ಉತ್ತರಾಧಿಕಾರಿ ಚರ್ಚೆಗೆ ಜಾರಕಿಹೊಳಿ ಸ್ಪಷ್ಟನೆ

IMG-20251023-WA0051.jpg
Published on

ಬೆಳಗಾವಿ: ಸಿದ್ದರಾಮಯ್ಯ ನಂತರ ನಾಯಕತ್ವ ಮುಂದುವರೆಸುವ ವಿಚಾರವಾಗಿ ಸಿಎಂ ಪುತ್ರ ಡಾ.ಯತೀಂದ್ರ ನೀಡಿರುವ ಹೇಳಿಕೆಗೆ ಸಚಿವ ಸತೀಶ‌ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು, ಯತೀಂದ್ರ ಅವರು ತಮ್ಮ ವೈಯಕ್ತಿಕ ಅಭಿಪ್ರಾಯ ತಿಳಿಸಿದ್ದಾರೆ. ಅಂತಿಮವಾಗಿ ಯಾರು ನಾಯಕತ್ವ ವಹಿಸಿಕೊಳ್ಳಬೇಕು ಎಂಬುದನ್ನು ಪಕ್ಷ, ಶಾಸಕರು ನಿರ್ಧಾರ ಮಾಡಬೇಕು. ಎಲ್ಲರನ್ನೂ ಜೊತೆಗೆ ಒಯ್ಯುವ ಪ್ರಯತ್ನ ಮಾಡುತ್ತಿದ್ದೇವೆ ಅಂತಿಮವಾಗಿ ಪಕ್ಷವೆ ನಿರ್ಧಾರ ಮಾಡಬೇಕು ಎಂದರು.
ಬೆಳಗಾವಿ ತಾಲ್ಲೂಕಿನ ಕಾಕತಿಯಲ್ಲಿ ಕಿತ್ತೂರು ಉತ್ಸವದ ಮೆರವಣಿಗೆಗೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.
ಅಹಿಂದ ನಾಯಕತ್ವ ಇದ್ದೇ ಇದೆ. ಅದರಲ್ಲಿ ಯಾವುದೇ ಪ್ರಶ್ನೆ ಇಲ್ಲ. ಹಿಂದೆಯೂ ಇದೆ. ಇವತ್ತೂ ಇದೆ. ನಾಳೆಯೂ ಕೂಡ ಇದ್ದೇ ಇರುತ್ತದೆ. ಅಹಿಂದ ನಾಯಕತ್ವ ಇಲ್ಲದೇ ರಾಜಕಾರಣ ಮಾಡಲು ಆಗುವುದಿಲ್ಲ‌‌‌. ಎಲ್ಲವನ್ನೂ ಇವತ್ತೆ ಜೋಡಿಸಲು ಆಗಲ್ಲ. ಅದಕ್ಕಾಗಿ ಕಾಯಬೇಕಾಗುತ್ತದೆ. ಸಿದ್ದರಾಮಯ್ಯ ಅವರು ಇದರಲ್ಲಿ ಪ್ರಮುಖ ಮಾತ್ರ ವಹಿಸಬೇಕಾಗುತ್ತದೆ ಎಂಬುದಕ್ಕೆ ಎಲ್ಲವನ್ನೂ ಇಂದು ಕಾಕತಿಯಲ್ಲಿ ತೀರ್ಮಾನಿಸಲು ಆಗಲ್ಲ‌‌. ಇನ್ನೂ 30 ತಿಂಗಳು ಇದೆ. ನಂತರ ಏನೇನು ಬೆಳವಣಿಗೆ ಆಗುತ್ತದೆ‌. ಪಕ್ಷ, ಶಾಸಕರು, ಆಗಿನ ವಾತಾವರಣದ ಮೇಲೆ ನಿರ್ಧಾರ ಆಗುತ್ತದೆ ಎಂದು ವಿವರಿಸಿದರು.
ಸಿಎಂ ಸಿದ್ದರಾಮಯ್ಯ ಪುತ್ರ ಹೇಳಿಕೆ ನೀಡಿದ್ದಕ್ಕೆ ಅಷ್ಟು ಮಹತ್ವ ಪಡೆದುಕೊಂಡಿದೆ ಎಂಬ ವಿಚಾರಕ್ಕೆ ಅದು ಅವರ ವಯಕ್ತಿಕ ಅಭಿಪ್ರಾಯ ಎಂದು ಈಗಾಗಲೇ ಹೇಳಿದ್ದೇನೆ. ಎಲ್ಲರಿಗೂ ತಮ್ಮ ಅಭಿಪ್ರಾಯ ತಿಳಿಸಲು ಅಧಿಕಾರ ಮತ್ತು ಸ್ವತಂತ್ರರಾಗಿದ್ದಾರೆ. ಹಾಗಾಗಿ, ಹೇಳಿದ್ದಾರಷ್ಟೇ. ಮಂದೆ ಏನಾಗುತ್ತದೆ ಅಂತಾ ನೋಡೋಣ ಎಂದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗಿ ತಾವು ಅಧಿಕಾರ ವಹಿಸಿಕೊಳ್ಳುತ್ತಿರಿ ಎಂಬ ಚರ್ಚೆ ಆಗುತ್ತಿದೆ ಎಂಬುದಕ್ಕೆ ಅದು ನನಗೆ ಗೊತ್ತೇ ಇಲ್ಲ ಎಂದಷ್ಟೇ ಹೇಳಿದ ಅವರು, ನಾವು 2028ಕ್ಕೆ ಸಿಎಂ ಕ್ಲೈಮ್ ಮಾಡುತ್ತೇವೆ ಅಂತಾ ಈ ಮುಂಚೆಯೇ ಹೇಳಿದ್ದೇವೆ. ಅದನ್ನು ಪಕ್ಷ ತೀರ್ಮಾನ ಮಾಡಬೇಕು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net