

ಚಿಕ್ಕಮಗಳೂರು: ಕಾಫಿ ಉದ್ಯಮ ಸಂಕಷ್ಟದಲ್ಲಿದ್ದು ಮಲ್ಲಂದೂರು, ಆಲ್ದೂರು ಸೇರಿ ಗ್ರಾಮೀಣ ಭಾಗದ ಕಾಫಿ ಮಂಡಳಿಯ ಯಾವುದೇ ವಲಯ ಕಚೇರಿಗಳನ್ನು ಮುಚ್ಚಬಾರದು ಎಂದು ಆಗ್ರಹಿಸಿ ಬೆಳೆಗಾರರು ಜೆಡಿಎಸ್ ನೇತೃತ್ವದಲ್ಲಿ ಕಾಫಿ ಮಂಡಳಿ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಮಾತನಾಡಿ, ವಲಯ ಕಚೇರಿಗಳನ್ನು ಮುಚ್ಚುವ ಕೇಂದ್ರ ಸರ್ಕಾರದ ಕ್ರಮ ಸರಿಯಲ್ಲ. ಒಂದು ವೇಳೆ ಮುಚ್ಚಿದರೆ ಕಾಫಿ ಮಂಡಳಿಗೆ ಬೀಗ ಹಾಕಿ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಾಫಿ ಉದ್ಯಮ ಎಲ್ಲದಕ್ಕೂ ಪೂರಕ:
ಕಾಫಿ ಬೆಳೆಗಾರರು ಎಂಟು ದಿನ ಉದ್ಯಮ ನಿಲ್ಲಿಸಿದರೆ ಈ ಭಾಗದ ಎಲ್ಲ ಅಂಗಡಿ, ಹೋಟೆಲ್‍ಗಳು ಸ್ಥಗಿತವಾಗುತ್ತವೆ. ಕಾಫಿ ಉದ್ಯಮ ಎಲ್ಲದಕ್ಕೂ ಪೂರಕ. ಹಾಗಾಗಿ ಕಾಫಿ ವಲಯ ಕಚೇರಿ ಮುಚ್ಚುವ ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಸಂಕಷ್ಟದಲ್ಲಿರುವ ಕಾಫಿ ಉದ್ದಿಮೆ ಪರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿಲ್ಲಬೇಕು. ನಮ್ಮ ಹೋರಾಟ ಅಧಿಕಾರಿಗಳ ವಿರುದ್ಧ ಅಲ್ಲ. ಸಂಸದರು, ಕಾಫಿ ಮಂಡಳಿ ಅಧ್ಯಕ್ಷರ ವಿರುದ್ಧ ಎಂದ ಅವರು, ಈ ಬಗ್ಗೆ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು.
ಸಂಸದೆ ಒಮ್ಮೆಯೂ ಧ್ವನಿಯೆತ್ತಿಲ್ಲ:
ಕೇಂದ್ರ ಸರ್ಕಾರ ಕಾಫಿ ಬೆಳೆಗಾರರು, ರೈತರನ್ನು ಸಂಪೂರ್ಣ ಕಡೆಗಣಿಸಿದೆ. ದೆಹಲಿಯಲ್ಲಿ ರೈತರ ಮೇಲೆ ದಬ್ಬಾಳಿಕೆ ಮಾಡುತ್ತ, ಪ್ರತಿಭಟನೆ ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತಿದೆ. ಶೋಭಾ ಕರಂದ್ಲಾಜೆ ಇಲ್ಲಿಂದ ಲೋಕಸಭೆಗೆ ಎರಡು ಬಾರಿ ಆಯ್ಕೆಯಾಗಿದ್ದಾರೆ. ಕಾಫಿ ಬೆಳೆಗಾರರ, ರೈತರ, ಜನರ ಸಮಸ್ಯೆಗೆ ಅವರು ಸ್ಪಂದಿಸುತ್ತಿಲ್ಲ. ಆದರೆ ಲವ್ ಜಿಹಾದ್ ಬಗ್ಗೆ ಉತ್ತಮವಾಗಿ ಮಾತನಾಡುತ್ತಾರೆ ಎಂದು ಅವರು ವ್ಯಂಗ್ಯವಾಡಿದರು.
