ಗ್ರಾಪಂ ಟಾಸ್ಕ್​ಫೋರ್ಸ್​ಗೆ ಬಲ ತುಂಬಿ ; ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಸೂಚನೆ

SSMUtt Covid Care Center (8)
Published on

ತುಮಕೂರು: ಜಿಲ್ಲೆಯಲ್ಲಿ ಕರೊನಾ ಮಹಾಸ್ಪೋಟವಾಗಿರುವ ಹಿನ್ನೆಲೆಯಲ್ಲಿ ಖುದ್ದು ಸಿಎಂ ಬಿ.ಎಸ್.ಯಡಿಯೂರಪ್ಪ ಕರೊನಾ ನಿಯಂತ್ರಣ ಕುರಿತು ಅಧಿಕಾರಿಗಳ ಜತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಜಿಪಂ ಸಭಾಂಗಣದಲ್ಲಿ ಶುಕ್ರವಾರ ಮಾಧ್ಯಮಗಳನ್ನು ಹೊರಗಿಟ್ಟು ಸಭೆ ನಡೆಸಿದ ಬಿಎಸ್​ವೈ, ಗ್ರಾಮೀಣ ಭಾಗದಲ್ಲಿ ಸೋಂಕು ಹೆಚ್ಚಾಗಿರುವುದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು, ಗ್ರಾಪಂ ಮಟ್ಟದ ಟಾಸ್ಕ್​ಫೋರ್ಸ್​ಗೆ ಬಲ ತುಂಬಬೇಕು ಎಂದು ಜಿಲ್ಲಾಡಳಿತಕ್ಕೆ ಸೂಚಿಸಿದರು.

ಬೆಂಗಳೂರಿಗೆ ಸಮೀಪದಲ್ಲಿರುವ ಕಾರಣಕ್ಕೆ ತುಮಕೂರಿನಲ್ಲಿಯೂ ಸೋಂಕು ಹೆಚ್ಚಳವಾಗಿದ್ದು, ಪರಿಸ್ಥಿತಿ ಗಂಭೀರವಾಗಿತ್ತು. ಸಮರ್ಪಕ ನಿರ್ವಹಣೆಯಿಂದ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿದೆ, ಈ ನಿಟ್ಟಿನಲ್ಲಿ ಜಿಲ್ಲಾಡಳಿತದ ಕಾರ್ಯವೈಖರಿ ತೃಪ್ತಿ ತಂದಿದ್ದು ಮತ್ತಷ್ಟು ಕ್ರಿಯಾಶೀಲವಾಗಿ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಏಪ್ರಿಲ್​ನಲ್ಲಿ 18749 ಕೋವಿಡ್ ಪ್ರಕರಣ ದೃಢವಾಗಿದ್ದು, 131 ಮಂದಿ ಮೃತಪಟ್ಟಿದ್ದಾರೆ. ಮೇ ತಿಂಗಳಲ್ಲಿ 48643 ಪ್ರಕರಣಗಳು ದೃಢಪಟ್ಟಿದ್ದು, 314 ಮಂದಿ ಮೃತಪಟ್ಟಿರುವುದು ವರದಿಯಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗಿರುವುದನ್ನು ಸಹಿಸಲು ಸಾಧ್ಯವಿಲ್ಲ, ಕರೊನಾ ಕಾರಣಕ್ಕೆ ಮರಣಗಳು ಹೆಚ್ಚಾಗುವುದನ್ನು ತಪ್ಪಿಸಬೇಕು ಎಂದು ಹೇಳಿದರು.

ಆರಂಭದಲ್ಲಿ ಶೇ.45ರಷ್ಟಿದ್ದ ಸೋಂಕಿನ ಪ್ರಮಾಣ ಪ್ರಸ್ತುತ ಶೇ.25ಕ್ಕೆ ಇಳಿದಿದೆ, ಪೂರ್ಣ ಪ್ರಮಾಣದಲ್ಲಿ ಸೋಂಕಿನ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಸಂಚಾರಿ ಪರೀಕ್ಷಾ ಪ್ರಯೋಗಾಲಯ ಕೂಡಲೇ ಜಿಲ್ಲೆಯಲ್ಲಿ ಕಾರ್ಯಾರಂಭ ಮಾಡಲಿದೆ, ಶಿರಾ ನಗರದಲ್ಲಿ ಮುಂದಿನ ವಾರದಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದ್ದು ಜನರಿಗೆ ಅನುಕೂಲವಾಗಲಿದೆ ಎಂದರು.

