ಮೂರನೇ ಅಲೆ ಕರ್ನಾಟಕದ ಬಾಗಿಲಿಗೆ ಬಂದು ನಿಂತಿದೆ: ಡಾ. ಸಿ.ಎನ್. ಮಂಜುನಾಥ್

CN Manjunath
Published on

ಬೆಂಗಳೂರು: ಕರೊನಾ ಮೂರನೇ ಅಲೆ ಇನ್ನೂ ಕರ್ನಾಟಕವನ್ನು ಪ್ರವೇಶಿಸಿಲ್ಲ. ರಾಜ್ಯದ ಗಡಿ ಭಾಗದ ಕೆಲವು ಜಿಲ್ಲೆಗಳಲ್ಲಿ ಪ್ರಕರಣಗಳ ಸಂಖ್ಯೆ ಸ್ವಲ್ಪ ಮಟ್ಟಿನ ಏರಿಕೆಯಾಗಿದೆ ಅಷ್ಟೆ. ಆದರೆ ಮೂರನೇ ಅಲೆಯನ್ನು ಬರದಂತೆ ತಡೆಯುವುದು ಜನರ ಕೈಯಲ್ಲೇ ಇದೆ ಎಂದು ಜಯದೇವ ಹೃದ್ರೋಗ ಸಂಸ್ಥೆ ಮುಖ್ಯಸ್ಥ ಡಾ. ಸಿ.ಎನ್. ಮಂಜುನಾಥ್ ಹೇಳಿದ್ದಾರೆ.

ಕ್ಲಬ್‌ಹೌಸ್‌ನ ‘ವಿಜಯವಾಣಿ ಕ್ಲಬ್’ನಲ್ಲಿ ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ವತಿಯಿಂದ ಆಯೋಜಿಸಲಾಗಿದ್ದ ‘ಆರೋಗ್ಯ ಚಿಂತನ’ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘‘ಕರೊನಾ ಮೂರನೇ ಅಲೆ ಯಾವಾಗ ಬರಬಹುದು ಎಂಬ ಚರ್ಚೆ ಎಲ್ಲೆಡೆ ನಡೆದಿದೆ. ಈ ಆತಂಕಕ್ಕೆ ಉತ್ತರ ಜನರಲ್ಲೇ ಇದೆ. ಜನ ಮನಸ್ಸು ಮಾಡಿದರೆ ಮೂರನೆ ಅಲೆಯನ್ನು ಖಂಡಿತಾ ಮುಂದೂಡಬಹುದು. ಇನ್ನು ಸ್ವಲ್ಪ ದಿನಗಳಲ್ಲಿ ಸಾಲು ಸಾಲು ಹಬ್ಬಗಳು ಬರುತ್ತವೆ. ಮೊಹರಂ, ಆಯುಧಪೂಜೆ, ದಸರಾ, ದೀಪಾವಳಿ ಹೀಗೆ. ಇನ್ನು ಕೆಲವೆಡೆ ಹಳ್ಳಿಗಳಲ್ಲಿ ಊರಹಬ್ಬ, ಜಾತ್ರೆ ನಡೀತಿವೆ. ಮನೆಯ ಫಂಕ್ಷನ್‌ಗಳಲ್ಲೂ ಸಾವಿರಾರು ಜನರನ್ನು ಸೇರಿಸ್ತಿದಾರೆ. ಹೀಗೆ ಮಾಡಿದರೆ ಜನರಿಂದಲೇ ಮೂರನೇ ಅಲೆಗೆ ಆಹ್ವಾನ ಸಿಕ್ಕಂತಾಗುತ್ತದೆ’’ ಎಂದು ಎಚ್ಚರಿಸಿದರು.

‘‘ಇದರ ಜತೆ ಜನಪ್ರತಿನಿಧಿಗಳು ಕೂಡ ಜವಾಬ್ದಾರಿಯಿಂದ ವರ್ತಿಸಬೇಕು. ಸಮಾರಂಭಗಳಲ್ಲಿ ಜನರನ್ನು ಹೆಚ್ಚು ಸಂಖ್ಯೆಯಲ್ಲಿ ಸೇರಿಸಬಾರದು. ಗುಂಪು ಇದ್ದಲ್ಲಿ ಕೋವಿಡ್ ಹರಡುತ್ತದೆ, ವೈರಸ್ ತನ್ನಿಂತಾನೇ ಮೂವ್ ಆಗುವುದಿಲ್ಲ. ಜನರೇ ಹರಡುತ್ತಾರೆ. ಹಾಗಾಗಿ ಜನಪ್ರತಿನಿಧಿಗಳು ಕೂಡ ಜವಾಬ್ದಾರಿಯಿಂದ ವರ್ತಿಸಬೇಕು’’ ಎಂದು ಹೇಳಿದರು.

