ಚಿಕ್ಕಗಡಿಯಾರ ವೃತ್ತಕ್ಕೆ ಹೊಸ ರೂಪ

mysore
Published on

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ನಗರದ ಹೃದಯ ಭಾಗದಲ್ಲಿರುವ ಚಿಕ್ಕಗಡಿಯಾರ ವೃತ್ತ ಹೊಸ ರೂಪ ಪಡೆದುಕೊಳ್ಳಲಿದೆ. ಇದರೊಂದಿಗೆ, ಸಾಂಸ್ಕೃತಿಕ ಕಲಾ ವೇದಿಕೆಯಾಗಿಯೂ ಪರಿವರ್ತನೆಯಾಗಲಿದೆ.


ಚಿಕ್ಕಗಡಿಯಾರ ವೃತ್ತವನ್ನು ಇಂಗ್ಲೆಂಡಿನ ರಾಜಧಾನಿ ಲಂಡನ್‌ನಲ್ಲಿರುವ ಆಕರ್ಷಕ ಟೈಮ್ಸ್ ಸ್ಕ್ವೇರ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಮೈಸೂರು ಮಹಾನಗರ ಪಾಲಿಕೆ ಮುಂದಾಗಿದೆ.


ದೇವರಾಜ ಮಾರುಕಟ್ಟೆಯ ಎದುರು, ಕೆ.ಆರ್.ಸರ್ಕಲ್‌ಗೆ ಸಮೀಪ, ಸಯ್ಯಜಿರಾವ್ ರಸ್ತೆ ಮತ್ತು ಶಿವರಾಂಪೇಟೆ ರಸ್ತೆಯ ಕೂಡುವಿಕೆ ಜಾಗದಲ್ಲಿ ಚಿಕ್ಕಗಡಿಯಾರ ವೃತ್ತವಿದೆ. ಮಾರುಕಟ್ಟೆಗೆ ಹೊಂದಿಕೊಂಡಿರುವುದರಿಂದ ಇಲ್ಲಿ ಜನದಟ್ಟಣೆ, ಗಜಿಬಿಜಿ ಹೆಚ್ಚು. ವ್ಯಾಪಾರ-ವಹಿವಾಟಿನ ಕಾರುಬಾರು ಇಲ್ಲಿ ರಾರಾಜಿಸುತ್ತದೆ. ವಾಹನಗಳ ನಿಲುಗಡೆ ತಾಣವೂ ಆಗಿದೆ. ಇದರೊಂದಿಗೆ, ಆಗೊಮ್ಮೆ-ಈಗೊಮ್ಮೆ ಪ್ರತಿಭಟನೆ, ಧರಣಿ ನಡೆಯುವ ಸ್ಥಳವೂ ಹೌದು. ಇಷ್ಟಕ್ಕೆ ಸಿಮೀತವಾಗಿರುವ ಈ ವೃತ್ತ, ಮುಂದೆ ಸಾಂಸ್ಕೃತಿಕ ಕಲಾ ಪ್ರದರ್ಶನಕ್ಕೂ ವೇದಿಕೆಯಾಗಲಿದೆ.


ಜಗನ್ಮೋಹನ ಅರಮನೆ ಸಭಾಂಗಣ, ಕಲಾಮಂದಿರ, ಪುರಭವನ, ಕಿರು ರಂಗಮಂದಿರ ಸೇರಿದಂತೆ ವಿವಿಧ ಸಭಾಂಗಣಗಳಲ್ಲಿ 4 ಗೋಡೆಗಳ ಸೀಮಿತ ಪ್ರೇಕ್ಷಕರ ನಡುವೆ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನವಾಗುತ್ತಿವೆ. ಆದರಿಲ್ಲಿ ಜನಸಮೂಹದ ಮಧ್ಯೆ ಪ್ರತಿಭಾ ಪ್ರದರ್ಶನಕ್ಕೆ ಕಲಾವಿದರಿಗೆ ಅವಕಾಶ ಕಲ್ಪಿಸಿಕೊಡಲು ಉದ್ದೇಶಿಸಲಾಗಿದ್ದು, ಈ ಮೂಲಕ ಕಲಾವಿದರಿಗೆ ಉತ್ತೇಜನ ನೀಡುವುದರೊಂದಿಗೆ ಜನರಿಗೆ, ಪ್ರವಾಸಿಗರಿಗೂ ಸಾಂಸ್ಕೃತಿಕ ಕಲೆ ಪರಿಚಯಿಸಲಾಗುತ್ತದೆ.

