ್ಟಿತ್ತು. ಸಿಎಂ ನೋಡಲು ರಸ್ತೆ ಇಕ್ಕೆಲದಲ್ಲಿ ಜನರು ನಿಂತಿದ್ದರು. ಬಿಜೆಪಿ ಪಕ್ಷದ ಹಾಡಿಗೆ ಕಾರ್ಯಕರ್ತರು ಭರ್ಜರಿ ನೃತ್ಯ ಮಾಡುತ್ತಿದ್ದಾಗ ಬಸವರಾಜ ಬೊಮ್ಮಾಯಿ ತಮ್ಮ ಎರಡು ಕೈ ಬೀಸಿದರು.