

ತುಮಕೂರು : ವಿವಿ ಆಂತರಿಕ ನಿಧಿಯನ್ನು ನೂತನ ಕ್ಯಾಂಪಸ್‌ನಲ್ಲಿ ಕಟ್ಟಡ ನಿರ್ಮಾಣಕ್ಕೆ ಬಳಸುವ ವಿವಾದ ರಾಜ್ಯಪಾಲರು, ಸಿಎಂ, ಉನ್ನತ ಶಿಕ್ಷಣ ಇಲಾಖೆಗೂ ತಲುಪಿದೆ. ರೈಟ್ಸ್ ಸಂಸ್ಥೆಗೆ ಕಾಮಗಾರಿಯ ಬಾಕಿ ಹಣ ಪಾವತಿಸದಂತೆ ಸಿಂಡಿಕೇಟ್ ಸದಸ್ಯರು ಮಂಗಳವಾರ ಪತ್ರ ಬರೆದು ಆಗ್ರಹಿಸಿದ್ದಾರೆ.
ಹೊಸ ಕ್ಯಾಂಪಸ್ ನಿರ್ಮಾಣ ಅಗತ್ಯವಿದೆಯಾದರೂ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಶುಲ್ಕವನ್ನು ಕಟ್ಟಡ ಕಾಮಗಾರಿಗೆ ಬಳಸಬಾರದು, ಹೊಸ ಕಾಮಗಾರಿಗೆ ಸರ್ಕಾರದಿಂದ ವಿಶೇಷ ಅನುದಾನ ತರಲು ಒತ್ತಾಯಿಸೋಣ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಆಂತರಿಕ ಸಂಪನ್ಮೂಲದಿಂದ 12 ಕೋಟಿ ರೂ. ಬಳಕೆ ಮಾಡಲಾಗಿದೆ, ರೈಟ್ಸ್ ಸಂಸ್ಥೆಯ ಕಾಮಗಾರಿ ಪರಿಶೀಲನೆಗೆ ವಿವಿ ನೇಮಿಸಿದ್ದ ತಾಂತ್ರಿಕ ಸಮಿತಿ ಕೂಡ ನ್ಯೂನತೆ ಗುರುತಿಸಿದ್ದು, ಈ ಹಂತದಲ್ಲಿ ಸಂಸ್ಥೆಗೆ ಹಣ ನೀಡುವುದು ಸರಿಯಲ್ಲ ಎಂದು ಅಭಿಪ್ರಾಯಪಡಲಾಗಿದೆ.
ತುಮಕೂರಿನ ವಿವಿ ಆವರಣದಲ್ಲಿ ಕಳೆದ ನಾಲ್ಕು ವರ್ಷದಿಂದಲೂ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ, ಈ ಕ್ಯಾಂಪಸ್ ಅಭಿವೃದ್ಧಿ ನಿರ್ಲಕ್ಷಿಸಿರುವುದಕ್ಕೆ ಕಾರಣ ಬಹಿರಂಗವಾಗಬೇಕು ಎಂದು ಆಗ್ರಹಿಸಲಾಗಿದೆ.
ಆಡಳಿತಾವಧಿಯ ಕೊನೆಯ ತಿಂಗಳಲ್ಲಿ ಆಂತರಿಕ ನಿಧಿಯ 8 ಕೋಟಿ ರೂಪಾಯಿಯನ್ನು ರೈಟ್ಸ್ ಸಂಸ್ಥೆಗೆ ನೀಡಲು ಮುಂದಾಗಿರುವ ಕುಲಪತಿ ಅವರ ನಡೆ ಅನುಮಾನಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಹಣ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಸರ್ಕಾರ ಹಾಗೂ ರಾಜ್ಯಪಾಲರಿಂದ ನಾಮನಿರ್ದೇಶನವಾಗಿರುವ ಸಿಂಡಿಕೇಟ್ ಸದಸ್ಯರು ಪತ್ರ ಬರೆದು ಮನವಿ ಮಾಡಿದ್ದಾರೆ.
ಬಡ ವಿದ್ಯಾರ್ಥಿಗಳಿಂದ ಶುಲ್ಕದ ರೂಪದಲ್ಲಿ ವಸೂಲಿ ಮಾಡಿರುವ ಹಣವನ್ನು ಕಟ್ಟಡ ನಿರ್ಮಾಣಕ್ಕೆ ಬಳಸಲು ನಮ್ಮ ಒಪ್ಪಿಗೆ ಇಲ್ಲ, ಕಟ್ಟಡ ನಿರ್ಮಿಸಲು ಸರ್ಕಾರದ ಅನುದಾನ ತರಲಿ, ವಿದ್ಯಾರ್ಥಿಗಳ ಹಣ ವಿದ್ಯಾರ್ಥಿಗಳಿಗೆ ಬಳಕೆಯಾಗಬೇಕು. ಈ ಅಂಶವನ್ನು ಪತ್ರದ ಮೂಲಕ ಸರ್ಕಾರ ಹಾಗೂ ರಾಜ್ಯಪಾಲರ ಗಮನಕ್ಕೆ ತಂದಿದ್ದೇವೆ. ರಾಜು, ಸಿಂಡಿಕೇಟ್ ಸದಸ್ಯ