

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ಸಮಾಜ ಅಥವಾ ದೇಶ ಮುಂದುವರಿದಿದೆಯೇ ಅಥವಾ ಅಭಿವೃದ್ಧಿ ಹೊಂದಿದೆಯೇ ಎಂದು ತಿಳಿದುಕೊಳ್ಳಬೇಕಾದರೆ ಆ ದೇಶದಲ್ಲಿನ ಮಹಿಳೆಯರ ಸ್ಥಾನಮಾನ ಅರಿತರೆ ಸಾಕು. ಆ ಸಮಾಜ ಮುಂದುವರೆದಿದ್ದರೆ ಆ ಜಾಗದಲ್ಲಿ ಮಹಿಳೆಯರಿಗೆ ಸೂಕ್ತ ಸಬಲೀಕರಣದ ಗೌರವ ನೀಡಲಾಗುತ್ತಿದೆ ಎಂದು ಅರ್ಥ ಎಂದು ಶಾಸಕ ಶರತ್ ಬಚ್ಚೇಗೌಡ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2024-25ನೇ ಸಾಲಿನ ಕ್ರೀಡೆ, ಎನ್‌ಎಸ್‌ಎಸ್, ಎನ್‌ಸಿಸಿ, ರೋವರ್ಸ್ ಹಾಗೂ ರೇಂಜರ್ಸ್ ಘಟಕಗಳ ವಿವಿಧ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು, ಭಾರತೀಯ ಸೇನಾ ಪಡೆಗಳು ನಡೆಸಿದ ಆಪರೇಷನ್ ಸಿಂದೂರ ಸಂಪೂರ್ಣ ಮಾಹಿತಿ ಬಗ್ಗೆ ಮಾಧ್ಯಮಗೋಷ್ಠಿ ಮೂಲಕ ಇಡೀ ದೇಶಕ್ಕೆ ತಿಳಿಸಿರುವ ಹೆಮ್ಮೆ ಮಹಿಳೆಯರಿಗೆ ಸಲ್ಲುತ್ತದೆ. ಅದು ಭಾರತ ಮಹಿಳೆಯರಿಗೆ ನೀಡುವ ಗೌರವವನ್ನು ಸೂಚಿಸುತ್ತದೆ ಎಂದರು. ಅದೇ ರೀತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶೇ.75 ಹೆಣ್ಣು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದರೆ, ಶೇ.75 ಮಹಿಳಾ ಭೋದಕಿಯರು ಪಾಠ ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದರು. ಹೊಸಕೋಟೆಯ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುವ ಯುವಕ ಯುವತಿಯರು ಶಿಕ್ಷಣದ ನಂತರ ಕೇವಲ ಕೆಲಸವನ್ನರಸಿ ಹೋಗಬಾರದು. ರಾಜ್ಯದ ಮೂಲೆಮೂಲೆಗಳಲ್ಲಿ ತಹಸೀಲ್ದಾರ್, ಜಿಲ್ಲಾಧಿಕಾರಿ, ಎಸ್‌ಪಿ ಹೀಗೆ ಉನ್ನತ ಹುದ್ದೆಗಳಲ್ಲಿ ಹೊಸಕೋಟೆ ಕಾಲೇಜು ವಿದ್ಯಾರ್ಥಿಗಳು ಸೇವೆ ಸಲ್ಲಿಸಬೇಕು ಎಂದು ಮನವಿ ಮಾಡಿದರು. ಸ್ಪರ್ಧಾತ್ಮಕ ಕೋರ್ಸ್‌ಗಳ ಅಧ್ಯಯನಕ್ಕೆ ಅನುವು ಮಾಡಿಕೊಡುವಂತೆ ಪ್ರಾಂಶುಪಾಲರು ಮನವಿ ಸಲ್ಲಿಸಿದ್ದು, ಅದಕ್ಕೆ ಬೇಕಾದ ಮೂಲ ಸೌಕರ್ಯ ಒದಗಿಸಿಕೊಡಲಾಗುವುದು. ಇದಕ್ಕಾಗಿ 19 ಅಂಶದ 10 ಕೋಟಿ ರೂ.ವೆಚ್ಚದ ಪಟ್ಟಿ ನೀಡಿದ್ದಾರೆ. ಅದರಲ್ಲಿ ಕನಿಷ್ಟ 10 ಕೋಟಿ ರೂ. ವೆಚ್ಚದ ಅನುದಾನ ಬಿಡುಗಡೆ ಮಾಡಿಸಿ ಹೊಸಕೋಟೆಯನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಕೇಂದ್ರವನ್ನಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಕೌಶಲ ಬೆಳೆಸಿಕೊಳ್ಳಬೇಕು: ಮಾಜಿ ಸಂಸದ ಡಾ.ಎಲ್.ಹನುಮಂತಪ್ಪ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಪಠ್ಯಕ್ಕೆ ಸೀಮಿತವಾದರೆ ಜೀವನದಲ್ಲಿ ಎಲ್ಲವನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಎಐ ತಂತ್ರಜ್ಞಾನ ದಿನೇ ದಿನೇ ಬೆಳೆಯುತ್ತಿದೆ. ದೇಶದಲ್ಲಿ 86 ಲಕ್ಷ ಜನ ಎಐ ತಂತ್ರಜ್ಞಾನದಿಂದ ಉದ್ಯೋಗ ಕಳೆದುಕೊಳ್ಳು ಸಾಧ್ಯತೆ ಇದೆ. ಆದರೆ ಎಐ ಪ್ರಕಾರ ತಂತ್ರಜ್ಞಾನ ಅರಿತರೆ ದೇಶದಲ್ಲಿ 97 ಲಕ್ಷ ಉದ್ಯೋಗ ಸೃಷ್ಟಿಯಾಗುತ್ತದೆ ಎಂಬ ವರದಿಯೂ ಇದೆ. ಆದ್ದರಿಂದ ತಂತ್ರಜ್ಞಾನಕ್ಕೆ ತಕ್ಕಂತೆ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆ ಸಾಮರ್ಥ್ಯಕ್ಕೆ ತಕ್ಕ ಕೌಶಲ ಬೆಳಸಿಕೊಳ್ಳಲು ಮುಂದಾಗಬೇಕು ಎಂದರು. ದೇಶದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶಿಕ್ಷಣಕ್ಕೆ ನೀಡಬೇಕಾದ ಸೂಕ್ತ ಅನುದಾನ ನೀಡುತಿಲ್ಲ. ಜಿಡಿಪಿ ಬೆಳವಣಿಗೆಯ ಶೇ.6 ನೀಡಿದರೆ ಮಾತ್ರ ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯ. ಆದರೆ ಸದ್ಯ ಶೇ.3 ಅನುದಾನ ಮಾತ್ರ ನೀಡುತ್ತಿದೆ. ಇದರ ಬಗ್ಗೆ ವಿದ್ಯಾರ್ಥಿಗಳು ಹೋರಾಟದ ದಾರಿ ಹಿಡಿಯಬೇಕು ಎಂದರು.