

ಭಾಲ್ಕಿ: ಗ್ರಾಮೀಣ ಭಾಗದ ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರತರುವ ಕೆಲಸ ಪರಿಣಾಮಕಾರಿಯಾಗಿ ಆಗಬೇಕಿದೆ ಎಂದು ಬಿಆರ್‌ಪಿ ಚೇತನಾ ಚನಶೆಟ್ಟಿ ಅಭಿಪ್ರಾಯಪಟ್ಟರು.
ಕಲವಾಡಿ ಗ್ರಾಮದ ಮಹಾತ್ಮಗಾಂಧಿ ಪ್ರೌಢಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಳ್ಳಿ ಪ್ರತಿಭೆಗಳನ್ನು ರಾಜ್ಯ, ರಾಷ್ಟç ಮಟ್ಟದಲ್ಲಿ ಗುರುತಿಸುವಂತಾಗಲು ಸರ್ಕಾರ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಇದರಿಂದ ಅರಳುವ ಪ್ರತಿಭೆಗಳು ಗ್ರಾಮೀಣ ಭಾಗದಲ್ಲಿರುವ ಸತ್ಯಾಂಶ ಗೊತ್ತಾಗಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರೌಢಶಾಲೆ ಮುಖ್ಯ ಶಿಕ್ಷಕ ಕಿರಣಕುಮಾರ ಭಾಟಸಾಂಗವಿ ಮಾತನಾಡಿ, ಕಲವಾಡಿ ಕ್ಲಸ್ಟರ್ ಮಟ್ಟದ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆ ಮಕ್ಕಳು ತುಂಬ ಪ್ರತಿಭಾವಂತರಿದ್ದಾರೆ. ತೀರ್ಪುಗಾರರು ಉತ್ತಮ ಪ್ರತಿಭೆಗಳನ್ನು ಗುರುತಿಸಿ ತಾಲೂಕು ಮಟ್ಟಕ್ಕೆ ಕಳಿಸಿಕೊಡಬೇಕು ಎಂದು ಸಲಹೆ ನೀಡಿದರು.
ನಿವೃತ್ತ ಮುಖ್ಯ ಶಿಕ್ಷಕ ಜಯರಾಜ ದಾಬಶೆಟ್ಟಿ ಮಾತನಾಡಿ, ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಆತ್ಮಸ್ಥೈರ್ಯ ಹೆಚ್ಚಿಸುತ್ತವೆ. ಹೆಚ್ಚಿನ ಮಕ್ಕಳು ಎಲ್ಲ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಶಿಕ್ಷಕರು ಪ್ರೋತ್ಸಾಹಿಸಬೇಕು ಎಂದರು.
ಕ್ಲಸ್ಟರ್ ಸಿಆರ್‌ಪಿ ಸಂತೋಷ ಧಬಾಲೆ ಮಾತನಾಡಿ, ಸೋಲೇ ಗೆಲುವಿನ ಮೆಟ್ಟಿಲು. ಸ್ಪರ್ಧೆಯಲ್ಲಿ ಗೆಲುವು ಸಾಧಿಸಿಲ್ಲ ಎಂಬ ಅಳಲು ಯಾರಲ್ಲೂ ಇರಬಾರದು. ಭಾಗವಹಿಸಿದ ಎಲ್ಲರೂ ಉತ್ತಮ ಪ್ರತಿಭೆಯುಳ್ಳವರೇ ಎಂದು ಹೇಳಿ ಮಕ್ಕಳನ್ನು ಹುರಿದುಂಬಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ ಮಾಳಗೆ ಉದ್ಘಾಟಿಸಿದರು. ಪ್ರಮುಖರಾದ ಮಹಾನಂದ ಆಪ್ಟೆ, ಬಸವರಾಜ ತೇಗಂಪುರೆ, ಅಶೋಕ ಕಲ್ಯಾಣೆ, ಭುವನೇಶ್ವರ ಬಿರಾದಾರ, ಚಂದ್ರಕಾಂತ ತಳವಾಡೆ, ಮಹೇಶ, ಅಶೋಕ ಕುಂಬಾರ, ಸಂದೀಪ ಉಮಾಜಿ, ಗದಗೆಪ್ಪ ಪಾಟೀಲ್, ಸಂಜೀವಕುಮಾರ ಉಪಸ್ಥಿತರಿದ್ದರು.
ಸಂತೋಷ ಧಬಾಲೆ ಸ್ವಾಗತಿಸಿದರು. ಸಂತೋಷ ವಾಡೆ ನಿರೂಪಣೆ ಮಾಡಿದರು. ಅಶೋಕ ಬಿರಾದಾರ ವಂದಿಸಿದರು. ವಿದ್ಯಾರ್ಥಿನಿಯರಾದ ಅಂಬಿಕಾ ಮತ್ತು ಸಂಗಡಿಗರು ಪ್ರಾರ್ಥನಾಗೀತೆ, ಅನುರಾಧಾ ಮತ್ತು ಸಂಗಡಿಗರು ಸ್ವಾಗತ ಗೀತೆ ಹಾಡಿದರು.