ಅರಮನೆ ಪದ್ಮರಾಜ ಪಂಡಿತರ ಜೈನ ಬ್ರಾಹ್ಮಣ ವಿದ್ಯಾರ್ಥಿನಿಲಯದ ಆಶ್ರಯದ ‘ಬೇಸಿಗೆಯ ಧಾರ್ಮಿಕ ಶಿಬಿರ’ದ ಸಮಾರೋಪ ಸಮಾರಂಭ

3
Published on

ಮೈಸೂರು: ಮಕ್ಕಳಲ್ಲಿ ಕಲಿಯುವ ಕುತೂಹಲ ಹೆಚ್ಚಾಗಿರುತ್ತದೆ. ಅದನ್ನು ಗಮನಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದು ಮೈಸೂರು ವಿವಿ ಜೈನಾಲಜಿ ಮತ್ತು ಪ್ರಾಕೃತ ವಿಭಾಗದ ನಿವೃತ್ತ ಪ್ರಾಧ್ಯಾಪಕಿ ಡಾ.ಎಂ.ಎಸ್.ಪದ್ಮಾ ಹೇಳಿದರು.

ಅರಮನೆ ಪದ್ಮರಾಜ ಪಂಡಿತರ ಜೈನ ಬ್ರಾಹ್ಮಣ ವಿದ್ಯಾರ್ಥಿನಿಲಯದ ಆಶ್ರಯದಲ್ಲಿ ಜೆಎಲ್‌ಬಿ ರಸ್ತೆಯ ಜೈನ ಬ್ರಾಹ್ಮಣ ವಿದ್ಯಾರ್ಥಿನಿಲಯದಲ್ಲಿ ಶನಿವಾರ ಆಯೋಜಿಸಿದ್ದ ‘ಬೇಸಿಗೆಯ ಧಾರ್ಮಿಕ ಶಿಬಿರ’ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಇಂತಹ ಶಿಬಿರಗಳು ಮುಂದಿನ ಪೀಳಿಗೆಯ ಬೆಳವಣಿಗೆಗೆ ಅನುಕೂಲ ಕಲ್ಪಿಸುತ್ತವೆ. ಮಕ್ಕಳು ಕೂಡ ಹೆಚ್ಚು ಹೆಚ್ಚು ಕಲಿಯಬಹುದಾಗಿದೆ ಎಂದರು.

ನಿಲಯದ ಕಾರ್ಯದರ್ಶಿ ಶಾಮಾನಂದ ಸಾಗರ ಮಾತನಾಡಿ, ಮುಂದಿನ ದಿನಗಳಲ್ಲಿ ಯುವಕರಲ್ಲಿ ಧರ್ಮದ ಬಗ್ಗೆ ಒಲವು ತರಲು ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತದೆ ಎಂದರು.

ಜಂಟಿ ಕಾರ್ಯದರ್ಶಿ ನಮಿ ತೇಜ ಮಾತನಾಡಿ, ಜೀವನದಲ್ಲಿ ಲೌಕಿಕ ಶಿಕ್ಷಣ ಹೇಗೆ ಮುಖ್ಯ. ಅದೇ ರೀತಿ ಸನ್ಮಾರ್ಗದಲ್ಲಿ ನಡೆಯಲು ಧಾರ್ಮಿಕ ಶಿಬಿರಗಳು ಮುಖ್ಯವಾಗುತ್ತವೆ ಎಂದರು.

ಉಪನ್ಯಾಸಕರ ಪರವಾಗಿ ಕೆ.ಮಧುಮತಿ ನಾಭಿರಾಜ್ ಅನುಭವ ಹಂಚಿಕೊಂಡರು. ಪೋಷಕರ ಪರವಾಗಿ ಮೈತ್ರಿ ಜೈನ್, ಶ್ರೀಮತಿ ಪೂಜಾ, ಶ್ರೀಮತಿ ಭಾವನಾ ಪಂಡಿತ್ ಅಭಿಪ್ರಾಯ ಹಂಚಿಕೊಂಡರು.  ಶಿಬಿರಾರ್ಥಿ ಸುರಭಿ ಅನುಭವ ಹಂಚಿಕೊಂಡರು. ನಿಲಯದ ಅಧ್ಯಕ್ಷ ಲಕ್ಷ್ಮೀರಮಣ, ಪ್ರಮುಖರಾದ ಎಂ.ಪಿ.ನಾಭಿರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net