

ಬೆಂಗಳೂರು: ಖಾತೆ ಹಂಚಿಕೆಯಾದ ಬಳಿಕ ಕೆಲವು ಸಚಿವರಲ್ಲಿ ಮುನಿಸು, ಬದಲಾವಣೆಗೆ ಇಬ್ಬರು ಪಟ್ಟು ಹಿಡಿದಿರುವ ಕಾರಣ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಎಲ್ಲರಿಗೂ ಬೇಡಿದ ಖಾತೆಯನ್ನೇ ಕೊಡುವುದು ಸಾಧ್ಯವಿಲ್ಲ. ಇತಿ-ಮಿತಿಯೊಳಗೆ ತಾರತಮ್ಯಕ್ಕೆ ಅವಕಾಶವಿಲ್ಲದಂತೆ ಹಂಚಿಕೆ ಮಾಡಿದ್ದರೂ ಅಸಮಾಧಾನ ಭುಗಿಲೇಳುವುದು ತಪ್ಪಿಲ್ಲ. ಸಚಿವರಾದ ಎಂಟಿಬಿ ನಾಗರಾಜ್ ಮತ್ತು ಆನಂದ್ ಸಿಂಗ್ ಪ್ರತ್ಯೇಕವಾಗಿ ಸಿಎಂ ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಜನರ ಜತೆ ಬೆರೆಯುವ ಹಾಗೂ ಗೌರವ ಹೆಚ್ಚಿಸುವ ಒಳ್ಳೆಯ ಖಾತೆಗಳನ್ನು ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಲೋಕೋಪಯೋಗಿ, ಸಾರಿಗೆ, ಸಮಾಜ ಕಲ್ಯಾಣ ಅಥವಾ ಗ್ರಾಮೀಣಾಭಿವೃದ್ಧಿ ಪೈಕಿ ಯಾವುದಾದರೂ ಒಂದು ಖಾತೆ ಕೊಡಿ, ಜನರ ಜತೆಗೆ ಬೆರೆಯಲು ಸಾಧ್ಯವಾಗುತ್ತದೆ ಎಂದು ಎಂಟಿಬಿ ನಾಗರಾಜ್ ವಾದ ಮಂಡಿಸಿದ್ದಾರೆ. ವಸತಿ ಖಾತೆ ನೀಡುವ ಭರವಸೆ ಈಡೇರಿಲ್ಲ, ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಖಾತೆ ಕೊಟ್ಟಿದ್ದರಿಂದ ಹಿಂಬಡ್ತಿಯಾದಂತಿದೆ, ‘ತ್ಯಾಗ’ಕ್ಕೆ ಬೆಲೆಯಿಲ್ಲದಂತಾಗಿದೆ ಎಂಬ ಸಿಡಿಮಿಡಿ ವ್ಯಕ್ತಪಡಿಸಿದ್ದಾರೆ. ಸಾವಧಾನವಾಗಿ ಎಲ್ಲವನ್ನು ಕೇಳಿಸಿಕೊಂಡ ಬೊಮ್ಮಾಯಿ, ಮನವೊಲಿಸಲು ಪ್ರಯತ್ನಿಸಿದ್ದಾರೆ. ಜತೆಗೆ ವರಿಷ್ಠರೊಂದಿಗೆ ಈ ಬಗ್ಗೆ ಮಾತುಕತೆ ನಡೆಸುವೆ ಎಂದಷ್ಟೇ ಹೇಳಿದ್ದಾರೆ. ಈ ನಡುವೆ ಎಂಟಿಬಿ ನಾಗರಾಜ್ ಹಟ ಹಿಡಿದಿರುವುದಕ್ಕೆ ಕೆಲವು ವಲಸಿಗ ಮಿತ್ರರು ಆಕ್ಷೇಪವೆತ್ತಿದ್ದು, ಈಗ ಕೊಟ್ಟಿರುವ ಖಾತೆ ಸಮರ್ಥವಾಗಿ ನಿಭಾಯಿಸಿ ಸಾಕು ಎಂಬ ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವರಿಷ್ಠರ ಸೂಚನೆ: ಖಾತೆಗಾಗಿ ಹಗ್ಗಜಗ್ಗಾಟ ಹೀಗೆಯೇ ಮುಂದುವರಿದರೆ ಆಡಳಿತದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ತಪು್ಪ ಅಭಿಪ್ರಾಯ ಜನರಲ್ಲಿ ಮೂಡಲಿದೆ ಎಂಬ ಆತಂಕ ಬಿಜೆಪಿಯಲ್ಲಿ ಮನೆಮಾಡಿದೆ. ಆದಷ್ಟು ಬೇಗ ಎಲ್ಲವನ್ನು ಸರಿಪಡಿಸಿ ಎಂಬ ಸೂಚನೆಯನ್ನು ವರಿಷ್ಠರು ರವಾನಿಸಿದ್ದು, ಈ ನಿಟ್ಟಿನಲ್ಲಿ ಬೊಮ್ಮಾಯಿ ಕಸರತ್ತು ನಡೆಸಿದ್ದು, ಅಸಮಾಧಾನಿತರ ಜತೆಗೆ ನೇರವಾಗಿ ಮಾತುಕತೆ ನಡೆಸುವ ಮೂಲಕ ವಿಶ್ವಾಸಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿದ್ದಾರೆ. ಕಾವೇರಿ ನಿವಾಸಕ್ಕೆ ತೆರಳಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ರ್ಚಚಿಸಿ, ಸಮಸ್ಯೆ ಬಗೆಹರಿಸುವ ಮಾಗೋಪಾಯಗಳ ಬಗ್ಗೆ ಸಲಹೆ ಪಡೆದಿದ್ದಾರೆ.
ಸಂಪುಟ ವಿಸ್ತರಣೆ, ಪುನಾರಚನೆ ಅಥವಾ ಖಾತೆಗಳ ಹಂಚಿಕೆ ಸಂದರ್ಭದಲ್ಲಿ ಇಂತಹ ಬೆಳವಣಿಗೆ ಸಾಮಾನ್ಯ. ಅದಕ್ಕೆಲ್ಲ ಹೆಚ್ಚಿನ ಮಹತ್ವದ ನೀಡದೆ ಆಡಳಿತದತ್ತ ಗಮನಹರಿಸಲು ಬಿಎಸ್ವೈ ಕಿವಿಮಾತು ಹೇಳಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
ಗೃಹ ಖಾತೆಯನ್ನು ಸವಾಲಾಗಿ ಸ್ವೀಕರಿಸುತ್ತೇನೆ. ಸವಾಲುಗಳಿದ್ದರೆ ಒಂದಷ್ಟು ಕೆಲಸಗಳನ್ನು ಮಾಡಲು ಪ್ರೇರಣೆ ಸಿಗುತ್ತದೆ. ಒಂದೂವರೆ ವರ್ಷದಲ್ಲಿ ನನ್ನಿಂದ ಏನೆಲ್ಲ ಸಾಧ್ಯವೋ ಅದನ್ನು ಮಾಡಿ ತೋರಿಸುತ್ತೇನೆ. ಏನೇನು ಮಾಡಬಾರದೋ ಅದನ್ನು ಮಾಡುವುದಿಲ್ಲ. | ಆರಗ ಜ್ಞಾನೇಂದ್ರ ಗೃಹ ಸಚಿವ
ಆನಂದ್ ಸಿಂಗ್ ಮಾತುಕತೆ
ಬೊಮ್ಮಾಯಿ ಅವರ ಆರ್.ಟಿ.ನಗರದ ನಿವಾಸಕ್ಕೆ ಸಚಿವ ಆನಂದ್ ಸಿಂಗ್ ಕುಟುಂಬ ಸಮೇತವಾಗಿ ಭಾನುವಾರ ಬೆಳಗ್ಗೆ ಧಾವಿಸಿ, ಖಾತೆ ಬದಲಾವಣೆ ಕುರಿತು ಬೇಡಿಕೆಯಿಟ್ಟು ರ್ಚಚಿಸಿದ್ದಾರೆ. ವರಿಷ್ಠರ ಸಲಹೆ-ಸೂಚನೆ ಪ್ರಕಾರ ಖಾತೆ ಹಂಚಿಕೆಯಾಗಿವೆ. ಆದರೂ ನಿಮ್ಮ ಭಾವನೆಯನ್ನು ದೆಹಲಿ ನಾಯಕರೊಂದಿಗೆ ಮಾತುಕತೆ ನಡೆಸಿವೆ ಎಂಬ ಭರವಸೆ ಬೊಮ್ಮಾಯಿ ನೀಡಿದ್ದಾರೆ. ಸಿಎಂ ನಿವಾಸದಿಂದ ಹೊರ ಬಂದ ಆನಂದ್ ಸಿಂಗ್ ಮಾಧ್ಯಮದವರಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಹೊರಟರು.
