

ಚಳ್ಳಕೆರೆ: ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ನೈತಿಕತೆ ಮತ್ತು ಸಮಾಜಮುಖಿಯಾಗಿ ಬೆಳೆಯಲು ಸ್ಥೈರ್ಯ ತುಂಬುತ್ತದೆ ಎಂದು ಶಾಲಾ ಸಮಿತಿ ಅಧ್ಯಕ್ಷ ಒ.ಟಿ.ತಿಪ್ಪೇಸ್ವಾಮಿ ಹೇಳಿದರು.
ತಾಲೂಕಿನ ಬಾಲೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಮಜೋಗಿಹಳ್ಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದಿನ ಸ್ಪರ್ಧಾ ಯುಗದಲ್ಲಿ ಮಕ್ಕಳು ಓದಿನ ಜತೆಯಲ್ಲಿ ಇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಪ್ರಾಥಮಿಕ ಹಂತದಲ್ಲಿ ವಿದ್ಯಾರ್ಥಿಗಳ ಕ್ರಿಯಾಶೀಲತೆ ಕಲಿಕಾ ಚಟುವಟಿಕೆಗಳಲ್ಲಿ ತೋರಿಸಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಕ್ಲಸ್ಟರ್ ಮಟ್ಟದ ಬಾಲೇನಹಳ್ಳಿ, ಕುರುಡಿಹಳ್ಳಿ, ಗೊಲ್ಲರಹಟ್ಟಿ, ರಾಮಜೋಗಿಹಳ್ಳಿ, ಕರೆಕಾಟ್ಲಹಟ್ಟಿ, ಮುಚ್ಚುಗುಂಟೆ ಶಾಲಾ ಮಕ್ಕಳು ಭಾಗವಹಿಸಿ, ಭಾವಗೀತೆ, ಕಂಠಪಾಠ ಸ್ಪರ್ಧೆ, ಛದ್ಮವೇಷ, ಚಿತ್ರಕಲೆ, ಏಕಪಾತ್ರಾಭಿನಯ ಮತ್ತು ವಿವಿಧ ಕಲಾ ಪ್ರದರ್ಶನಗಳಲ್ಲಿ ಪ್ರೇಕ್ಷಕರ ಗಮನ ಸೆಳೆದರು.
ಬಾಲೇನಹಳ್ಳಿ ಶಾಲೆಯ ವಿದ್ಯಾರ್ಥಿ ಪವನ್ ಗಗನಯಾತ್ರಿ ಪಾತ್ರಧಾರಿಯಾಗಿ ಮೆಚ್ಚುಗೆ ಪಡೆದು ಪ್ರಥಮ ಬಹುಮಾನ ಪಡೆದನು.
ಗ್ರಾಪಂ ಅಧ್ಯಕ್ಷೆ ರಾಧಮ್ಮ, ಸದಸ್ಯರಾದ ಒ.ಟಿ.ರಾಜೇಶ್, ಶಿಲ್ಪಾ, ಜ್ಯೋತಿ, ಶಾಲಾ ಸಮಿತಿ ಸದಸ್ಯರಾದ ಶಂಕರ್‌ಮೂರ್ತಿ, ಆರ್.ಟಿ. ಭೀಮರಾಜ್,
ಜ್ಯೋತಿ, ತಿಮ್ಮಾರೆಡ್ಡಿ, ಪ್ರದೀಪ್, ರೂಬಿ, ಕ್ಲಸ್ಟರ್ ಸಿಆರ್‌ಪಿ ಮಂಜುನಾಥ, ಮುಖ್ಯಶಿಕ್ಷಕ ವಿಶ್ವನಾಥ್, ಎಚ್. ಹನುಮಂತಪ್ಪ, ಕೆ.ಕೊಟ್ರೇಶ್ ಇತರರಿದ್ದರು.