‘‘ಅಮೆರಿಕದಲ್ಲಿ ದಿನಕ್ಕೆ ಒಂದೂವರೆ ಲಕ್ಷ ಹೊಸ ಕೇಸ್‌ಗಳು ಈಗ ವರದಿಯಾಗುತ್ತಿವೆ. ಅದರಲ್ಲಿ 400-500 ಜನ ಸಾವಿಗೆ ಈಡಾಗುತ್ತಿದ್ದಾರೆ. ವ್ಯಾಕ್ಸಿನ್ ಕೊಡುವ ಮೊದಲು ಅಲ್ಲಿ ದಿನಕ್ಕೆ 5-6 ಸಾವಿರ ಜನ ಸಾಯುತ್ತಿದ್ದರು. ಈಗ ಸಂಖ್ಯೆ ಇಳಿದಿದೆ. ಎಲ್ಲರಿಗೂ ವ್ಯಾಕ್ಸಿನ್ ಕೊಟ್ಟಿದ್ದರಿಂದಲೇ ಇದು ಸಾಧ್ಯವಾಯಿತು. ವ್ಯಾಕ್ಸಿನ್ ಮಹತ್ವ ಎಷ್ಟು ಎನ್ನುವುದನ್ನು ಇದು ತೋರಿಸುತ್ತದೆ. ಹಾಗಾಗಿ ಜನ ಹೆಚ್ಚು ಹೆಚ್ಚು ವ್ಯಾಕ್ಸಿನ್ ತೆಗೆದುಕೊಳ್ಳಬೇಕು. ನಮ್ಮ ದೇಶದಲ್ಲಿ ಆಗಸ್ಟ್, ಸೆಪ್ಟೆಂಬರ್‌ನಲ್ಲಿ ಹೆಚ್ಚು ವ್ಯಾಕ್ಸಿನ್ ಲಭ್ಯವಾಗಲಿದೆ. ಬೇರೆ ಬೇರೆ ಕಂಪನಿಗಳ ವ್ಯಾಕ್ಸಿನ್ ಕೂಡ ಬರಲಿವೆ. ಜನರಲ್ಲಿ ಗೊಂದಲ ಬೇಡ. ಕೋವಿಶೀಲ್ಡ್, ಕೋವ್ಯಾಕ್ಸಿನ್ ಎರಡೂ ಪರಿಣಾಮಕಾರಿ. ಅಡ್ಡಪರಿಣಾಮ ಯಾವುದರಿಂದಲೂ ಇಲ್ಲ. ಜ್ವರ, ತಲೆನೋವು ಸಾಮಾನ್ಯ. ವ್ಯಾಕ್ಸಿನ್ ಒಳಗೆ ಹೋಗಿ ಕೆಲಸ ಮಾಡುತ್ತಿದೆ ಎಂಬುದರ ಪ್ರತೀಕ ಅದು. ವ್ಯಾಕ್ಸಿನ್ ಸಂಪೂರ್ಣ ಸುರಕ್ಷಿತವಾಗಿದೆ. 18 ವರ್ಷ ಮೇಲ್ಪಟ್ಟವರೆಲ್ಲರೂ ತೆಗೆದುಕೊಳ್ಳುವುದು ಒಳಿತು’’ ಎಂದು ಸ್ಪಷ್ಟಪಡಿಸಿದರು.

‘‘ನಾನು ವ್ಯಾಕ್ಸಿನ್ ತಗೊಂಡಿದೀನಿ. ನನಗೆ ಕರೊನಾ ಬರಲ್ಲ ಅಂತ ನಿರ್ಲಕ್ಷೃ ಯಾರೂ ಮಾಡಬಾರದು. ವ್ಯಾಕ್ಸಿನ್ ಎಂಬುದು ಪ್ರಿವೆನ್ಷನ್ ಅಲ್ಲ, ಪ್ರೊಟೆಕ್ಷನ್ ಅಷ್ಟೆ. ವ್ಯಾಕ್ಸಿನ್ ತಗೊಂಡ್ರೂ ಕರೊನಾ ಬರಬಹುದು. ಆದ್ರೆ ಮೈಲ್ಡ್ ಸಿಂಪ್ಟಮ್ಸ್ ಇರುತ್ತದೆ. ಕಾಯಿಲೆಯ ತೀವ್ರತೆ ಅದರಿಂದ ಕಡಿಮೆ ಆಗುತ್ತದೆ. ಸಾವಿನ ಪ್ರಮಾಣ ಕಡಿಮೆ ಆಗುತ್ತದೆ. ಅದರ ಜತೆ ಮಾಸ್ಕೂ ಧರಿಸಬೇಕು. ಅದು ನಮ್ಮ ಸಂಗಾತಿಯಾಗಿಯೇ ಇರಬೇಕು. ಇನ್ನು ಸ್ವಲ್ಪ ಕಾಲ ಅದೇ ನಮ್ಮ ಬಾಳ ಸಂಗಾತಿ’’ ಎಂದು ಹೇಳಿದರು.

ಡಾ. ಸಿ.ಎನ್. ಮಂಜುನಾಥ್ ಅವರ 'ಆರೋಗ್ಯ ಚಿಂತನ’ ಸಂವಾದದಲ್ಲಿ ಭಾಗವಹಿಸಲು ಈ ಲಿಂಕ್​ ಮೇಲೆ ಕ್ಲಿಕ್​ ಮಾಡಿ: https://www.clubhouse.com/event/M8wY4q9b

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net