ಅಂಗಾರಗೆ ರಸ್ತೆ ದುಸ್ಥಿತಿ ದರ್ಶನ!
ಸುಳ್ಯ (ದ.ಕ.): ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿ ಸ್ವಕ್ಷೇತ್ರಕ್ಕೆ ಕಾಲಿಟ್ಟ ಸಚಿವ ಎಸ್. ಅಂಗಾರ ಅವರಿಗೆ ಸ್ವಕ್ಷೇತ್ರ ದಲ್ಲೇ ಅತ್ಯಂತ ದುಸ್ಥಿತಿಯಲ್ಲಿರುವ ರಸ್ತೆಯ ದರ್ಶನವಾಗಿದೆ.
ಶನಿವಾರ ಮಧ್ಯಾಹ್ನ ಆಲೆಟ್ಟಿ ಕೂಟೇಲು ಸಂಪರ್ಕ ರಸ್ತೆಯ ಪರಿಶೀಲನೆ ವೇಳೆ ಕೆಸರು ರಸ್ತೆಯಲ್ಲಿ ಜೀಪು ಮುಂದಕ್ಕೆ ಚಲಿಸಲು ಸಾಧ್ಯವಾಗದೆ ಸಚಿವರು ಜೀಪಿನಿಂದ ಇಳಿದು ಸ್ವಲ್ಪ ದೂರ ನಡೆದುಕೊಂಡು ಹೋಗಬೇಕಾಯಿತು. ಉಳಿದವರು ಜೀಪನ್ನು ತಳ್ಳುವ ಮೂಲಕ ಮುಂದೆ ಚಲಿಸು ವಂತೆ ಮಾಡಿದರು. ವಿಪರೀತ ಮಳೆ ಇದ್ದ ಕಾರಣ ಸಂಚಾರ ಮತ್ತಷ್ಟು ದುಸ್ತರವಾಗಿತ್ತು. ದುಸ್ಥಿತಿಯಲ್ಲಿರುವ ರಸ್ತೆ, ಮುಂದೆ ಚಲಿಸಲಾಗದ ಜೀಪು, ಜತೆಗಿದ್ದ ಇತರರು ಜೀಪನ್ನು ದೂಡುವ ದೃಶ್ಯ, ಸಚಿವರು ಪಂಚೆ ಉಟ್ಟು ನಡೆದುಕೊಂಡೇ ಸಾಗುವ ವಿಡಿಯೋ ತುಣುಕು ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸತೀಶ್ ರೆಡ್ಡಿ ಮನವಿ
ರೆಡ್ಡಿ ಸಮುದಾಯಕ್ಕೆ ಸಚಿವ ಸ್ಥಾನ ನೀಡಬೇಕೆಂದು ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಸಿಎಂ ಬಳಿ ಮನವಿ ಮಾಡಿದ್ದಾರೆ. ಈ ವಿಚಾರದಲ್ಲಿ ವರಿಷ್ಠರ ಜತೆಗೆ ರ್ಚಚಿಸುವೆ ಎಂದು ಭರವಸೆ ನೀಡಿರುವ ಬೊಮ್ಮಾಯಿ, ಪರಿಸ್ಥಿತಿ ಅರ್ಥ ಮಾಡಿಕೊಂಡು ಸರ್ಕಾರ ಮತ್ತು