

ಮಂಡ್ಯ: ಗ್ರಾಮೀಣ ಪ್ರದೇಶದ ಮಕ್ಕಳು ಬಡತನ ಕಷ್ಟವೆಂದು ಕುಗ್ಗದೆ, ಬದಲಿಗೆ ಅದನ್ನೇ ಗೆಲುವಿನ ಮೆಟ್ಟಿಲಾಗಿ ಬಳಸಿಕೊಂಡು ಬದುಕಿನ ಯಶಸ್ಸು ಕಂಡಿದ್ದಾರೆ. ಹಾಗಾಗಿ ಗ್ರಾಮೀಣ ಪರಿಸರದಲ್ಲಿ ಪ್ರತಿಭೆಗಳಿಗೆ ಬರವಿಲ್ಲ ಎಂದು ನಿವೃತ್ತ ಉಪನ್ಯಾಸಕ ಎನ್.ಚಲುವೇಗೌಡ ಅಭಿಪ್ರಾಯಪಟ್ಟರು.
ತಾಲೂಕಿನ ಬಸರಾಳಿನ ಕೆಪಿಎಸ್ ಸಂಸ್ಥೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 2024-25ನೇ ಶೈಕ್ಷಣಿಕ ಸಾಲಿನ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಸಾಧನೆ ಮಾಡಿದವರೆಲ್ಲ ಸಂಕಷ್ಟದಲ್ಲೆ ಮೇಲೆದ್ದು ಬಂದವರು. ಬಸವಣ್ಣ, ಅಂಬೇಡ್ಕರ್, ಗಾಂಧೀಜಿ, ಎಪಿಜೆ ಅಬ್ದುಲ್ ಕಲಾಂ ಅವರ ಬದುಕನ್ನು ಎಲ್ಲರಿಗೂ ಮಾದರಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಎಚ್.ಎಸ್.ಚಂದ್ರಶೇಖರಯ್ಯ ಮಾತನಾಡಿ. ಇಂದಿನ ಕಲಿಕೆ ಅತ್ಯಂತ ಸರಳ ಹಾಗೂ ಸುಲಭವಾಗಿದೆ. ಪರೀಕ್ಷಾ ವಿಧಾನದಲ್ಲಿ ಉತ್ತಮ ಅಂಕ ಗಳಿಸುವಂಥದ್ದು ಓದುವ ವಿದ್ಯಾರ್ಥಿಗಳಿಗೆ ಕಷ್ಟವಾಗಲಾರದು. ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಸಾಧನೆ ಮಾಡುವುದಿದ್ದರೆ ಪಾಲಕರು ಚೆನ್ನಾಗಿದ್ದಾಗ ಅವರ ಕಣ್ಣೆದುರಿಗೆ ಸಾಧನೆ ಮಾಡಿದರೆ ಹುಟ್ಟಿದ್ದಕ್ಕೂ ಸಾರ್ಥಕವಾಗುತ್ತದೆ ಎಂದು ಸಲಹೆ ನೀಡಿದರು.
ಹಿರಿಯ ಉಪನ್ಯಾಸಕ ವಿ.ಎಂ.ರವಿ, ಮಂಜುನಾಥ, ಲೋಕೇಶ್, ಎಸ್‌ಡಿಎಂಸಿ ಉಪಾಧ್ಯಕ್ಷ ಬಿ.ಟಿ.ಶಂಕರೇಗೌಡ, ಮುಖಂಡ ಶ್ರೀನಿವಾಸ, ಪ್ರೌಢಶಾಲಾ ವಿಭಾಗದ ಪಿ.ಅನಿತಾ ಇತರರಿದ್ದರು. ಪ್ರೌಢಶಾಲಾ ಹಾಗೂ ಕಾಲೇಜು ವಿಭಾಗದ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.