

ಬೆಂಗಳೂರು: ರಾಜ್ಯದ ಜನತೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಕನ್ನಡ ರಾಜ್ಯೋತ್ಸವ ಶುಭಾಶಯ ಕೋರಿದ್ದಾರೆ. 'ನಾಡಿನ ಸಮಸ್ತ ಜನತೆಗೆ 67ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ನಾಡಿನ ಏಕತೆ, ಸಮಾನತೆ, ಸ್ವಾಭಿಮಾನ ಹಾಗೂ ಸಹಬಾಳ್ವೆಯ ಸಂಕೇತವೇ ರಾಜ್ಯೋತ್ಸವ. ಪ್ರತಿಯೊಬ್ಬ ಕನ್ನಡಿಗನಿಗೂ ಆರ್ಥಿಕ- ಸಾಮಾಜಿಕ ಭದ್ರತೆ ಕಲ್ಪಿಸುವುದು ನಮ್ಮ ಸಂಕಲ್ಪ' ಎಂದು ಸಿಎಂ ಹೇಳಿದ್ದಾರೆ.
'ನಾಡಿನ ಏಕತೆ, ಸ್ವಾಭಿಮಾನ, ಸಾಮರಸ್ಯ, ಸಹಬಾಳ್ವೆಯ ಸಂಕೇತವಾದ ರಾಜ್ಯೋತ್ಸವ ಪ್ರತಿಯೊಬ್ಬ ಕನ್ನಡಿಗನ ಹೆಮ್ಮೆಯ ಆಚರಣೆ. ನಮ್ಮ ಕನ್ನಡದ ಅಸ್ಮಿತೆ ಸದಾ ಜಾಗೃತವಾಗಿರಲಿ, ಕನ್ನಡತನದ ಅಭಿಮಾನ ನಿರಂತರವಾಗಿರಲಿ. ಪ್ರತಿಯೊಂದು ಕ್ಷೇತ್ರದಲ್ಲಿ ಕನ್ನಡಿಗರು ಮುಂದಿರಬೇಕು. ಅದರಲ್ಲೂ ಯುವಶಕ್ತಿ ತನ್ನ ಪ್ರತಿಭೆ, ಕೌಶಲಗಳನ್ನು ಬಳಸಿಕೊಂಡು ಉನ್ನತಿ ಸಾಧಿಸುವ ಜತೆಗೆ ರಾಜ್ಯವನ್ನು ಪ್ರಗತಿಪಥದತ್ತ ಕೊಂಡೊಯ್ಯಲು ಅಗತ್ಯವಾದ ಕಾರ್ಯಕ್ರಮಗಳನ್ನು ಸರ್ಕಾರ ರೂಪಿಸಿದೆ. ಅವುಗಳ ಪ್ರಯೋಜನ ಪಡೆದುಕೊಳ್ಳಬೇಕು' ಎಂದು ಮನವಿ ಮಾಡಿದ್ದಾರೆ.
ಪುನೀತ್ ಪ್ರೇರಣಾಶಕ್ತಿ: ಅಲ್ಪವಯಸ್ಸಿನಲ್ಲಿ ಅಗಾಧ ಸಾಧನೆ ಮಾಡಿದ ಪುನೀತ್ ರಾಜ್‍ಕುಮಾರ್ ಚಿತ್ರನಟ ಮಾತ್ರವಲ್ಲ, ಪರೋಪಕಾರಿ ಕೆಲಸಗಳು ಅಗಣಿತವಾಗಿವೆ. ಅಂಗಾಂಗ ದಾನ ಮಾಡುವ ಮೂಲಕ ಲಕ್ಷಾಂತರ ಜನರು ಅಂಗಾಂಗ ದಾನ ಮಾಡುವುದಕ್ಕೆ ಪ್ರೇರಣಾಶಕ್ತಿಯಾಗಿದ್ದಾರೆ. ಮರಣೋತ್ತರವಾಗಿ 'ಕರ್ನಾಟಕ ರತ್ನ' ಪ್ರಶಸ್ತಿ ಘೋಷಿಸಿದ್ದು, ಕರ್ನಾಟಕ ರಾಜ್ಯೋತ್ಸವ ದಿನದಂದು ಪ್ರಶಸ್ತಿ ಪ್ರದಾನ ಮಾಡಬೇಕು ಎನ್ನುವುದು ನನ್ನ ಇಚ್ಛೆಯಾಗಿತ್ತು. ಅದರಂತೆಯೇ ವಿಧಾನಸೌಧ ಮಹಾದ್ವಾರದ ಮೆಟ್ಟಿಲು ಬಳಿ ಇಂದು ಸಂಜೆ ಮಹತ್ವದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.