

ವಿಜಯವಾಣಿ ಸುದ್ದಿಜಾಲ ಉಡುಪಿ
ಯಕ್ಷಗಾನ ಕಲೆಗೆ ಅದ್ಭುತ ಶಕ್ತಿಯಿದೆ. ಅದು ಅಬಾಲವೃದ್ಧರನ್ನೂ ಕುಣಿಸುವ ಸಾಮರ್ಥ್ಯ ಹೊಂದಿದೆ. ಅದನ್ನು ಕಲಿತವರು ಆರೋಗ್ಯ, ಜೀವನೋತ್ಸಾಹದಿಂದ ಬದುಕುತ್ತಾರೆ. ಅಕಾಡೆಮಿಯಿಂದ ಕೊಡುವ ಸೌಲಭ್ಯಗಳನ್ನು ಕಲಾವಿದರಿಗೆ ತಲುಪಿಸುವುದು ನನ್ನ ಗುರಿಯಾಗಿದೆ. ಯಕ್ಷಗಾನದ ವರ್ಧನೆ ಕೇವಲ ಅಕಾಡೆಮಿಯ ಕೆಲಸವಲ್ಲ, ಸಂಘ-ಸಂಸ್ಥೆಗಳೂ ಕೈಜೋಡಿಸಬೇಕು ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಆಶಯ ವ್ಯಕ್ತಪಡಿಸಿದರು.
ಉಡುಪಿಯ ಕೊಡವೂರು ಶ್ರೀ ಶಂಕರ ನಾರಾಯಣ ದೇವಸ್ಥಾನದಲ್ಲಿ ಸುಮನಸಾ ಕೊಡವೂರು ಉಡುಪಿ ಸಂಸ್ಥೆಯ ಆಶ್ರಯದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಒಂದು ತಿಂಗಳ ಕಾಲ ಯಕ್ಷಗಾನ ಹೆಜ್ಜೆ ತರಬೇತಿ ಶಿಬಿರ ಹಮ್ಮಿಕೊಂಡಿದ್ದು, ಸೆಪ್ಟೆಂಬರ್ 8ರಂದು ಸಂಜೆ ಆಯೋಜಿಸಿದ್ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಶೋಕಕುಮಾರ್ ಕೊಡವೂರು ಮಾತನಾಡಿ, ಸುಮಸನಾ ಸಂಸ್ಥೆಯು ಹಲವು ವರ್ಷದಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದೆ. ಅನೇಕ ಪ್ರಸಿದ್ಧ ರಂಗಕರ್ಮಿಗಳನ್ನು ನಾಡಿಗೆ ನೀಡಿದ ಖ್ಯಾತಿ ಹೊಂದಿದೆ. ತರಬೇತಿಯು ಕಲಿಕೆಯಲ್ಲಿ ಪರಿಪೂರ್ಣತೆ ನೀಡುತ್ತದೆ. ಕರಾವಳಿಯ ಈ ಕಲೆಯನ್ನು ಬೆಳೆಸಲು ಯುವಸಮುದಾಯ ಆಸಕ್ತರಾಗಬೇಕಿದೆ ಎಂದರು.
ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ, ಉದ್ಯಮಿ ಗೋಪಾಲ ಸಿ. ಬಂಗೇರ, ಸಂಗೀತ ವಿದ್ವಾನ್ ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ, ತರಬೇತುದಾರ ಮನೋಜ ಉಪಸ್ಥಿತರಿದ್ದರು.
ಸುಮನಸಾ ಅಧ್ಯಕ್ಷ ಪ್ರಕಾಶ ಜಿ. ಕೊಡವೂರು ಸ್ವಾಗತಿಸಿದರು. ಗೌರವಾಧ್ಯಕ್ಷ ಎಂ.ಎಸ್. ಭಟ್ ವಂದಿಸಿದರು. ಕಾರ್ಯದರ್ಶಿ ಚಂದ್ರಕಾಂತ ಕುಂದರ್ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಶಿಬಿರದ ಪ್ರಾತ್ಯಕ್ಷಿಕೆ ಹಾಗೂ ಜಾಂಬವತಿ ಕಲ್ಯಾಣ ಯಕ್ಷಗಾನ ಪ್ರದರ್ಶಿಸಲ್ಪಟ್ಟಿತು.