

ಚನ್ನಗಿರಿ: ಕ್ರೀಡೆಗಳು ನಮ್ಮನ್ನು ಮಾನಸಿಕ ಮತ್ತು ದೈಹಿಕವಾಗಿ ಸದೃಢರನ್ನಾಗಿ ಮಾಡುತ್ತವೆ. ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ, ಭಾಗವಹಿಸುವಿಕೆ ಮುಖ್ಯ ಎಂದು ತಾಲೂಕು ದೈಹಿಕ ಶಿಕ್ಷಣ ಸಂಯೋಜಕ ಸದಾಶಿವಪ್ಪ ಅಭಿಪ್ರಾಯಪಟ್ಟರು.
ತಾಲೂಕಿನ ಗೊಪ್ಪೇನಹಳ್ಳಿ ಗ್ರಾಮದಲ್ಲಿ 2023-24ನೇ ಸಾಲಿನ ಪಾಂಡೋಮಟ್ಟಿ ಹಾಗೂ ರಾಜಗೊಂಡನಹಳ್ಳಿ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದ ಉದ್ಘಾಟನೆ ನೆರವೇರಿಸಿ ಮಂಗಳವಾರ ಮಾತನಾಡಿದರು.
ಕೆಲ ಶಿಕ್ಷಕರು ಹೆಚ್ಚಿನ ಅಂಕ ಪಡೆಯುವ ಕಡೆಗೆ ಮಾತ್ರ ಗಮನ ಹರಿಸುತ್ತಾರೆ. ಆದರೆ, ಮಕ್ಕಳಿಗೆ ಪಠ್ಯದ ಜತೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡಬೇಕು. ಶಾಲೆಯಲ್ಲಿ ನಡೆಯುವಂತ ಕ್ರೀಡೆಗಳಲ್ಲಿ ಭಾಗವಹಿಸುವುದನ್ನು ಕಲಿಸಬೇಕು ಎಂದು ತಿಳಿಸಿದರು.
ಆಟದಲ್ಲಿ ಶಿಸ್ತು, ಸಮಯಪಾಲನೆ ಮುಖ್ಯ. ಸೋಲು ಗೆಲುವಿನ ಮೆಟ್ಟಿಲು. ಸೋತವರಿಗೆ ಅನುಭವ ಅಧಿಕ. ಗೆದ್ದವರು ಮುಂದೆ ಸೋಲು ಅನುಭವಿಸುತ್ತಾರೆ. ಹಾಗಾಗಿ, ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯವೆಂದರು.
ಕ್ರೀಡೆಯಲ್ಲಿ ಕಬಡ್ಡಿ, ಖೋಖೋ, ವಾಲಿಬಾಲ್, ಥ್ರೋಬಾಲ್ ಮತ್ತು ಅಥ್ಲೆಟಿಕ್ಸ್ ಆಟಗಳು ನಡೆದವು.
ಗೊಪ್ಪೇನಹಳ್ಳಿ ಗ್ರಾಪಂ ಅಧ್ಯಕ್ಷೆ ಸಂಗೀತ, ಎಸ್‌ಡಿಎಂಸಿ ಅಧ್ಯಕ್ಷರಾದ ಪುಷ್ಪವತಿ, ಬಿಇಒ ಜಯಪ್ಪ, ಬಿಆರ್‌ಸಿ ಡಾ.ಎಸ್. ಶಂಕರಪ್ಪ, ಗ್ರಾಪಂ ಸದಸ್ಯೆ ಉಮಾದೇವಿ, ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ರವಿಕಿರಣ್ ಮತ್ತಿತರರಿದ್ದರು.