

ಬೆಂಗಳೂರು: ಎರಡು ದಿನಗಳಿಂದ ಭಾರೀ ಮಳೆ ಕಂಡಿದ್ದ ನಗರವು ಶುಕ್ರವಾರ ವರ್ಷಧಾರೆ ಇಲ್ಲದೆಯೂ ತಂಪನೆಯ ವಾತಾವರಣ ಕಂಡಿತು.
ಮಧ್ಯಾಹ್ನ ವೇಳೆ ಹಲವು ಪ್ರದೇಶಗಳಲ್ಲಿ ಮೋಡದ ವಾತಾವರಣ ಕಂಡಿತು. ಗರಿಷ್ಠ ಉಷ್ಣಾಂಸ 31.9 ಡಿ. ಸೆ.ಗೆ ಕುಸಿತ ಕಂಡಿದೆ. ಸಂಜೆ ಮಹದೇವಪುರ ವಲಯದ ಸೀಮಿತ ಪ್ರದೇಶಗಳಲ್ಲಿ ಮಾತ್ರ ತುಂತುರು ಮಳೆಯಾಗಿದೆ. ಬಸವನಪುರ ವಾರ್ಡ್‌ನಲ್ಲಿ 2 ಮಿ.ಮೀ. ಮಳೆಯಾಗಿದೆ. ಆನಕೇಲ್ ತಾಲೂಕಿನ ಸಮಂದೂರು ಗ್ರಾಪಂ ವ್ಯಾಪ್ತಿಯಲ್ಲಿ 42 ಮಿ.ಮೀ. ವರ್ಷಧಾರೆಯಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ಮಾಹಿತಿ ನೀಡಿದೆ.
ಶನಿವಾರ ನಗರದೆಲ್ಲೆಡೆ ಮೋಡ ಕವಿದ ವಾತಾವರಣ ಇರಲಿದ್ದು, ಕೆಲವೆಡೆ ಗುಡುಗು ಸಹಿತ ಸಾಧಾರಣ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ. ಭಾನುವಾರ ನಗರದ ಹೆಚ್ಚಿನ ಭಾಗಗಳಲ್ಲಿ ಭಾರೀ ವರ್ಷಧಾರೆಯಾಗುವುದೆಂದು ನಿರೀಕ್ಷಿಸಲಾಗಿದೆ.
ಕೆಐಎನಲ್ಲಿ ದಾಖಲೆ ಮಳೆ:
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ (ಕೆಐಎ) ಸುತ್ತಮುತ್ತ ಗುರುವಾರ ರಾತ್ರಿ 72.4 ಮಿ.ಮೀ. ಪ್ರಮಾಣದಷ್ಟು ದಾಖಲೆ ಮಳೆಯಾಗಿದೆ. ಇದು ಈ ದಿನದ ಮಟ್ಟಿಗೆ ಇಡೀ ರಾಜ್ಯದಲ್ಲೇ ಅತೀ ಹೆಚ್ಚು ಮಳೆಯಾದ ಸ್ಥಳವಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.