

ತುಮಕೂರು ; ಶ್ರಮದ ಕೃಷಿಗೆ ಹೆಸರಾಗಿರುವ ತಿಗಳ ಸಮುದಾಯದ ಪ್ರಮುಖ ಮೂರು ಬೇಡಿಕೆಗಳ ಈಡೇರಿಕೆ ಕುರಿತು ಸಿಎಂ ಜತೆಗೆ ಮಾತನಾಡುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.
ನಗರದ ಗಾಜಿನಮನೆಯಲ್ಲಿ ಸೋಮವಾರ ಅಗ್ನಿವಂಶ ಕ್ಷತ್ರಿಯ ತಿಗಳ ಸಮಾಜ ಆಯೋಜಿಸಿದ್ದ ತಿಗಳ ಸಮುದಾಯದ ಮೂಲ ಪುರುಷ ಶ್ರೀ ಅಗ್ನಿಬನ್ನಿರಾಯಸ್ವಾಮಿ ಜಯಂತಿ ಉದ್ಘಾಟಿಸಿ ಮಾತನಾಡಿದರು. ತಿಗಳ ಸಮುದಾಯ ಕೃಷಿಯನ್ನೇ ನಂಬಿ ಬದುಕುತ್ತಿದ್ದು, ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಮುಂದುವರಿಯಲು ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಸರ್ಕಾರ ನೀಡಲು ಸಿದ್ಧವಿದೆ ಎಂದರು.
ನಮ್ಮ ಸರ್ಕಾರ, ತಳ ಸಮುದಾಯಗಳು ಘನತೆಯಿಂದ ಬದುಕಬೇಕೆಂಬ ಕಾರಣಕ್ಕೆ ಎಲ್ಲ ರೀತಿಯ ಸೌಲಭ್ಯ ಒದಗಿಸಿತ್ತು. ಪ್ರಸ್ತುತ ಸರ್ಕಾರ ಕೂಡ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ 400 ಕೋಟಿ ರೂ. ಮೀಸಲಿಟ್ಟಿದ್ದು, ಇದರ ಸೌಲಭ್ಯ ಪಡೆದು ಎಲ್ಲರೂ ಅಭಿವೃದ್ಧಿ ಹೊಂದಬೇಕು ಎಂದರು. ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ನಿಮ್ಮ ಸಮುದಾಯ ನೋಡಿ ಕಲಿಯಬೇಕಾಗಿದೆ. ಯಜಮಾನರ ಆಣತಿಯಂತೆ ಇಂದಿಗೂ ಒಗ್ಗಟ್ಟು ಕಾಪಾಡಿಕೊಂಡು ಬಂದಿದ್ದೀರಿ, ಇದೇ ಒಗ್ಗಟ್ಟು ಮುಂದುವರಿಯಲಿ, ಶಿಕ್ಷಣಕ್ಕೆ, ಅದರಲ್ಲಿಯೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ, ಅವರು ಸ್ವಾವಲಂಬಿಯಾಗಿ ಬದುಕಲು ವೇದಿಕೆ ನಿರ್ಮಿಸಬೇಕಿದೆ ಎಂದರು.
ಉನ್ನತ ಶಿಕ್ಷಣ ಸಚಿವ ಡಾ.ಸಿ.ಅಶ್ವತ್ಥನಾರಾಯಣ ಮಾತನಾಡಿ, ತಿಗಳ ಸಮುದಾಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ, ಅನೇಕ ಇತಿಹಾಸ, ಪುರಾಣಗಳಲ್ಲಿಯೂ ಈ ಸಮುದಾಯದ ಉಲ್ಲೇಖವಿರುವುದು ಹೆಮ್ಮೆ ಪಡುವಂತಹ ವಿಚಾರ ಎಂದರು.
