ನೆರೆಗೆ 2 ಸಾವಿರ ಕೋಟಿ ರೂ. ಪರಿಹಾರ ಘೋಷಣೆ

Siddaramaya
Published on

ಕಲಬುರಗಿ: ಪ್ರವಾಹ ಮತ್ತು ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿ ನಲುಗಿರುವ ಕಲ್ಯಾಣ ಕರ್ನಾಟಕ ಸೇರಿದಂತೆ ಉತ್ತರ ಕರ್ನಾಟಕದ ಭಾಗದ ರೈತರ ನೆರವಿಗೆ ಸರ್ಕಾರ ಧಾವಿಸಿದ್ದು, 2 ಸಾವಿರ ಕೋಟಿ ರೂ.ಗೂ ಅಧಿಕ ವಿಶೇಷ ಪರಿಹಾರ ಪ್ಯಾಕೇಜ್​ ಘೋಷಣೆ ಮಾಡಿದೆ. ಈ ಮೂಲಕ ಸಂಕಷ್ಟದಲ್ಲಿರುವ ನೆರೆ ಪೀಡಿತರ ಮತ್ತು ಕೃಷಿಕರ ಕಣ್ಣೀರು ಒರೆಸುವ ಪ್ರಯತ್ನ ಮಾಡಿದೆ.

ಕೇಂದ್ರ ಸರ್ಕಾರದ ಎನ್​ಡಿಆರ್​ಎಫ್​ ನಿಯಮದಂತೆ ನೀಡುವ ಪರಿಹಾರದ ಜತೆಗೆ ಹೆಚ್ಚುವರಿಯಾಗಿ ರಾಜ್ಯ ಸರ್ಕಾರದಿಂದ ಪ್ರತಿ ಹೆಕ್ಟೇರ್​ಗೆ 8,500 ರೂ. ವಿಶೇಷ ಪರಿಹಾರ ನೀಡಲು ನಿರ್ಧರಿಸಿದೆ. ಅಲ್ಲದೇ ನೀರಾವರಿ ಜಮೀನುಗಳಿಗೆ ಹೆಚ್ಚುವರಿಯಾಗಿ 8,500 ಸೇರಿ 25,000 ರೂ. ಪರಿಹಾರ ನೀಡಲಾಗುವುದು. ಬಹು ವಾರ್ಷಿಕ ಬೆಳೆಗಳಿಗೆ ಎನ್​ಡಿಆರ್ಎಫ್​ ನಿಯಮದಂತೆ ಹೆಕ್ಟೇರ್​ಗೆ 22,500 ರೂ. ಇದ್ದು, ರಾಜ್ಯ ಸರ್ಕಾರ 8,500 ರೂ. ಸೇರಿಸಿ 31,000 ನೀಡಲಾಗುವುದು ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆಗಳ ಹೊರೆಯ ನಡುವೆಯೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಳ್ಳುವ ಮೂಲಕ ಸಂತ್ರಸ್ಥರಿಗೆ ಒಂದಿಷ್ಟು ಅನುವು ಮಾಡಿಕೊಡಲು ಮುಂದಾಗಿದೆ.ಪ್ರವಾಹ ಪೀಡಿತ ಪ್ರದೇಶದಲ್ಲಿನ ತೊಂದರೆಗಳನ್ನು ಕಣ್ಣಾರೆ ಕಂಡು ಮರುಗಿದ ಸಿಎಂ ಮಹತ್ವದ ಹೆಜ್ಜೆ ಇರಿಸಿದಂತಾಗಿದೆ.

ಭೀಮಾ, ಕಾಗಿಣಾ,ಮಾಂಜ್ರಾ ನದಿಗಳ ಪ್ರವಾಹದಿಂದ ತತ್ತರಿಸಿರುವ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಸಚಿವರ ಜತೆಗೂಡಿ ವೈಮಾನಿಕ ಸಮೀಕ್ಷೆ ಕೈಗೊಂಡ ನಂತರ ನಗರದ ವಿಕಾಸ ಸೌಧದಲ್ಲಿ ಸಚಿವರು,ಶಾಸಕರು,ಅಧಿಕಾರಿಗಳ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಪರಿಹಾರ ಪ್ಯಾಕೇಜ್​ನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರಕಟಿಸಿ, ಸರ್ಕಾರ ಸದಾ ರೈತರು ಹಾಗೂ ಸಂತ್ರಸ್ಥರ ಜತೆಗಿರಲಿದೆ ಎಂದು ಅಭಯ ನೀಡಿದರು.

ಪ್ರಾಥಮಿಕ ಮಾಹಿತಿಯಂತೆ ಪ್ರವಾಹದಿಂದ ನಾಲ್ಕು ಜಿಲ್ಲೆಗಳಲ್ಲಿ ಬೆಳೆ ಹಾನಿ ಅನುಭವಿಸಿರುವ ಖುಷ್ಕಿ ಜಮೀನಿಗೆ ಎನ್​ಡಿಆರ್​ ನಿ 17,000 ರೈತರಿಗೆ, ನೀರಾವರಿ ಆಶ್ರಿತ 25,500 ರೈತರಿಗೆ ಹಾಗೂ 31 ಸಾವಿರ ಬಹುವಾರ್ಷಿಕ ಬೆಳೆ ಬೆಳೆದಿದ್ದ ರೈತರು ಹೆಚ್ಚುವರಿ ಪರಿಹಾರ ಮೊತ್ತ ಪಡೆಯಲಿದ್ದಾರೆ. ನಿಖರವಾದ ಬೆಳೆ ಹಾನಿ ಮಾಹಿತಿ ಕಲೆ ಹಾಕಲು ಮಳೆ ಮತ್ತು ಪ್ರವಾಹ ಕಡಿಮೆಯಾದ ಬಳಿಕ ಮತ್ತೊಮ್ಮೆ ಜಂಟಿ ಸಮೀಕ್ಷೆ ನಡೆಸಲಾಗುವುದು. ವರದಿ ಬಂದ ನಂತರ ರೈತರಿಗೆ ಪರಿಹಾರ ವಿತರಣೆ ಮಾಡಲಾಗುವುದು ಎಂದರು. ಅಲ್ಲದೆ ಅತಿವೃಷ್ಟಿ ಹಾಗೂ ಮಹಾಪೂರದಿಂದ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ರೈತರು ಹಾಗೂ ಸಂತ್ರಸ್ಥರ ನೆರವಿಗೆ ಧಾವಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು. ಈ ಕುರಿತು ಪತ್ರ ಬರೆದು ಅಥವಾ ನಿಯೋಗ ತೆಗೆದುಕೊಂಡು ಹೋಗಿ ಪರಿಹಾರ ನೀಡುವಂತೆ ಕೋರಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net