ಪಕ್ಷದ ವರ್ಚಸ್ಸು ವೃದ್ಧಿಗೆ ಕೆಲಸ ಮಾಡಬೇಕೆಂಬ ಸಲಹೆ ನೀಡಿದರು ಎಂದು ಮೂಲಗಳು ತಿಳಿಸಿವೆ. ಖಾಲಿ ಇರುವ ನಾಲ್ಕರಲ್ಲಿ ಒಂದು ಸ್ಥಾನವನ್ನು ಪ್ರಾತಿನಿಧ್ಯ ವಂಚಿತ ರೆಡ್ಡಿ ಸಮುದಾಯಕ್ಕೆ ನೀಡಬೇಕೆಂದು ಒತ್ತಾಯಿಸಿ ರೆಡ್ಡಿ ಸಮುದಾಯ ಶನಿವಾರ ಪ್ರತಿಭಟನೆ ನಡೆಸಿತ್ತು. ಹಿರಿಯ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಅಥವಾ ಸತೀಶ್ರೆಡ್ಡಿ ಅವರನ್ನು ಪರಿಗಣಿಸಬೇಕೆಂದು ಮುಖ್ಯಮಂತ್ರಿಗೆ ಪ್ರತಿಭಟನಾಕಾರರು ಮನವಿ ಮಾಡಿದ್ದರು.
ಸರ್ಕಾರದಲ್ಲಿ ಯಾವುದೂ ಚೆನ್ನಾಗಿಲ್ಲ, ಮಂತ್ರಿಗಳ ಮಧ್ಯೆ ಹೊಂದಾಣಿಕೆ ಇಲ್ಲ. ಯಾವತ್ತಾದರೂ ಸ್ಫೋಟ ಆಗಬಹುದು. ಯಡಿಯೂರಪ್ಪಗೆ ಸಂಪುಟ ದರ್ಜೆ ಸೌಲಭ್ಯ ನೀಡಲು ಹೊರಟಿದ್ದರು. ಆದರೆ ಅವರು ಸೌಲಭ್ಯ ತಿರಸ್ಕರಿಸಿದ್ದು ಒಳ್ಳೆಯದೇ ಆಯಿತು. ನಾನೇ ಅವರಿಗೆ ಈ ಸೌಲಭ್ಯ ಪಡೆಯಬೇಡಿ ಎಂದು ಹೇಳೋಣ ಎಂದುಕೊಂಡಿದ್ದೆ. | ಸಿದ್ದರಾಮಯ್ಯ ವಿಧಾನಸಭೆ ಪ್ರತಿಪಕ್ಷ ನಾಯಕ
ಇಂದು ಸಿಎಂ ಮೈಸೂರು ಪ್ರವಾಸ
ಸಿಎಂ ಬಸವರಾಜ ಬೊಮ್ಮಾಯಿ ಸೋಮವಾರ ಮೈಸೂರಿಗೆ ಭೇಟಿಕೊಡಲಿದ್ದು, ಕರೊನಾ ನಿರ್ವಹಣೆ ಕುರಿತು ಜಿಲ್ಲಾಡಳಿತದೊಂದಿಗೆ ಸಭೆ ನಡೆಸುವರು. ಬೆಳಗ್ಗೆ 10.30ಕ್ಕೆ ಚಾಮುಂಡಿ ಬೆಟ್ಟಕ್ಕೆ ತೆರಳಿ, ನಾಡ ದೇವತೆ ದರ್ಶನ ಪಡೆಯುವರು. ಮಧ್ಯಾಹ್ನ ಶ್ರೀ ಕ್ಷೇತ್ರ ಸುತ್ತೂರಿಗೆ ಭೇಟಿ ಕೊಟ್ಟು ಶ್ರೀಗಳ ಆಶೀರ್ವಾದ ಪಡೆಯಲಿದ್ದಾರೆ.