ಜಿಲ್ಲೆಯಲ್ಲಿ ಈವರೆಗೂ 415776 ಜನರಿಗೆ ಮೊದಲ ಡೋಸ್ ಹಾಗೂ 113781 ಮಂದಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದ್ದು, ಮೊದಲನೇ ಡೋಸ್ ಲಸಿಕೆ ಪಡೆದವರಿಗೆ ಎರಡನೇ ಡೋಸ್ ಲಸಿಕೆ ನೀಡಲು ಆದ್ಯತೆ ನೀಡಬೇಕು, ಲಭ್ಯತೆ ಆಧಾರದಲ್ಲಿ ಎಲ್ಲಾ ಅರ್ಹರಿಗೂ ಲಸಿಕೆ ನೀಡಲು ಕ್ರಮಕೈಗೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ 566 ಆಕ್ಸಿಜನ್ ಕಾನ್ಸನ್​ಟ್ರೇಟರ್ ಲಭ್ಯವಿದ್ದು, 300 ಹಂಚಿಕೆ ಮಾಡಬೇಕಿದೆ, ಬಾಕಿ ಇರುವ ಆಕ್ಸಿಜನ್ ಕಾನ್ಸನ್​ಟ್ರೇಟರ್​ಗಳನ್ನು ಕೂಡಲೇ ಹಂಚಿಕೆ ಮಾಡಲು ಕ್ರಮಕೈಗೊಳ್ಳಿ ಎಂದು ಸೂಚಿಸಿದರು. ಜಿಲ್ಲೆಯಲ್ಲಿ ಇಲ್ಲಿವರೆಗೂ ಕೋವಿಡ್ ಪರಿಸ್ಥಿತಿಯನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದೀರಿ, ಮುಂದೆಯೂ ನಿರ್ವಹಿಸುವಿರಿ ಎಂಬ ವಿಶ್ವಾಸ ನನಗಿದೆ. ಸರ್ಕಾರ ನಿಮ್ಮೊಂದಿಗಿದೆ. ನಿಮಗೆ ಕರೊನಾ ನಿಯಂತ್ರಣಕ್ಕೆ ಎಲ್ಲ ರೀತಿಯಲ್ಲೂ ಬೆಂಬಲ ನೀಡುತ್ತೇನೆ ಎಂದು ವಿಶ್ವಾಸದ ಮಾತುಗಳನ್ನಾಡಿದರು.

ಸಭೆಯಲ್ಲಿ ಡಿಸಿಎಂ ಡಾ.ಅಶ್ವತ್ಥ್ಥಾರಾಯಣ, ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಸಂಸದರಾದ ಜಿ.ಎಸ್.ಬಸವರಾಜು, ಎ.ನಾರಾಯಣಸ್ವಾಮಿ, ಶಾಸಕರು, ಜಿಪಂ ಆಡಳಿತಾಧಿಕಾರಿ ರಾಕೇಶ್​ಸಿಂಗ್, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಪಂ ಸಿಇಒ ಕೆ.ವಿದ್ಯಾಕುಮಾರಿ, ಪೊಲೀಸ್ ಅಧೀಕ್ಷಕ ಡಾ.ಕೆ.ವಂಶಿಕೃಷ್ಣ ಮತ್ತಿತರರು ಇದ್ದರು.

ಸಿದ್ಧಗಂಗಾ ಶ್ರೀಗಳ ಜತೆ ಸಿಎಂ ಗೌಪ್ಯ ಚರ್ಚೆ : ಕರೊನಾ ಪ್ರಗತಿ ಪರಿಶೀಲನೆ ನೆಪದಲ್ಲಿ ತುಮಕೂರಿಗೆ ಭೇಟಿ ನೀಡಿದ್ದ ಸಿಎಂ ಬಿ.ಎಸ್.ಯಡಿಯೂರಪ್ಪ ಇಂದು ಸಿದ್ಧಗಂಗಾ ಮಠಕ್ಕೆ ತೆರಳಿ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳ ಜತೆ ಅರ್ಧಗಂಟೆಗೂ ಹೆಚ್ಚು ಕಾಲ ಗೌಪ್ಯ ಚರ್ಚೆ ನಡೆಸಿದರು. ಪಕ್ಷದೊಳಗೆ ಬಂಡಾಯದ ಹೊಗೆಯಾಡುತ್ತಿರುವ ಈ ಸಂದರ್ಭದಲ್ಲಿ ಸಿಎಂ ಭೇಟಿ ರಾಜಕೀಯ ಮಹತ್ವ ಪಡೆದುಕೊಂಡಿದೆ.

