ಸಿಎಂ, ಡಿಸಿಎಂ ಇಬ್ಬರೂ ಅನ್ಯೋನ್ಯವಾಗಿದ್ದಾರೆ: ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ

BLY- 24-5
ಎನ್.ಚಲುವರಾಯಸ್ವಾಮಿ
Published on

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಹಳ ಅನ್ಯೋನ್ಯವಾಗಿದ್ದಾರೆ. ಯಾರು ಏನೇ ಕುತಂತ್ರ ಮಾಡಿದರೂ ಅವರನ್ನು ಬೇರೆ ಮಾಡಲು ಅಗಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಆಷಾಢ ಶುಕ್ರವಾರದ ಅಂಗವಾಗಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಅವರು, ನಾಡಿನಲ್ಲಿ ಒಳ್ಳೆ ಮಳೆ, ಬೆಳೆಯಾಗಿದೆ. ಎಲ್ಲರಿಗೂ ಸಮೃದ್ಧಿ ತರಲಿ ಎಂದು ದೇವರನ್ನು ಕೇಳಿಕೊಂಡಿದ್ದೇನೆ ಎಂದರು.

ಯಾರ‌್ಯಾರೋ ಏನೇನೋ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ ನಮ್ಮ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಹೊಂದಾಣಿಕೆಯಿಂದ ಇದ್ದಾರೆ. ಅವರನ್ನು ದೂರ ಮಾಡಲಾಗಲ್ಲ ಎಂದರು.

ಪೂರ್ಣಾವಧಿ ಸಿಎಂ ಆಗಿ ಸಿದ್ದರಾಮಯ್ಯ ಅವರೇ ಮುಂದುವರಿಯಬೇಕಾ? ಬೇಡವಾ? ಎನ್ನುವುದನ್ನು ನಿರ್ಧಾರ ಮಾಡುವವರು ಹೈಕಮಾಂಡ್. ಈ ಬಗ್ಗೆ ಯಾರಾದರು ಹೇಳಿಕೆ ನೀಡುವುದು ಸರಿಯಲ್ಲ ಎಂದರು.

ಮಂಡ್ಯದಲ್ಲಿ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ದಿಶಾ ಸಭೆ ಕರೆದಿದ್ದು, ಈ ಸಭೆಯಲ್ಲಿ ನಾನು ಭಾಗಿಯಾಗಲ್ಲ ಎಂದು ಹೇಳಿದರು.

ಕೆಡಿಪಿ ಸಭೆಗೆ ಸಂಸದರು ಭಾಗವಹಿಸಬೇಕು. ಆದರೆ ಕುಮಾರಸ್ವಾಮಿ ಬರುವುದೇ ಇಲ್ಲ. ಈಗ ಅವರು ಕರೆದಿರುವ ಸಭೆಯಲ್ಲಿ ನಾನು ಕೂಡ ಭಾಗವಹಿಸಲ್ಲ. ಅವರು ಜಿಲ್ಲೆಗೆ ಏನು ಮಾಡಬೇಕೆಂದಿರುವರೋ ಮಾಡಲಿ. ಏನು ಯೋಜನೆ ಜಾರಿಗೊಳಿಸಬೇಕೋ ಜಾರಿಗೊಳಿಸಲಿ ಎಂದರು.

ಅವರು ದೊಡ್ಡ ಮಂತ್ರಿ ಇದ್ದಾರೆ. ರಾಜ್ಯ, ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತರಲಿ. ನೀರಾವರಿ ಅಥವಾ ಕೈಗಾರಿಕೆ ಕ್ಷೇತ್ರಕ್ಕೆ ಉತ್ತೇಜನ ನೀಡಲಿ. ಅವರಿಗೆ ಒಳ್ಳೇಯದಾಗಲಿ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net