

ಮಂಗಳೂರು: ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮೋಡ ಮಿಶ್ರಿತ ಬಿಸಿಲಿನ ವಾತಾವರಣದ ಮುನ್ಸೂಚೆನೆ ಇದ್ದು, ಸೆಖೆಯ ಅನುಭವ ಹೆಚ್ಚಾಗಲಿದೆ. ಗರಿಷ್ಠ ತಾಪಮಾನದಲ್ಲಿ ಒಂದೆರಡು ಡಿಗ್ರಿ ಇಳಿಕೆಯಾದರೂ, ಅಧಿಕ ತೇವಾಂಶದಿಂದ ಸೆಖೆ ಹೆಚ್ಚಾಗಬಹುದು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮುಂದಿನ 1-2 ದಿನ ಮಳೆಯ ಸಾಧ್ಯತೆ ಕಡಿಮೆ. ಪ್ರಸ್ತುತ ಇರುವ ವಾತಾವರಣವು ಮಾ.8ರ ತನಕ ಮುಂದುವರಿಯುವ ಲಕ್ಷಣಗಳಿದ್ದು, ನಂತರ ಮೋಡ ಕಡಿಮೆಯಾಗಿ ಬಿಸಿಲಿನ ವಾತಾವರಣದ ಸಾಧ್ಯತೆ ಹೆಚ್ಚಾಗಲಿದೆ. ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಬುಧವಾರ ಗರಿಷ್ಠ 38 ಡಿಗ್ರಿ ಸೆಲ್ಸಿಯಸ್, ಕನಿಷ್ಠ 22.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ, ಗರಿಷ್ಠ ಪ್ರಮಾಣದ ಬಿಸಿ ವಾತಾವರಣ ಕಂಡುಬಂದಿದೆ.
ರಾಷ್ಟ್ರೀಯ ಹವಾಮಾನ ಮನ್ಸೂಚನಾ ಕೇಂದ್ರದ ಮಾಹಿತಿಯಂತೆ ಮಾರ್ಚ್ 11ನಂತರ ಕಾಸರಗೋಡು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆ ಮೋಡಗಳು ಕಾಣಿಸಿಕೊಳ್ಳಲಿದ್ದು, ಘಟ್ಟದ ಕೆಳಗಿನ ತಪ್ಪಲು ಪ್ರದೇಶಗಳ ಒಂದೆರಡು ಕಡೆ ತುಂತುರು ಮಳೆಯ ಮುನ್ಸೂಚನೆ ಇದೆ. 14 ರಿಂದ ಕರಾವಳಿಯ ಅಲ್ಲಲ್ಲಿ ಸಾಮಾನ್ಯ ಮಳೆ, 15ರಂದು ರಾಜ್ಯದಾದ್ಯಂತ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಮುಂದಿನ 2-3 ದಿನ ರಾತ್ರಿ ವೇಳೆ ಚಳಿಯ ತೀವ್ರತೆ ಸಾಧಾರಣಕ್ಕಿಂತ ತುಸು ಹೆಚ್ಚಾಗಲಿದೆ. ಹಗಲು ಮೋಡ ಕವಿದ ವಾತಾವರಣ ಸಹಿತ ಒಣ ಹವೆ ಮುಂದುವರಿಯಲಿದೆ ಎಂದು ರಾಷ್ಟ್ರೀಯ ಹವಾಮಾನ ಮನ್ಸೂಚನಾ ಕೇಂದ್ರ ಮಾಹಿತಿ ನೀಡಿದೆ.