

ಮಕ್ಕಳ ಕೊರತೆ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷದ ಅವಧಿಯಲ್ಲಿ ಜಿಲ್ಲೆಯಲ್ಲಿ ಮುಚ್ಚಿರುವ ಶಾಲೆಗಳನ್ನು ಮತ್ತೆ ತೆರೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಿದೆ.
ಮೂರು ವರ್ಷದ ಅವಧಿಯಲ್ಲಿ ಮಕ್ಕಳ ಜಿಲ್ಲೆಯಲ್ಲಿ 17 ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ. ಇದೀಗ ಮಕ್ಕಳ ದಾಖಲಾತಿ ಹೆಚ್ಚಿಸುವ ಮೂಲಕ ಆ ಶಾಲೆಗಳನ್ನು ಮತ್ತೆ ತೆರೆಯಲು ಶಿಕ್ಷಣ ಇಲಾಖೆ ಮುಂದಾಗಿದೆ. ಈ ಪೈಕಿ 2022-23ನೇ ಸಾಲಿನಲ್ಲಿ ಎರಡು ಶಾಲೆಗಳು ಪ್ರಾರಂಭವಾಗಲಿವೆ. ಮುಂದಿನ ವರ್ಷಗಳಲ್ಲಿ ನಿರೀಕ್ಷೆಯಷ್ಟು ದಾಖಲಾತಿಯಾದರೆ ಉಳಿದ ಶಾಲೆಗಳೂ ಹಂತ ಹಂತವಾಗಿ ಪ್ರಾರಂಭವಾಗಲಿವೆ.
ಮುಚ್ಚಿರುವ ಶಾಲೆಗಳನ್ನು ಮತ್ತೆ ತೆರೆಸಲು ಅಗತ್ಯ ದಾಖಲಾತಿಗಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳು ನಾನಾ ಕಾರ್ಯಕ್ರಮ ರೂಪಿಸುತ್ತಿದ್ದಾರೆ. ಗ್ರಾಮಗಳಿಗೆ ಭೇಟಿ ನೀಡಿ, ಮನೆ ಮನೆಗೂ ಹೋಗಿ ಮಕ್ಕಳನ್ನು ಶಾಲೆಗೆ ಸೇರಿಸುವಂತೆ ಪಾಲಕರಲ್ಲಿ ಮನವಿ ಮಾಡಲು ಮುಂದಾಗಿದ್ದಾರೆ. ಜತೆಗೆ, ಅಗತ್ಯ ಇರುವ ಕಡೆ ಪೋಸ್ಟರ್ ಹಾಗೂ ಕರಪತ್ರಗಳನ್ನು ಹಂಚಿಕೆ ಮಾಡಲು ತೀರ್ಮಾನಿಸಿದ್ದಾರೆ. ಈ ಎಲ್ಲ ಚಟುವಟಿಕೆಗಳು ಮಾರ್ಚ್ ಕಡೇ ವಾರದಲ್ಲಿ ಆರಂಭವಾಗಲಿವೆ.
17 ಶಾಲೆಗಳು ಇವು:
ಎಚ್.ಡಿ.ಕೋಟೆ ತಾಲೂಕಿನ ಜಿಎಲ್‌ಪಿಎಸ್ ಹೊಸಕೋಟೆ ಹಾಗೂ ಜಿಎಲ್‌ಪಿಎಸ್ ತಾರಕ ಶಾಲೆಗಳನ್ನು ಮುಚ್ಚಲಾಗಿದೆ. ಅದೇ ರೀತಿ ಹುಣಸೂರಿನ ಜಿಎಲ್‌ಪಿಎಸ್ ಹೊನ್ನೆಹಳ್ಳಿ, ದೇವರಹಳ್ಳಿ, ಕೆ.ಆರ್.ನಗರದ ಬೋರೆಕಲ್ಲಹಳ್ಳಿ, ಎಳದಹಳ್ಳಿ, ಸನ್ನೇಗೌಡನಕೊಪ್ಪಲು, ಯರೆಮನುಗನಹಳ್ಳಿ, ಮೈಸೂರು ಉತ್ತರದ ಗರ್ಲ್ಸ್ ಒಂಟಿಕೊಪ್ಪಲು, ಪಿರಿಯಾಪಟ್ಟಣದ ಉರ್ದು ಕಿತ್ತೂರು, ಹಳೆಯೂರು, ಉರ್ದು ಚಿಕ್ಕನೇರಳೆ, ಉರ್ದು ಸತ್ಯಗಾಲ, ಉರ್ದು ಮಾಕೋಡು, ಟಿ.ಗುರುವಯ್ಯನಕೊಪ್ಪಲು, ಮುದ್ದೇನಹಳ್ಳಿ ಕೊಪ್ಪಲು ಹಾಗೂ ತಿ.ನರಸೀಪುರದ ಉರ್ದು ವಿಜಾಪುರ, ಉರ್ದು ತಲಕಾಡು ಶಾಲೆಗಳನ್ನು ಯಾವುದೇ ವಿದ್ಯಾರ್ಥಿ ಪ್ರವೇಶ ಪಡೆಯದ ಕಾರಣ ಮುಚ್ಚಲಾಗಿದೆ.
