ಯಕ್ಷಗಾನ ಕಲಿಕೆಯಿಂದ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಸಾಧನೆ...

Yakshagana 1
Published on

ಡಿಡಿಪಿಐ ಗಣಪತಿ ಕೆ. ಅಭಿಪ್ರಾಯ

ತರಬೇತಿ ಶಿಬಿರ ಸಮಾರೋಪ

ವಿಜಯವಾಣಿ ಸುದ್ದಿಜಾಲ ಉಡುಪಿ

ಪಠ್ಯ ಶಿಕ್ಷಣಕ್ಕಷ್ಟೇ ಮಕ್ಕಳನ್ನು ಸೀಮಿತಗೊಳಿಸದೆ ಯಕ್ಷಗಾನದಂತಹ ಶ್ರೇಷ್ಠ ಕಲೆ ಕಲಿಯುವ ಇಂತಹ ಶಿಬಿರಗಳಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು. ಅದರಿಂದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಕಲಿಕಾ ಸಾಮರ್ಥ್ಯ ಹೆಚ್ಚಳಗೊಂಡು

ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲೂ ಸಹ ಸಾಧನೆ ಮಾಡಲು ಸಹಕಾರಿಯಾಗುತ್ತದೆ ಎಂದು ಡಿಡಿಪಿಐ ಗಣಪತಿ ಕೆ. ಅಭಿಪ್ರಾಯಪಟ್ಟರು.

Yakshagana 2
ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ಯಕ್ಷಶಿಕ್ಷಣ ಟ್ರಸ್ಟ್​ ವತಿಯಿಂದ ನಡೆಯುತ್ತಿದ್ದ ಒಂದು ವಾರದ ಯಕ್ಷಗಾನ ತರಬೇತಿ ಸಂಪನ್ನಗೊಂಡಿದ್ದು, ಮಾ.28ರಂದು ರಾತ್ರಿ ಆಯೋಜಿಸಿದ್ದ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಕಲಾರಂಗ ಶ್ರೇಷ್ಠ ಸಂಸ್ಥೆ

ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿದ ಗೀತಾನಂದ ಫೌಂಡೇಷನ್​ನ ಸ್ಥಾಪಕ ಆನಂದ ಸಿ. ಕುಂದರ್​ ಮಾತನಾಡಿ, ಉಡುಪಿಯ ಯಕ್ಷಗಾನ ಕಲಾರಂಗವು ಕಲೆ, ಸಮಾಜಪರ ಕೆಲಸ ಮಾಡುತ್ತ ಸಾರ್ವಜನಿಕರ ವಿಶ್ವಾಸ ಗಳಿಸಿದೆ. ಇದೊಂದು ಪ್ರತಿಷ್ಠಿತ ಹಾಗೂ ಶ್ರೇಷ್ಠ ಸಂಸ್ಥೆಯಾಗಿದೆ ಎಂದರು.

ಟ್ರಸ್ಟ್​ನ ಅಧ್ಯಕ್ಷ, ಶಾಸಕ ಯಶ್​ಪಾಲ್​ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಶುಭಕೋರಿದರು.

Yakshagana 3
ಯು.ವಿಶ್ವನಾಥ ಶೆಣೈ, ಡಾ. ಜಗದೀಶ ಶೆಟ್ಟಿ ಸಿದ್ದಾಪುರ, ಜಯ ಸಿ. ಕೋಟ್ಯಾನ್​, ಸುಧೀರಕುಮಾರ್​ ಶೆಟ್ಟಿ ಬ್ರಹ್ಮಾವರ, ಡಾ. ಪ್ರಶಾಂತ ಶೆಟ್ಟಿ ಮಣಿಪಾಲ, ಶ್ರೀನಿವಾಸ ರಾವ್​ ಹಿರಿಯಡ್ಕ, ಗುರುಪ್ರಸಾದ್​, ರಾಘವೇಂದ್ರ ಭಟ್​, ಸಂಸ್ಥೆಯ ಉಪಾಧ್ಯಕ್ಷರಾದ ಎಸ್​.ವಿ. ಭಟ್​, ವಿ.ಜಿ. ಶೆಟ್ಟಿ, ಕೋಶಾಧಿಕಾರಿ ಕೆ.ಸದಾಶಿವ ರಾವ್​, ಸದಸ್ಯರಾದ ಸಂತೋಷ ಶೆಟ್ಟಿ, ವಿಜಯಕುಮಾರ್​ ಮುದ್ರಾಡಿ, ಕೆ.ಆನಂದ ಶೆಟ್ಟಿ ಉಪಸ್ಥಿತರಿದ್ದರು.

ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್​ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್​ ಪ್ರಸ್ತಾವನೆಯೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಶಿಬಿರದ ಸಂಯೋಜಕ ನಿರಂಜನ ಭಟ್​ ಎಂ. ಸಂಸ್ಥೆಯ ಕಾರ್ಯಕರ್ತರಾದ ವಿದ್ಯಾ ಪ್ರಸಾದ, ಗಣಪತಿ ಭಟ್​, ಯು.ಅನಂತರಾಜ ಉಪಾಧ್ಯ, ವಿಶ್ವನಾಥ ಸಹಕರಿಸಿದರು.

ಬನ್ನಂಜೆ ಸಂಜೀವ ಸುವರ್ಣಗೆ ಸನ್ಮಾನ

Yakshagana 4
ಯಕ್ಷಗಾನ ತರಬೇತಿ ಶಿಬಿರದ ನಿರ್ದೇಶಕ ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣ, ಶಿಬಿರದ ಶಿಕ್ಷಕರಾದ ನರಸಿಂಹ ತುಂಗ, ಆದ್ಯತಾ ಭಟ್​ ಮತ್ತು ತರಬೇತಿಯಲ್ಲಿ ಸಹಕರಿಸಿದ ಸಂಜೀವ ಸುವರ್ಣ ಅವರ ಶಿಷ್ಯರನ್ನು ಸನ್ಮಾನಿಸಲಾಯಿತು. ಎಲ್ಲ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ, ಗುಂಪು ಛಾಯಾಚಿತ್ರ, ಪುಸ್ತಕ ನೀಡಲಾಯಿತು. ಶಿಬಿರದಲ್ಲಿ ನಡೆಸಿದ್ದ ವಿವಿಧ ಸ್ಪರ್ಧಾ ವಿಜೇತರಿಗೆ ಯು.ಎಸ್​. ರಾಜಗೋಪಾಲ ಆಚಾರ್ಯ ಬಹುಮಾನ ವಿತರಿಸಿದರು. ಶಿಬಿರಾರ್ಥಿಗಳು ಅನುಭವ ಹಂಚಿಕೊಂಡರು. ಸಭಾಕಾರ್ಯಕ್ರಮದ ಮೊದಲು ಶಿಬಿರದಲ್ಲಿ ಪಾಲ್ಗೊಂಡಿದ್ದ 60 ವಿದ್ಯಾರ್ಥಿಗಳು ಯಕ್ಷಗಾನ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net