

ಮೈಸೂರು: ಅರ್ಕಾವತಿ ಪ್ರಕರಣ ಮುಚ್ಚಿ ಹಾಕಲು ಬಾಗಿಲು ಹಾಕಿದ್ದ ಲೋಕಾಯುಕ್ತದ ಮುಂದೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಚಾರಣೆ ಹಾಜರಾಗಬೇಕಾಗಿ ಬಂದಿದ್ದು, ನಾಚಿಕೆಗೇಡಿನ ಸಂಗತಿ ಎಂದು ವಿಧಾನ ಪರಿಷತ್ತಿನ ಸದಸ್ಯ ಎಚ್.ವಿಶ್ವನಾಥ್ ಟೀಕಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾದಂತೆ ಹಗರಣ ನಡೆದಿದ್ದ ಅರ್ಕಾವತಿ ಪ್ರಕರಣವನ್ನು ಮುಚ್ಚಿ ಹಾಕಲು ಸಿದ್ದರಾಮಯ್ಯ ಅವರು ಲೋಕಾಯುಕ್ತಕ್ಕೆ ಬಾಗಿಲು ಹಾಕಿದ್ದರು. ಈಗ ಅದೇ ಲೋಕಾಯುಕ್ತ ಮುಂದೆ ವಿಚಾರಣೆಗೆ ಬರುವಂತೆ ಆಗಿದೆ ಎಂದು ಜರಿದರು.
ಯಾವ ಲೋಕಾಯುಕ್ತವನ್ನು ಸಿದ್ದರಾಮಯ್ಯ ಮುಚ್ಚಿದ್ದರೊ ಅದೇ ಲೋಕಾಯುಕ್ತದ ಎದುರು ಮೈಸೂರಿನಲ್ಲೇ ವಿಚಾರಣೆಗೆ ಬಂದಿದ್ದು ನನಗೆ ವೈಯಕ್ತಿಕವಾಗಿ ಬೇಸರ ಇದೆ. ಸಿದ್ದರಾಮಯ್ಯ ಸಿಎಂ ಆದಾಗ ಮೈಸೂರಿನ ಜನ ನಮಗೆಲ್ಲ ನಿವೇಶನ ಬರುತ್ತದೆ ಎಂದು ಅಂದುಕೊಂಡಿದ್ದರು. ಆದರೆ ಸಿದ್ದರಾಮಯ್ಯ ತಮ್ಮ ಪತ್ನಿಗೆ 14 ನಿವೇಶನ ಕೊಡಿಸಿಕೊಂಡರು ಎಂದು ಕುಟುಕಿದರು.
ಮುಖ್ಯಮಂತ್ರಿ ವಿಚಾರಣೆ ವೇಳೆ ಪೊಲೀಸರ ನಡೆ ನಾಚಿಕೆಗೇಡು. ಆರೋಪಿ ಸ್ಥಾನದಲ್ಲಿ ಬಂದ ಮುಖ್ಯಮಂತ್ರಿಗೆ ಪೊಲೀಸರು ಗೌರವ ವಂದನೆ ನೀಡಿದ್ದಾದರೂ ಹೇಗೆ? ಶಿಷ್ಟಾಚಾರ ಎಂದರೇ ಏನು ಎಂಬುದು ಪೊಲೀಸರಿಗೆ ಗೊತ್ತಿದೆಯೇ ಎಂದು ಆಕ್ರೋಶವ್ಯಕ್ತಪಡಿಸಿದರು.
ನಾನು ಕಾಮನ್‌ಮ್ಯಾನ್ ಆಗಿ ಬಂದಿದ್ದೇನೆ ಎಂದು ಹೇಳುವ ಸಿದ್ದರಾಮಯ್ಯ, ಕಾಮನ್‌ಮ್ಯಾನ್ ಆಗಿ ನಡೆದುಕೊಂಡಿದ್ದಾರೆಯೇ? ವಿಚಾರಣೆ ವೇಳೆ ಇವರೆಲ್ಲ ಸೇರಿ ಈ ವ್ಯವಸ್ಥೆಯನ್ನು ಹಾಳು ಮಾಡಿದ್ದಾರೆ ಎಂದು ಟೀಕಿಸಿದರು.