ಕಾಫಿ ಉದ್ಯಮ ದಿವಾಳಿಯಾಗಿದೆಯೇ?:
ರೈತರು, ಕಾಫಿ ಬೆಳೆಗಾರರ ಸಮಸ್ಯೆ ಬಗ್ಗೆ ಸಂಸದರು 5 ವರ್ಷದಲ್ಲಿ ಒಮ್ಮೆಯಾದರೂ ಸಂಸತ್‍ನಲ್ಲಿ ಧ್ವನಿ ಎತ್ತಿಲ್ಲ. ವಲಯ ಕಚೇರಿ ಮುಚ್ಚಲು ಕಾರಣ ಏನು? ಕಾಫಿ ಉದ್ಯಮ ದಿವಾಳಿಯಾಗಿದೆಯಾ ಎಂದು ಪ್ರಶ್ನಿಸಿದರು. ಮಳೆಯಿಂದ ಕಾಫಿ ಬೆಳೆ ತೊಳೆದುಹೋಗಿದೆ. ಬ್ಯಾಂಕ್‍ಗಳು ಸಾಲ ಮರುಪಾವತಿಗಾಗಿ ನೋಟಿಸ್ ನೀಡುತ್ತಿವೆ. ಆಸ್ತಿ ಹರಾಜಿಗೆ ಬಂದಿದೆ. ಇಷ್ಟೆಲ್ಲಾ ಸಮಸ್ಯೆ ಇದ್ದರೂ ಕ್ಷೇತ್ರದ ಜನರಿಗೆ ಸಂಸದರು ಯಾವ ರೀತಿ ಸಹಕರಿಸಿದ್ದೀರಿ? ಇದು ಸಾಂಕೇತಿಕವಾದ ಮುತ್ತಿಗೆ ಮುಂದೆ ಆರ್ಥಿಕ ಪರಿಸ್ಥಿತಿ ಸರಿ ಹೋಗುವವರೆಗೂ ಸಾಲ ಕಟ್ಟುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಳೆಗಾರರ ಮೇಲೆ ಚಪ್ಪಡಿ ಕಲ್ಲು:
ರಾಜ್ಯ ಸಂಘಟನಾ ಕಾರ್ಯದರ್ಶಿ ಎಚ್.ಎನ್.ಕೃಷ್ಣೇಗೌಡ ಮಾತನಾಡಿ, ಮಲ್ಲಂದೂರು ಭಾಗದಲ್ಲಿ ಒಂದರಿಂದ ಹತ್ತು ಎಕರೆ ತೋಟ ಹೊಂದಿರುವ ಬೆಳೆಗಾರರು ಹೆಚ್ಚಾಗಿದ್ದಾರೆ. ಸಬ್ಸಿಡಿ ಸೇರಿ ಹಲವು ಉಪಯುಕ್ತ ಮಾಹಿತಿ ಪಡೆಯಲು ಕಾಫಿ ಮಂಡಳಿಯ ಜೆಎಲ್‍ಒ ಕಚೇರಿಯನ್ನೇ ಆಶ್ರಯಿಸಲಾಗಿತ್ತು. ಅದನ್ನು ಮುಚ್ಚುವ ಸ್ಥಿತಿಗೆ ಕಾಫಿ ಮಂಡಳಿ ತಂದಿಟ್ಟಿದೆ ಎಂದರೆ ಬೆಳೆಗಾರರ ಮೇಲೆ ಚಪ್ಪಡಿ ಕಲ್ಲು ಎಳೆದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಚೇರಿ ಮುಚ್ಚಲು ಅಧ್ಯಕ್ಷರ ಸಹಕಾರ:
ಜೆಡಿಎಸ್ ಜಿಲ್ಲಾ ವಕ್ತಾರ ಹೊಲದಗದ್ದೆ ಗಿರೀಶ್ ಮಾತನಾಡಿ, ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ರಾಜ್ಯ ಸರ್ಕಾರ ಬೆಳೆಗಾರರ 25 ಕೋಟಿ ರೂ. ಸಾಲ ಮನ್ನಾ ಮಾಡಿತ್ತು. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 10 ವರ್ಷ ಕಳೆದರೂ ನಯಾ ಪೈಸೆ ನೀಡಿಲ್ಲ. ಕಾಫಿ ಮಂಡಳಿಗೆ ನಮ್ಮ ಜಿಲ್ಲೆಯವರೇ ಅಧ್ಯಕ್ಷ ಆಗಿರುವ ಹೆಮ್ಮೆಯಿದೆ. ಆದರೆ ಅವರು ಕೂಡ ಗ್ರಾಮೀಣ ಭಾಗದ ಜೆಎಲ್‍ಒ ಕಚೇರಿ ಬಂದ್ ಮಾಡಲು ಸಹಕರಿಸಿದ್ದಾರೆ ಎಂದರು.
ಲೋಕಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಎಚ್.ಎಸ್.ಮಂಜಪ್ಪ, ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಜಿ.ಎಸ್.ಚಂದ್ರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಡಿ.ರಮೇಶ್, ಮೂಡಿಗೆರೆ ಕ್ಷೇತ್ರ ಸಮಿತಿ ಅಧ್ಯಕ್ಷ ಡಿ.ಜೆ.ಸುರೇಶ್, ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ವಿನಯ್‍ರಾಜ್, ಜಯರಾಜ್ ಅರಸ್, ವಿ.ಪಿ.ರವಿ, ಕುಶ, ಚಂದ್ರು, ಪದ್ಮಯ್ಯ, ತುಳಸೇಗೌಡ, ಲಕ್ಷ್ಮಣ್ ಇದ್ದರು.