2 ಶಾಲೆಗಳಿಗೆ ಮರುಜೀವ:
ಸದ್ಯ ಜಿಲ್ಲೆಯಲ್ಲಿ ಮುಚ್ಚಿದ್ದ 17 ಶಾಲೆಗಳ ಪೈಕಿ ಎರಡು ಶಾಲೆಗಳನ್ನು ಮತ್ತೆ ಆರಂಭಿಸಲಾಗಿದೆ. ನಂಜನಗೂಡಿನ ಜಿಎಲ್‌ಪಿಎಸ್ ಬೆಂಡಗಳ್ಳಿಯಲ್ಲಿ ಇದೀಗ 18 ಮಕ್ಕಳು ಪ್ರವೇಶ ಪಡೆದಿದ್ದಾರೆ. ಅದೇ ರೀತಿ ಪಿರಿಯಾಪಟ್ಟಣದ ಜಿಎಲ್‌ಪಿಎಸ್ ಹಳೆಯೂರಿನಲ್ಲಿ 10 ಮಕ್ಕಳು ಪ್ರವೇಶ ಪಡೆದಿದ್ದು ಶಾಲೆ ಎಂದಿನಂತೆ ಪ್ರಾರಂಭವಾಗಿದೆ.
ಪಾಲಕರ ಆಂಗ್ಲ ವ್ಯಾಮೋಹ:
ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ, ಸೂಕ್ತ ಮೂಲಸೌಲಭ್ಯ ಹಾಗೂ ವಿವಿಧ ಯೋಜನೆಗಳನ್ನು ನೀಡುತ್ತಿದ್ದರೂ ಪಾಲಕರ ಆಂಗ್ಲ ವ್ಯಾಮೋಹ ಸರ್ಕಾರಿ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ಎದುರಾಗಲು ಪ್ರಮುಖ ಕಾರಣವಾಗಿದೆ. ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆ ಸೇರುವ ಮಕ್ಕಳ ಸಂಖ್ಯೆಯೂ ಕಡಿಮೆ ಆಗುತ್ತಿದೆ. ಇದೀಗ 2022-23ನೇ ಸಾಲಿನಲ್ಲಿ ಮುಚ್ಚಿದ್ದ ಎರಡು ಶಾಲೆಗಳನ್ನು ಮತ್ತೆ ತೆರೆದಿರುವುದು ತುಸು ನೆಮ್ಮದಿ ತಂದಿದೆ.
ಕೋವಿಡ್ ಸಮಯದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಸಾಕಷ್ಟು ಕುಟುಂಬಗಳು ತಮ್ಮ ಮಕ್ಕಳನ್ನು ಖಾಸಗಿ ಶಾಲೆಯಿಂದ ಸರ್ಕಾರಿ ಶಾಲೆಗೆ ಸೇರಿಸಿದ್ದರು. ಕೋವಿಡ್ ಸಮಯದಲ್ಲಿ ವಿದ್ಯಾಗಮ ಯೋಜನೆ ಕ್ಲಿಕ್ ಆಗಿತ್ತು. ಶಿಕ್ಷಕರು ಮನೆ ಬಳಿಯೇ ಬಂದು ಮಕ್ಕಳಿಗೆ ಮೈದಾನ, ಪಾರ್ಕ್ ಹಾಗೂ ಸಮುದಾಯ ಭವನ, ಜಗಲಿ ಮೇಲೆ ಪಾಠ ಮಾಡುತ್ತಿದ್ದ ಕ್ರಮಕ್ಕೆ ಪಾಲಕರು ಮೆಚ್ಚುಗೆ ಸೂಚಿಸಿದ್ದರು. ಆದರೆ, ಇದೀಗ ಕೋವಿಡ್ ಕ್ಷೀಣಿಸಿ ಎಲ್ಲೆಡೆ ಸಹಜ ವಾತಾವರಣ ನಿರ್ಮಾಣವಾಗಿದೆ. ಹಾಗಾಗಿ, ಎಂದಿನಂತೆ ಸರ್ಕಾರಿ ಶಾಲೆಯತ್ತ ಪಾಲಕರು ನಿರ್ಲಕ್ಷ್ಯ ತಾಳಿದ್ದಾರೆ. ಪಾಲಕರಲ್ಲಿ ಸರ್ಕಾರಿ ಶಾಲೆಯ ಮಹತ್ವದ ಬಗ್ಗೆ ಅರಿವು ಮೂಡಿಸಲು ಶಿಕ್ಷಣ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.
