ರೆಡ್​ಕ್ರಾಸ್​ನ ಮಾನವೀಯ ಸೇವೆ ಶ್ಲಾಘನೀಯ...

Jineva 1
Published on

ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಮೆಚ್ಚುಗೆ

ಜಿನೇವಾ ಒಪ್ಪಂದ ಆಚರಣೆಯ ಸಮಾರೋಪ

ವಿಜಯವಾಣಿ ಸುದ್ದಿಜಾಲ ಉಡುಪಿ

ರೆಡ್​ಕ್ರಾಸ್​ ಸಂಸ್ಥೆಯು ಸಮಾಜಕ್ಕೆ ಬಲಿಷ್ಠವಾದ ಸೇವೆ ನೀಡುತ್ತಿದ್ದು ಪ್ರಾಕೃತಿಕ ವಿಕೋಪ, ಬರ ನಿರ್ವಹಣೆ, ತುರ್ತು ಅಗತ್ಯದ ಸಂದರ್ಭದಲ್ಲಿ ಸಲ್ಲಿಸುವ ಸೇವೆ ಜಾಗತಿಕ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ಮಾನವ ಜೀವನ ಹಾಗೂ ಆರೋಗ್ಯ ರಕ್ಷಿಸಲು ಫಲಾಪೇಕ್ಷೆಯಿಲ್ಲದೆ ಸೇವೆ ಸಲ್ಲಿಸುತ್ತಿದ್ದು ಸಂಸ್ಥೆಯ ಕಾರ್ಯವೈಖರಿ ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಮೆಚ್ಚುಗೆ ವ್ಯಕ್ತಪಡಿಸಿದರು.

Jineva 2
ಉಡುಪಿಯ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಭಾರತೀಯ ರೆಡ್​ಕ್ರಾಸ್​ ಸಂಸ್ಥೆಯ ಕರ್ನಾಟಕ ರಾಜ್ಯ ಶಾಖೆ ಮತ್ತು ಭಾರತೀಯ ರೆಡ್​ಕ್ರಾಸ್​ ಸಂಸ್ಥೆ ಉಡುಪಿ ಜಿಲ್ಲೆ ವತಿಯಿಂದ ಸೆಪ್ಟೆಂಬರ್​ 1ರಂದು ಬೆಳಗ್ಗೆ ಆಯೋಜಿಸಿದ್ದ ಜಿನೇವಾ ಒಪ್ಪಂದದ ಐತಿಹಾಸಿಕ ಆಚರಣೆಯ ಸಮಾರೋಪ, ವಿಶ್ವಶಾಂತಿಗಾಗಿ ಮತ್ತು ಮಾದಕ ವ್ಯಸನ ವಿರೋಧಿ ಜಾಥಾ, ಸಾಮಾಜಿಕ ಕಾರ್ಯಗಳಿಗೆ ನಿಧಿ ಸಂಗ್ರಹಣೆ, ನೆರೆ ಸಂತ್ರಸ್ತರು ಮತ್ತು ಫಲಾನುಭವಿಗಳಿಗೆ ಸಾಮಗ್ರಿಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸೂಕ್ಷ್ಮ, ಶಕ್ತಿಶಾಲಿ ಸೇವೆ

Jineva 3 Pratijne
ಜಿಪಂ ಸಿಇಒ ಪ್ರತೀಕ ಬಾಯಲ್​ ಮಾತನಾಡಿ, ಜನಸಾಮಾನ್ಯರು ಹಾಗೂ ಸರ್ಕಾರದ ಮಧ್ಯೆ ಕೊಂಡಿಯಾಗಿ ರೆಡ್​ಕ್ರಾಸ್​ ಕಾರ್ಯನಿರ್ವಹಿಸುತ್ತಿದೆ. ತುರ್ತು ಪರಿಸ್ಥಿತಿಗಳಲ್ಲಿ ಸಹಾಯಹಸ್ತ ನೀಡುವ ಮೂಲಕ ಅತ್ಯಂತ ಸೂಕ್ಷ್ಮ ಹಾಗೂ ಶಕ್ತಿಶಾಲಿಯಾಗಿ ಕೆಲಸ ಮಾಡುತ್ತಿದೆ ಎಂದರು.

ರೆಡ್​ಕ್ರಾಸ್​ನ ಉಡುಪಿ ಜಿಲ್ಲಾ ಘಟಕದ ಉಪಸಭಾಪತಿ ಡಾ.ಅಶೋಕ ವೈ.ಜಿ. ಅಧ್ಯಕ್ಷತೆ ವಹಿಸಿದ್ದರು.

