ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಕ್ಷಕರು: ಡಿಡಿಪಿಯು ಸಿ.ಚೆಲುವಯ್ಯ ಅಭಿಮತ

Closing ceremony of sports and cultural activities of Dudda Government Pre-University College Mandya
Published on

ಮಂಡ್ಯ: ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಶಿಲ್ಪಿಗಳು. ಜ್ಞಾನದ ಬೆಳಕನ್ನು ಬೆಳಗುವ ಮಾರ್ಗದರ್ಶಕರು ಎಂದು ಡಿಡಿಪಿಯು ಸಿ.ಚೆಲುವಯ್ಯ ತಿಳಿಸಿದರು.

ತಾಲೂಕಿನ ದುದ್ದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿಶ್ವಮಾನವ ಕುವೆಂಪು ರಂಗವೇದಿಕೆಯಲ್ಲಿ ಏರ್ಪಡಿಸಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಶಿವಸುಬ್ರಹ್ಮಣ್ಯ ಅಯ್ಯರ್ ಅವರು ಅಬ್ದುಲ್ ಕಲಾಂ ಅವರ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅದರಂತೆ ಶಿಕ್ಷಕರು ಸಹ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡುವ ವ್ಯಕ್ತಿಗಳಾಗಬೇಕು. ಅವರಲ್ಲಿರುವ ಪ್ರತಿಭೆ ಗುರುತಿಸಿ ಅದನ್ನು ಪ್ರೋತ್ಸಾಹಿಸಬೇಕು. ಅದೇ ರೀತಿ ಪಾಲಕರು ಕೂಡ ಮಕ್ಕಳಿಗೆ ಬೆಂಬಲವಾಗಿ ನಿಲ್ಲಬೇಕು. ಇವರೆಲ್ಲರ ಶ್ರಮಕ್ಕೆ ಪ್ರತಿಫಲ ಸಿಗುವ ರೀತಿ ವಿದ್ಯಾರ್ಥಿಗಳು ನಡೆದುಕೊಳ್ಳಬೇಕು. ಮೊಬೈಲ್ ದುರ್ಬಳಕೆಯಿಂದ ಹೊರಬಂದು ಅಧ್ಯಯನದ ಕಡೆ ಗಮನಹರಿಸಬೇಕೆಂದು ಸಲಹೆ ನೀಡಿದರು.

ಸಮಾರೋಪ ಭಾಷಣ ಮಾಡಿದ ನಿವೃತ್ತ ಗಣಿತ ವಿಷಯ ಪರಿವೀಕ್ಷಕ ಎಸ್.ಲೋಕೇಶ್, ನಾವು ಮಾಡುವ ಆಲೋಚನೆಗಳು ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ. ಆದ್ದರಿಂದ ನಿಮ್ಮ ಯೋಚನೆ, ಆಲೋಚನೆಗಳು ಯಾವಾಗಲೂ ಸರಿಯಾದ ರೀತಿ ಹಾಗೂ ಧನಾತ್ಮಕವಾಗಿರಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲೆ ಟಿ.ವೀಣಾ, ವಿದ್ಯಾರ್ಥಿಗಳು ಒಳ್ಳೆಯ ಫಲಿತಾಂಶವನ್ನು ನೀಡಲು ಸಿದ್ಧತೆ ಮಾಡಿಕೊಳ್ಳಬೇಕು ಎಂದರು. ದುದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಚಂದ್ರು, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಶೀಲಕುಮಾರ್, ಪಿಡಿಒ ಶಿವಲಿಂಗೇಗೌಡ, ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ ಬಸವರಾಜು ಇತರರಿದ್ದರು. ನಿವೃತ್ತ ವಿಜ್ಞಾನ ವಿಷಯ ಪರಿವೀಕ್ಷಕ ಸಿ.ಎಲ್.ನಂಜರಾಜು ಪವಾಡ ರಹಸ್ಯ ಬಯಲು ಕಾರ್ಯಕ್ರಮ ನಡೆಸಿಕೊಟ್ಟರು. ಅಂತೆಯೇ ಡಿಡಿಪಿಯು ಸಿ.ಚೆಲುವಯ್ಯ, ನಿವೃತ್ತ ಪರಿವೀಕ್ಷಕರಾದ ಎಸ್.ಲೋಕೇಶ್ ಮತ್ತು ಸಿ.ಎಲ್.ನಂಜರಾಜು ಅವರನ್ನು ಅಭಿನಂದಿಸಲಾಯಿತು. ವೇದಿಕೆ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net