ಶ್ರೀಮಠದ ಕೋವಿಡ್ ಕೇರ್​ಸೆಂಟರ್​ಗೆ ಭೇಟಿ ನೀಡಿದ ಬಳಿಕ ಡಿಸಿಎಂ ಅಶ್ವತ್ಥನಾರಾಯಣ್ ಜತೆ ಮಠಕ್ಕೆ ನೇರವಾಗಿ ತೆರಳಿದ ಬಿಎಸ್​ವೈ ಅರ್ಧಗಂಟೆಗೂ ಹೆಚ್ಚು ಕಾಲ ಶ್ರೀಗಳ ಜತೆ ಮಾತುಕತೆ ನಡೆಸಿದರು. ಈ ವೇಳೆ ಡಿಸಿ, ಎಸ್ಪಿ ಸೇರಿ ಯಾರೊಬ್ಬರಿಗೂ ಶ್ರೀಮಠಕ್ಕೆ ಪ್ರವೇಶವಿರಲಿಲ್ಲ. ಜಿಲ್ಲೆಯ ಯಾವೊಬ್ಬ ಜನಪ್ರತಿನಿಧಿ ಕೂಡ ಸಂದರ್ಭದಲ್ಲಿ ಇರಲಿಲ್ಲ.

ಆಡಳಿತಾರೂಢ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಚಾರ ಮುನ್ನೆಲೆಗೆ ಬಂದಿರುವ ಬೆನ್ನಹಿಂದೆಯೇ ಬಿಎಸ್​ವೈ ಸಿದ್ಧಗಂಗಾಮಠಕ್ಕೆ ಭೇಟಿ ನೀಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಈ ಹಿಂದೆ ಹಲವುಬಾರಿ ಪ್ರಮುಖ ರಾಜಕೀಯ ನಿರ್ಧಾರ ತೆಗೆದುಕೊಳ್ಳುವ ಮುನ್ನ ಬಿಎಸ್​ವೈ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿರುವ ದಾಖಲೆ ಇತಿಹಾಸದ ಪುಟದಲ್ಲಿದೆ.

ಜಿಲ್ಲೆಯ ಬೇಡಿಕೆಗೆ ಸಿಎಂ ಗ್ರೀನ್ ಸಿಗ್ನಲ್

ತುಮಕೂರು : ಕರೊನಾ ನಿಯಂತ್ರಣದ ನಿಟ್ಟಿನಲ್ಲಿ ದಾನಿಗಳಿಂದ ಸಾಕಷ್ಟು ಕೊಡುಗೆ ಪಡೆದುಕೊಳ್ಳುತ್ತಿರುವ ತುಮಕೂರು ಜಿಲ್ಲಾಡಳಿತ ಸರ್ಕಾರದಿಂದಲೂ ಈಡೇರಬೇಕಾದ ದೊಡ್ಡಪಟ್ಟಿಯನ್ನೇ ಸಿಎಂ ಬಿಎಸ್​ವೈ ಮುಂದೆ ಶುಕ್ರವಾರದ ಸಭೆಯಲ್ಲಿ ಮಂಡಿಸಿದೆ.

ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಕೋರಿದ ಬಹುತೇಕ ಬೇಡಿಕೆಗಳಿಗೆ ಸಿಎಂ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಸಭೆಯ ನಂತರ ಜಿಪಂ ಆವರಣದಲ್ಲಿ ಸುದ್ದಿಗಾರರ ಜತೆ ಮಾಹಿತಿ ಹಂಚಿಕೊಂಡ ಜೆ.ಸಿ.ಮಾಧುಸ್ವಾಮಿ, 2ನೇ ಅಲೆಯಲ್ಲಿ 29ಸಾವಿರ ಸೋಂಕಿನ ಪ್ರಕರಣ ಪತ್ತೆಯಾಗಿದ್ದು, 15 ಸಾವಿರ ಸಕ್ರಿಯ ಪ್ರಕರಣ ಉಳಿದಿವೆ. ಶೇ.47ರಷ್ಟಿದ್ದ ಸೋಂಕಿನ ಪ್ರಮಾಣ ಶೇ.25ಕ್ಕೆ ಇಳಿದಿದ್ದು, ಇತರ ಜಿಲ್ಲೆಗಳಿಗಿಂತ ಕರೊನಾ ಆರೈಕೆ ಕೇಂದ್ರ ಪ್ರಾರಂಭಿಸಿ ಸೋಂಕಿನ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳಿಂದಾಗಿ ನಿಯಂತ್ರಕ್ಕೆ ಬಂದಿದೆ ಎಂದರು.