ಸರ್ಕಾರಿ ಶಾಲೆಗಳು ಇಂದಿಗೂ ಗುಣಮಟ್ಟ ಕಾಯ್ದುಕೊಂಡಿವೆ, ಇದನ್ನು ಪಾಲಕರು ಅರಿತುಕೊಂಡು ಹೆಚ್ಚಿನ ಪ್ರಮಾಣದಲ್ಲಿ ತಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸಬೇಕಾಗಿದೆ. ಜತೆಗೆ, ಲಾಕ್‌ಡೌನ್ ಸಂದರ್ಭದಲ್ಲಿ ಟಿವಿ, ರೇಡಿಯೂ ಹಾಗೂ ವಿದ್ಯಾಗಮ ಮೂಲಕ ಮಕ್ಕಳಿಗೆ ಮತ್ತಷ್ಟು ಹತ್ತಿರವಾಗಿ ಪಾಠ ಪ್ರವಚನ ನೀಡಿದ್ದು, ಪಾಲಕರಿಗೆ ಹಿಡಿಸಿದೆ. ಕೊರೊನಾ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಜನರಿಗೆ ದುಡಿಮೆ ಕಡಿಮೆ ಆಗಿದೆ. ಆರ್ಥಿಕ ಸಮಸ್ಯೆ ತಲೆದೋರಿದೆ. ಆನ್‌ಲೈನ್ ಕ್ಲಾಸ್ ಬಗ್ಗೆ ಪಾಲಕರಲ್ಲಿ ನಂಬಿಕೆ ಕ್ಷೀಣಿಸಿದೆ. ಈ ಎಲ್ಲ ಕಾರಣಗಳನ್ನು ಪಾಲಕರಿಗೆ ತಿಳಿಸುವ ಮೂಲಕ ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಿಸಲು ಪ್ರಯತ್ನ ಮಾಡಲಾಗುತ್ತದೆ ಎಂದು ಡಿಡಿಪಿಐ ರಾಮಚಂದ್ರರಾಜೇ ಅರಸ್ ತಿಳಿಸಿದ್ದಾರೆ.
ತಾಲೂಕುವಾರು ವಿವರ
ತಾಲೂಕು ಎಷ್ಟು ಶಾಲೆ
ಎಚ್.ಡಿ.ಕೋಟೆ 2
ಹುಣಸೂರು 2
ಕೆ.ಆರ್.ನಗರ 4
ಮೈಸೂರು ಉತ್ತರ 1
ಪಿರಿಯಾಪಟ್ಟಣ 7
ತಿ.ನರಸೀಪುರ 2
ಒಟ್ಟು 17
ಮಕ್ಕಳ ಕೊರತೆಯಿಂದ ತಾತ್ಕಾಲಿಕವಾಗಿ ಜಿಲ್ಲೆಯಲ್ಲಿ 17 ಶಾಲೆಗಳನ್ನು ಮುಚ್ಚಲಾಗಿದೆ. ಮತ್ತೆ ಆ ಎಲ್ಲ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಿ ಶಾಲೆಗಳನ್ನು ತೆರೆಯಲು ಪ್ರಯತ್ನಿಸಲಾಗುತ್ತಿದೆ. ಈ ವರ್ಷ ಮುಚ್ಚಿರುವ ಎರಡು ಶಾಲೆಗಳನ್ನು ತೆರೆಯಲಾಗುತ್ತದೆ. ಮುಚ್ಚಿರುವ ಶಾಲೆಗಳ ಶಿಕ್ಷಕರನ್ನು ಅಕ್ಕಪಕ್ಕದ ಶಾಲೆಗಳಿಗೆ ನಿಯುಕ್ತ ಮಾಡಲಾಗಿದೆ.ರಾಮಚಂದ್ರರಾಜೇ ಅರಸ್, ಡಿಡಿಪಿಐ