ಸಿಎಂ, ಡಿಸಿಎಂ ಒಗ್ಗಟ್ಟಾಗಿಲ್ಲ

Pralhad Joshi 3
Published on

ಹುಬ್ಬಳ್ಳಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಒಗ್ಗಟ್ಟಾಗದಿದ್ದರೆ ಕಷ್ಟ ಎಂದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ರ್ಖಗೆ ಅವರ ಹೇಳಿಕೆಯಿಂದಲೇ ಸಿಎಂ, ಡಿಸಿಎಂ ಒಗ್ಗಟ್ಟಾಗಿಲ್ಲ ಎಂಬುದು ಗೊತ್ತಾಗುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

ನಗರದಲ್ಲಿ ಭಾನುವಾರದಂದು ಹುಬ್ಬಳ್ಳಿ ಹಲಗೆ ಹಬ್ಬದ ಲೋಗೋ ಅನಾವರಣಗೊಳಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪ್ರಲ್ಹಾದ ಜೋಶಿ, ರಾಜ್ಯ ಕಾಂಗ್ರೆಸ್​ ಸರ್ಕಾರದಲ್ಲಿ ಹಾಗೂ ಆ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ. ಸಾಕಷ್ಟು ಒಳಜಗಳ ನಡೆಯುತ್ತಿವೆ ಎಂದರು.

2029ರ ಬಜೆಟ್​ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಗ ಮಂಡಿಸುವುದಾಗಿ ಕಾಂಗ್ರೆಸ್​ನ ಕೆಲವರು ಹೇಳುತ್ತಿರುವುದು ಆ ಪಕ್ಷದಲ್ಲಿರುವ ಭಿನ್ನಮತಕ್ಕೆ ಮತ್ತೊಂದು ಕನ್ನಡಿ ಎಂದು ಟೀಕಿಸಿದರು.

ವಿದೇಶಿ ಪ್ರವಾಸಿಗರ ಮೇಲೆ ಹಲ್ಲೆ ನಡೆದಿರುವ ಹಲ್ಲೆ ಸರ್ಕಾರದ ವೈಪಲ್ಯಕ್ಕೆ ಹಿಡಿದಿರುವ ಕನ್ನಡಿ. ಪೊಲೀಸ್​ ಇಲಾಖೆಯಲ್ಲಿ ವರ್ಗಾವಣೆ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಹಣ ಕೊಟ್ಟು ವರ್ಗಾವಣೆ ಮಾಡಿಸಿಕೊಂಡು ಬಂದಿರುವ ಪೊಲೀಸರು, ಸಹಜವಾಗಿಯೇ ತಾವು ನೀಡಿರುವ ಹಣವನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಾರೆ. ಇದರಿಂದ ಭ್ರಷ್ಟಾಚಾರ ಹೆಚ್ಚಾಗಿ, ಹಲ್ಲೆ, ದೊಂಬಿಯಂತಹ ಟನೆಗಳು ನಡೆಯುತ್ತವೆ ಎಂದು ದೂರಿದರು.

ಡಿ ಲಿಮಿಟೇಶನ್​ ವಿಚಾರದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶದ ಸಂಸದರು ಸಂಸತ್ತಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದೇವೆ. ದಕ್ಷಿಣ ಭಾರತದ ರಾಜ್ಯಗಳಿಗೆ ಸೀಟು ಕಡಿಮೆ ಮಾಡುವುದಿಲ್ಲ ಎಂದು ಹೇಳಿದರು.

ಹುಬ್ಬಳ್ಳಿಯಲ್ಲಿ ನಡೆದ ಅಂಗನವಾಡಿ ಆಹಾರ ಸಾಮಗ್ರಿಯನ್ನು ಅಕ್ರಮವಾಗಿ ಮಾರಾಟ ಮಾಡಿರುವ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸದೇ ಇರುವುದಕ್ಕೆ ತಮ್ಮ ಇಲಾಖೆ ವೈಲ್ಯ ಕಾರಣವೆಂದು ಪೊಲೀಸ್​ ಆಯುಕ್ತರು ಒಪ್ಪಿಕೊಂಡಿರುವುದಕ್ಕೆ ಏನು ಕಾರಣ ? ಎಂದು ಪ್ರಶ್ನಿಸಿದರು. ಪೊಲೀಸ್​ ಆಯುಕ್ತರು ತಕ್ಷಣ ಆರೋಪಿಗಳನ್ನು ಬಂಧಿಸಬೇಕು. ಇಲ್ಲದಿದ್ದರೆ ಬಂಧನಕ್ಕೆ ಯಾರ ಒತ್ತಡ ಅಡ್ಡಿಯಾಗುತ್ತಿದೆ ಎಂಬುದನ್ನು ಬಹಿರಂಗ ಪಡಿಸಲಿ ಎಂದು ಒತ್ತಾಯಿಸಿದರು.

ಈ ಬಗ್ಗೆ ಸರ್ಕಾರ ಜವಾಬ್ದಾರಿಯಿಂದ ನಡೆದುಕೊಂಡು, ಉತ್ತರ ನೀಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net