ಜಿಲ್ಲಾಸ್ಪತ್ರೆಯಲ್ಲಿ 285, ತಾಲೂಕು ಆಸ್ಪತ್ರೆಗಳಲ್ಲಿಯೂ ತಲಾ 50 ಆಮ್ಲಜನಕ ಹಾಸಿಗೆಗಳ ವ್ಯವಸ್ಥೆಯಿದೆ. ಕ್ವಾರಿ, ಕ್ರಷರ್ ಮಾಲೀಕರು ಸೇರಿ ಅನೇಕ ದಾನಿಗಳ ನೆರವಿನಿಂದ 300 ಆಮ್ಲಜನಕ ಸಾಂದ್ರಕ ಲಭ್ಯವಾಗಿವೆ. ಜಿಲ್ಲೆಯಲ್ಲಿರುವ 150 ಪಿಎಚ್​ಸಿಗಳಲ್ಲಿಯೂ 510 ಆಮ್ಲಜನಕ ಹಾಸಿಗೆಗಳ ವ್ಯವಸ್ಥೆ ಮಾಡಲು ಚಿಂತನೆ ನಡೆಸಲಾಗಿದೆ. ಶ್ರೀದೇವಿ, ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿಯೂ ಆಮ್ಲಜನಕದ ಅಗತ್ಯಕ್ಕೆ ಅನುಗುಣವಾಗಿ ಹಾಸಿಗೆಗಳನ್ನು ಬಳಸಿಕೊಳ್ಳಲಾಗಿದೆ ಎಂದರು.

ಸಿದ್ಧಗಂಗಾ ಆಸ್ಪತ್ರೆಯಿಂದಲೂ ಸರ್ಕಾರದ ಆದೇಶದನ್ವಯ ಹಾಸಿಗೆಗಳನ್ನು ಪಡೆಯಲಾಗಿದೆ. ಜಿಲ್ಲೆಯಲ್ಲಿ ಜಿಲ್ಲಾಡಳಿತದ ಸೂಕ್ತ ನಿರ್ವಹಣೆಯಿಂದಾಗಿ ಆಮ್ಲಜನಕದ ಕೊರತೆ ನಡುವೆಯೂ ಕೋವಿಡ್ ನಿರ್ವಹಣೆ ಮಾಡಲಾಗುತ್ತಿದೆ ಎಂದರು.