ಸಮುದಾಯದ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯುವತ್ತ ಗಮನಹರಿಸಿ, ಹಿಂದುಳಿದ ವರ್ಗದ ಅಭಿವೃದ್ಧಿಗೆ ಮೀಸಲಿಟ್ಟಿರುವ ಅನುದಾನದಲ್ಲಿ ನಿಮ್ಮ ಸಮುದಾಯದ ಹಿರಿಯರು ಯಾವ ಕಾರ್ಯಕ್ರಮ ರೂಪಿಸಲು ಸಲಹೆ ನೀಡುತ್ತಾರೋ ಅದೇ ಕಾರ್ಯಕ್ರಮ ರೂಪಿಸಿ, ಅವರೂ ಇತರರಂತೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು. ರಾಜ್ಯ ಅಗ್ನಿವಂಶ ಕ್ಷತ್ರಿಯ ತಿಗಳ ಮಹಾಸಭಾ ಅಧ್ಯಕ್ಷ ಆಂಜನೇಯ, ಸಂಸದ ಜಿ.ಎಸ್.ಬಸವರಾಜು, ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಶಾಸಕ ಬಿ.ಸುರೇಶಗೌಡ ಮಾತನಾಡಿದರು.
ಅಣ್ಣಪ್ಪನಹಳ್ಳಿ ಶ್ರೀ ಶನೇಶ್ವರ ಮಠದ ಶ್ರೀ ಸೋಮಶೇಖರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಗರದ ಬಿಜಿಎಸ್ ವೃತ್ತದಿಂದ ಆರಂಭವಾದ ಅಗ್ನಿ ಬನ್ನಿರಾಯಸ್ವಾಮಿ ಮೆರವಣಿಗೆಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಚಾಲನೆ ನೀಡಿದರು. ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್, ಸಮುದಾಯದ ಮುಖಂಡರಾದ ಉದಯಸಿಂಗ್, ಸುಬ್ಬಣ್ಣ, ಮಾಜಿ ಸಚಿವ ಸೊಗಡು ಶಿವಣ್ಣ ಮತ್ತಿತರರು ಇದ್ದರು.
ಸರ್ಕಾರದ ಮುಂದೆ 3 ಬೇಡಿಕೆ ಸಮಾಜದ ಎಲ್ಲ ವರ್ಗದ ಹಿಂದುಳಿದಿರುವ ತಿಗಳ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಪ್ರಮುಖ ಮೂರು ಬೇಡಿಕೆಯನ್ನು ಸರ್ಕಾರದ ಮುಂದಿಡಲಾಯಿತು. ರಾಜ್ಯ ಅಗ್ನಿವಂಶ ತಿಗಳ ಅಭಿವೃದ್ಧಿ ನಿಗಮ ಸ್ಥಾಪನೆ, ಅಗ್ನಿಬನ್ನಿರಾಯಸ್ವಾಮಿ ಜಯಂತಿ ಆಚರಣೆ ಹಾಗೂ ತುಮಕೂರಿನ ಕುಂದೂರಿನಲ್ಲಿ ಅಗ್ನಿಬನ್ನಿರಾಯಸ್ವಾಮಿ ದೇವಾಲಯ ಮತ್ತು ಪ್ರಸಾದ ನಿಲಯ ಸ್ಥಾಪನೆಗೆ ಅಗತ್ಯವಿರುವ 1.09 ಎಕರೆ ಜಮೀನು ಮಂಜೂರು ಬೇಡಿಕೆ ಮಂಡಿಸಲಾಯಿತು. ಸಮುದಾಯವನ್ನು ಪ್ರವರ್ಗ 1ಕ್ಕೆ ಸೇರಿಸಬೇಕು ಎಂಬ ಬೇಡಿಕೆಯೂ ಕೇಳಿಬಂತು.
ಶ್ರಮಕ್ಕೆ ಹೆಸರಾಗಿರುವ ತಿಗಳ ಸಮುದಾಯದ ಅಭಿವೃದ್ಧಿಗೆ ಸರ್ಕಾರದಿಂದ ಆಗಬೇಕಿರುವ ಕೆಲಸಗಳನ್ನು ಮಾಡಿಸಿಕೊಡುತ್ತೇನೆ, ದೇವಾಲಯ ನಿರ್ಮಾಣಕ್ಕೆ ನನ್ನ ಸ್ವಂತ ಹಣದಲ್ಲಿ 25 ಲಕ್ಷ ರೂ. ನೀಡುತ್ತೇನೆ. ಬಿ.ಎಸ್.ಯಡಿಯೂರಪ್ಪ ಮಾಜಿ ಸಿಎಂ