ಫಲಾನುಭವಿಗಳಿಗೆ ವಿವಿಧ ಸಾಮಗ್ರಿ ವಿತರಣೆ

Jineva 4 Samagri
ಜಿನೇವಾ ಒಪ್ಪಂದ ಐತಿಹಾಸಿಕ ಆಚರಣೆ ನಿಮಿತ್ತ ಅರ್ಹ ಫಲಾನುಭವಿಗಳಿಗೆ ಕೃತಕ ಕಾಲು, ಶ್ರವಣ ಸಾಧನ, ಪೊಲೀಸ್​ ಇಲಾಖೆಗೆ ರೇನ್​ಕೋಟ್, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವೈದ್ಯಕೀಯ ಕಿಟ್​, ಮಹಿಳೆಯರಿಗೆ ಹೊಲಿಗೆ ಯಂತ್ರ, ನೆರೆ ಪರಿಹಾರ ಫಲಾನುಭವಿಗಳಿಗೆ ಗೃಹೋಪಯೋಗಿ ವಸ್ತುಗಳನ್ನು ವಿತರಿಸಲಾಯಿತು.

ನಗರಸಭಾ ಸದಸ್ಯ ಸದಾನಂದ ಮೂಲ್ಯ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ., ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನಾ, ಜಿಲ್ಲಾ ಗವರ್ನರ್​

ಪಿಎಂ​ಜೆಎಫ್​ ಲಯನ್​ ಸ್ವಪ್ನಾ ಸುರೇಶ, ಖಜಾಂಚಿ ರಮಾದೇವಿ, ಆಡಳಿತ ಮಂಡಳಿಯ ಸದಸ್ಯ ಟಿ.ಚಂದ್ರಶೇಖರ, ಲಯನ್ಸ್​ ಕ್ಲಬ್​ನ ಪದಾಧಿಕಾರಿಗಳು, ರೆಡ್​ಕ್ರಾಸ್​ ಹಾಗೂ ಡಿಡಿಆರ್​ಸಿ ಸಿಬ್ಬಂದಿ, ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಜಿಲ್ಲಾ ರೆಡ್​ಕ್ರಾಸ್​ ಸಂಸ್ಥೆಯ ಕಾರ್ಯದರ್ಶಿ ಡಾ.ಗಣನಾಥ ಶೆಟ್ಟಿ ಎಕ್ಕಾರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್​ಕುಮಾರ್​ ಶೆಟ್ಟಿ ನಿರೂಪಿಸಿದರು. ರಾಘವೇಂದ್ರ ಪ್ರಭು ವಂದಿಸಿದರು.

ಮಾದಕ ವ್ಯಸನ ವಿರೋಧಿ ಜಾಥಾ

ಸಭಾ ಕಾರ್ಯಕ್ರಮದ ಬಳಿಕ ಜಿಲ್ಲಾ ಕ್ರೀಡಾಂಗಣದಿಂದ ಶ್ರೀಕೃಷ್ಣ ಮಠದ ರಾಜಾಂಗಣದವರೆಗೆ ಮಾದಕ ವ್ಯಸನ ವಿರೋಧಿ ಜಾಥಾ ನಡೆಯಿತು. ಮಾದಕ ವ್ಯಸನ ವಿರೋಧಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ರೆಡ್​ಕ್ರಾಸ್​ನ ಕುಂದಾಪುರ ತಾಲೂಕು ಸಭಾಪತಿ ಎಸ್​.ಜಯಕರ ಶೆಟ್ಟಿ ಚಾಲನೆ ನೀಡಿದರು. ವಿದ್ಯಾರ್ಥಿಗಳು ವಿವಿಧ ಘೋಷಣೆ ಕೂಗುತ್ತ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿದರು. ನಶಾಮುಕ್ತ ಭಾರತವನ್ನಾಗಿಸಲು ಸರ್ಕಾರ ಹಲವು ಕಾರ್ಯಕ್ರಮ ಆಯೋಜಿಸುತ್ತಿದೆ. ಯುವಸಮುದಾಯ ದುಶ್ಚಟಗಳಿಗೆ ಆಕರ್ಷಿತರಾಗದೆ ಅವುಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಹೊಂದಬೇಕು. ತಮ್ಮ ನೆರೆಹೊರೆಯವರಿಗೂ ಅರಿವು ಮೂಡಿಸಬೇಕು. ಕಲಿಕೆಯೊಂದಿಗೆ ಸೇವಾ ಮನೋಭಾವನೆಯನ್ನೂ ವಿದ್ಯಾರ್ಥಿ ಜೀವನದಿಂದಲೇ ರೂಢಿಸಿಕೊಳ್ಳಬೇಕು. | ಸ್ವರೂಪಾ ಟಿ.ಕೆ. ಜಿಲ್ಲಾಧಿಕಾರಿ, ಉಡುಪಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net