ಸಿಎಂಗೆ ಜೆಸಿಎಂ ನೀಡಿದ ಬೇಡಿಕೆ ಪಟ್ಟಿ : ಜಿಲ್ಲೆಗೆ ಮಂಜೂರಾಗಿರುವ 100 ಹಾಸಿಗೆಗಳ ಎಂಸಿಎಚ್ ಆಸ್ಪತ್ರೆಯನ್ನು 200 ಹಾಸಿಗೆಗೆ ಹೆಚ್ಚಿಸುವ ಜತೆಗೆ ಕೂಡಲೇ ಕಾಮಗಾರಿ ಆರಂಭಿಸಬೇಕು, ಜಿಲ್ಲೆಯಲ್ಲಿ 6000 ಹೆರಿಗೆ ಆಗುತ್ತಿದ್ದು, ಎಂಸಿಎಚ್ ಆಸ್ಪತ್ರೆ ನಿಮಾಣವಾದಲ್ಲಿ ಹೆರಿಗೆ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಇದಲ್ಲದೆ ಕ್ಯಾನ್ಸರ್ ಆಸ್ಪತ್ರೆ ನಿಮಾಣಕ್ಕಾಗಿ ಸರ್ಕಾರದಿಂದ 100 ಕೋಟಿ ರೂ. ಬಿಡುಗಡೆ ಆಗಿದ್ದರೂ ಟೆಂಡರ್ ಪ್ರಕ್ರಿಯೆ ಅಂತಿಮಗೊಳ್ಳದೆ ಕಾಮಗಾರಿ ಪ್ರಾರಂಭವಾಗಿಲ್ಲ. ಇದನ್ನೂ ಬೇಗ ಮಾಡಿಕೊಡಬೇಕು ಎಂದರು.ಕರೊನಾ ಪತ್ತೆಹಚ್ಚಲು ಸಿಟಿ ಸ್ಕ್ಯಾನ್ ಪರಿಣಾಮಕಾರಿ ವಿಧಾನವಾಗಿದ್ದು ಜಿಲ್ಲೆಯಲ್ಲಿ ಕನಿಷ್ಠ 4 ಕಡೆ ಸಿಟಿಸ್ಕ್ಯಾನ್ ವ್ಯವಸ್ಥೆ ಮಾಡಿಕೊಡಬೇಕು, ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರಿನಲ್ಲಿ ಸಮುದಾಯ ಆರೋಗ್ಯ ಕೇಂದ್ರ ಪ್ರಾರಂಭಿಸಬೇಕು ಎಂದು ಸಭೆಯಲ್ಲಿ ಕೋರಿದರು. ಮನವಿ ಆಲಿಸಿದ ಸಿಎಂ ಬಿಎಸ್​ವೈ ಈಡೇರಿಸುವ ಭರವಸೆ ನೀಡಿದರು, ಡಿಸಿಎಂ ಡಾ.ಅಶ್ವತ್ಥನಾರಾಯಣ ಮಾತನಾಡಿ, ಸರ್ಕಾರ ಮೊದಲ ಆದ್ಯತೆಯನ್ನು ಆರೋಗ್ಯಕ್ಕೆ ನೀಡಿದೆ, ಆಸ್ಪತ್ರೆಗಳ ಸಿಬ್ಬಂದಿಗಳ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗಿದೆ, ಅಗತ್ಯವಿರುವ ಕಡೆ ಆಕ್ಸಿಜನ್ ಉತ್ಪಾದನೆಗೆ ಸೂಕ್ತ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಆಕ್ಸಿಜನ್ ಘಟಕ ಸ್ಥಾಪನೆಗೆ ಅನುಮತಿ : ಜಿಲ್ಲೆಯಲ್ಲಿ ಮೂರು ಆಕ್ಸಿಜನ್ ಘಟಕ ಸ್ಥಾಪನೆಗೆ ಸರ್ಕಾರ ಈಗಾಗಲೇ ಅನುಮತಿ ನೀಡಿದ್ದು, ಆರೋಗ್ಯ ಸಚಿವ ಸುಧಾಕರ್ ಮತ್ತೊಂದು ಘಟಕ ಸ್ಥಾಪನೆಯ ಭರವಸೆ ನೀಡಿದ್ದಾರೆ, ಇದರ ಜತೆಗೆ ಹೈಡಲ್​ಬರ್ಗ್ ಸಿಮೆಂಟ್ ಕಾರ್ಖಾನೆ ತುರುವೇಕೆರೆಯಲ್ಲಿ, ಬಿಇಎಲ್ ಸಂಸ್ಥೆ ಕುಣಿಗಲ್, ವಿಪ್ರೋ ಸಂಸ್ಥೆ ಕೊರಟಗೆರೆಯಲ್ಲಿ ಆಮ್ಲಜನಕ ಘಟಕ ಸ್ಥಾಪನೆ ಮಾಡಲು ಮುಂದೆ ಬಂದಿವೆೆ. ಪಾವಗಡದಲ್ಲಿ ಈಗಾಗಲೇ ಆಮ್ಲಜನಕ ಘಟಕ ಸ್ಥಾಪನೆ ಕಾರ್ಯ ಆರಂಭವಾಗಿದೆ. ಜಿಲ್ಲಾಸ್ಪತ್ರೆಗೆ ಟಿಮ್ಯಾಕ್ ಕಂಪನಿಯಿಂದಲೂ 2ಕೆಎಲ್ ಆಕ್ಸಿಜನ್ ಘಟಕ ಸ್ಥಾಪನೆಗೆ ಒಪ್ಪಿಕೊಂಡಿದ್ದಾರೆ. ಕರೊನಾ ಮೂರನೇ ಅಲೆ ಕಾಣಿಸಿಕೊಂಡರೂ ಮುಂದಿನ ಜೂನ್ ಅಂತ್ಯ ಅಥವಾ ಜುಲೈ ಆರಂಭದಲ್ಲಿ ತಯಾರಿ ಮಾಡಿಕೊಳ್ಳಲಾಗುವುದು ಎಂದು ಸಚಿವ ಜೆಸಿಎಂ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net