

ಹುಬ್ಬಳ್ಳಿ: ಮಳೆ ಕೊರತೆ ಎದುರಿಸುತ್ತಿರುವ ಹಾವೇರಿ ಜಿಲ್ಲೆಯಲ್ಲಿ ಪಿ.ಕೆ.ಕೆ. ಇನಿಷಿಯೇಟಿವ್ಸ್ ಮೂಲಕ ಸೋಮವಾರ ಸಂಜೆ ಮೋಡ ಬಿತ್ತನೆ ನಡೆಸಲಾಯಿತು.
ಮೋಡ ಬಿತ್ತನೆಗೆ ಅಗತ್ಯವಾದ ವ್ಯವಸ್ಥೆ ಹೊಂದಿದ ವಿಮಾನವು ಸಂಜೆ 4 ಗಂಟೆಯ ಸುಮಾರಿಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಹಾರಾಟ ನಡೆಸಿತು. ಮಂಗಳವಾರ ಹಾಗೂ ಬುಧವಾರ ಸಹ ಮೋಡ ಬಿತ್ತನೆ ಕಾರ್ಯಕ್ರಮ ನಡೆಯಲಿದೆ. ಭಾನುವಾರ ರಾತ್ರಿಯೇ ಹಾವೇರಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಮೋಡ ಬಿತ್ತನೆ ಬಳಿಕ ಇನ್ನೂ ಹೆಚ್ಚಿನ ಮಳೆಯನ್ನು ನಿರೀಕ್ಷಿಸಲಾಗುತ್ತಿದೆ.
ಆಕಾಶದಲ್ಲಿ ತೇಲುತ್ತಿರುವ ಮೋಡಗಳ ಮೇಲೆ ವಿಮಾನಕ್ಕೆ ಅಳವಡಿಸಿದ ಫ್ಲೈಯನ್ಗಳ ಮೂಲಕ ಸಿಲ್ವರ್ ಅಯೋಡೈನ್ ಎಂಬ ರಾಸಾಯನಿಕ ಸಿಂಪಡಣೆ ಮಾಡಲಾಗುತ್ತದೆ. ಆಗ ಮೋಡಗಳಲ್ಲಿ ಇರುವ ನೀರಿನ ಕಣಗಳ ಸಾಂದ್ರತೆ ಹೆಚ್ಚಾಗುತ್ತದೆ. ಬಳಿಕ ಮೋಡಗಳು ನೀರಿನ ರೂಪದಲ್ಲಿ ಭೂಮಿಗೆ ಬೀಳುತ್ತವೆ. ಈ ಪ್ರಕ್ರಿಯೆಗೆ ಮೋಡ ಬಿತ್ತನೆ ಎನ್ನುತ್ತಾರೆ.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮೋಡ ಬಿತ್ತನೆಗೆ ಚಾಲನೆ ನೀಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2003ರಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 85 ದಿನಗಳ ಕಾಲ ಮೋಡ ಬಿತ್ತನೆ ನಡೆಸಲಾಗಿತ್ತು. 60ಕ್ಕೂ ಹೆಚ್ಚು ದಿನಗಳ ಕಾಲ ಮಳೆಯಾಗಿದ್ದವು. ಶೇ. 60ರಿಂದ 70 ರಷ್ಟು ಗುಣಮಟ್ಟದ ಮೋಡಗಳಿದ್ದರೆ ಮೋಡ ಬಿತ್ತನೆ ಮೂಲಕ ಮಳೆಯ ಸಾಧ್ಯತೆಯು ಶೇ. 15ರಿಂದ 22 ರಷ್ಟು ಅಧಿಕವಾಗಿರುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಣೆಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ, ತಾವು ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಹಾವೇರಿ ಜಿಲ್ಲೆಯಲ್ಲಿ ಮೋಡ ಬಿತ್ತನೆ ನಡೆಸಿದ್ದೇವೆ. ಜಿಲ್ಲೆಯ ಐವರು ಶಾಸಕರು ಇದಕ್ಕೆ ಕೈಜೋಡಿಸಿದ್ದಾರೆ. ಗಂಟೆಗೆ 10 ಲಕ್ಷ ರೂ. ಖರ್ಚು ಬರುತ್ತದೆ. ಮೂರು ದಿನಗಳ ಕಾಲ 15-20 ಕಾರ್ಯಾಚರಣೆ ನಡೆಸುವ ಉದ್ದೇಶ ಹೊಂದಿದ್ದೇವೆ ಎಂದು ತಿಳಿಸಿದರು.
ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಶಾಸಕ ಯು.ಬಿ. ಬಣಕಾರ, ಮಾಜಿ ಸಂಸದ ಐ.ಎಂ. ಸನದಿ, ಅಜೀಂಪೀರ ಖಾದ್ರಿ, ಪೂರ್ಣಿಮಾ ಕೋಳಿವಾಡ, ಯಾಸಿರಖಾನ್ ಪಠಾಣ, ಹಾವೇರಿ ಜಿಪಂ ಸಿಇಒ ಅಕ್ಷಯ ಶ್ರೀಧರ, ಇತರರು ಇದ್ದರು.