

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ನಗರಕ್ಕೆ ಭೇಟಿ ನೀಡಿದ ಸಂದರ್ಭ ಹೆಣ್ಣು ಮಗಳೊಬ್ಬಳ ಬಳಿ ‘ನನಗೆ ಬಟ್ಟೆ ಹೊಲಿದು ಕೊಡುತ್ತೀರಾ’ ಎಂದು ಪ್ರಶ್ನಿಸಿದ್ದರು. ಸದ್ಯದಲ್ಲಿಯೇ ಆ ಹೆಣ್ಣು ಮಗಳಿಂದ ಮೋದಿ ಅವರಿಗೆ ಬಟ್ಟೆಯನ್ನು ಹೊಲಿಸಿ ಅವರ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ನೀಡಲಾಗುವುದು ಎಂದು ಶಾಸಕ ಎಸ್.ಎ. ರಾಮದಾಸ್ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನಾಚರಣೆ ಪ್ರಯುಕ್ತ ಕೆ.ಆರ್. ಕ್ಷೇತ್ರದ ವಿದ್ಯಾರಣ್ಯಪುರಂನ ಶ್ರೀ ರಾಮಲಿಂಗೇಶ್ವರ ಉದ್ಯಾನದಲ್ಲಿ ಭಾನುವಾರ ಹಮ್ಮಿಕೊಂಡ ‘ಮೋದಿ ಯುಗ ಉತ್ಸವ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೋದಿ ಯುಗ ಉತ್ಸವದಲ್ಲಿ ವಿವಿಧ ಇಲಾಖೆ ಯೋಜನೆಗಳನ್ನು ಜನರಿಗೆ ತಲುಪಿಸುವ ಮೂಲಕ ಸರ್ಕಾರವನ್ನು ಮನೆ ಬಾಗಿಲಿಗೆ ಕೊಂಡೊಯ್ಯುವ ಕಾರ್ಯ ಮಾಡುತ್ತಿದ್ದೇವೆ. ಫಲಾನುಭವಿಗಳು ಯೋಜನೆಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಸಮಾಜದಲ್ಲಿ ಮುಂದೆ ಬರಬೇಕು ಎಂದು ಕರೆ ನೀಡಿದರು.
ಕೆ.ಆರ್. ಕ್ಷೇತ್ರದಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ಗ್ರಂಥಾಲಯ ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದು ಹೇಳಿದರು.