ಸಾಂಸ್ಕೃತಿಕ ಸಂಜೆ:

ನಗರದ ನಡುವಿನಲ್ಲಿರುವ ಈ ವೃತ್ತದಲ್ಲಿ ಹೆಚ್ಚಿನ ಜನರು ಸೇರುತ್ತಾರೆ. ಅರಮನೆ, ಜಗನ್ಮೋಹನ ಅರಮನೆ, ದೇವರಾಜ ಮಾರುಕಟ್ಟೆಗೆ ಭೇಟಿ ನೀಡುವ ಪ್ರವಾಸಿಗರು ಇಲ್ಲಿನ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಸ್ವಾದಿಸಬಹುದು. ಸಂಜೆ ಹೊತ್ತಿನಲ್ಲಿ ಯಾವುದೇ ಕಾರ್ಯಕ್ರಮಗಳು ಇರುವುದಿಲ್ಲ ಎಂಬ ಕೊರಗು ನೀಗಲಿದೆ. ಪ್ರವಾಸಿಗರು ಸಂಜೆ ಹೊತ್ತಿನಲ್ಲಿ ಸಮಯ ಕಳೆಯಲು ಅನುಕೂಲ ಮಾಡಿಕೊಟ್ಟಂತಾಗಲಿದೆ.


ಸಂಜೆ ವೇಳೆ ಖರೀದಿಗೆ ಬರುವ ಜನರು ಕೂಡ ಸ್ವಲ್ಪ ಹೊತ್ತು ಇಲ್ಲಿಯೇ ಕಾಲ ಕಳೆಯವುದರಿಂದ ಚಿಕ್ಕಗಡಿಯಾರ ವೃತ್ತ ಸಂಜೆಯ ಮೇಲೆ ಜನರಿಂದ ತುಂಬಿ ಹೋಗಿರುತ್ತದೆ. ಈ ಸಂದರ್ಭದಲ್ಲಿ ಜನರಿಗೆ ಮನರಂಜನೆಯೊಂದಿಗೆ, ಉದಯೋನ್ಮುಖ ಕಲಾವಿದರಿಗೆ ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ಸಿಕ್ಕರೆ ಅವರಿಗೆ ವೇದಿಕೆಯ ಭಯ ನಿವಾರಣೆಯೊಂದಿಗೆ, ನೂರಾರು ಜನರ ನಡುವೆ ಕಾರ್ಯಕ್ರಮ ನೀಡಿದ ಬಗ್ಗೆ ಹೆಮ್ಮೆ ಕೂಡ ಇರುತ್ತದೆ.


ಚಿಕ್ಕಗಡಿಯಾರ ವೃತ್ತದಲ್ಲಿ ಶಾಶ್ವತವಾಗಿ ಮೆಟ್ಟಿಲು ಮಾದರಿಯಲ್ಲಿ ವೇದಿಕೆಯನ್ನು ಕಲ್ಲಿನಿಂದಲೇ ನಿರ್ಮಿಸಲಾಗಿದ್ದು, ಆಸನ ವ್ಯವಸ್ಥೆ ಕೂಡ ಇದೆ. ಅಲ್ಲದೆ, ನೆಲದ ಮೇಲೆಯೂ ಜನರು ಕುಳಿತುಕೊಂಡು ನೋಡಬಹುದಾಗಿದೆ.

ವೇದಿಕೆಯ ಬಳಿ ಧ್ವನಿವರ್ಧಕ ಮತ್ತು ಲೈಟ್ ಬಳಕೆಗೆ ವಿದ್ಯುತ್ ಸ್ವೀಚ್‌ಬೋರ್ಡ್‌ಗಳನ್ನು ಸಹ ಪಾಲಿಕೆಯಿಂದಲೇ ವ್ಯವಸ್ಥೆ ಮಾಡಲಾಗುತ್ತಿದೆ. ವಾರಾಂತ್ಯದಲ್ಲಿ ಚಿಕ್ಕಗಡಿಯಾರ ವೃತ್ತದಲ್ಲಿ ನಿರಂತರವಾಗಿ ಸಾಂಸ್ಕೃತಿಕ ಕಾರ್ಯಕ್ರಮ ನಡೆದರೆ ಸ್ಥಳೀಯರಿಗೆ ಮನರಂಜನೆಯೊಂದಿಗೆ ಪ್ರವಾಸಿಗರನ್ನು ಆಕರ್ಷಿಸಬಹುದಾಗಿದೆ.

ದೊಡ್ಡಗಡಿಯಾರಕ್ಕಿಂತ ಹಳೆಯದು


ಇದು 137 ವರ್ಷಗಳಷ್ಟು ಹಳೆಯ ಗೋಪುರ. ಸುಮಾರು 50 ಅಡಿ ಎತ್ತರವಿರುವ ಈ ಗೋಪುರ ದೊಡ್ಡಗಡಿಯಾರಕ್ಕಿಂತಲೂ ಹಳೆಯದು. ಇದನ್ನು ಮೈಸೂರಿನ ಮಹಾರಾಜರಾಗಿದ್ದ ಚಾಮರಾಜೇಂದ್ರ ಒಡೆಯರ್ ಕಾಲದಲ್ಲಿ 1886ರಲ್ಲಿ ಮೈಸೂರು ಸಂಸ್ಥಾನಕ್ಕೆ ಭೇಟಿ ನೀಡಿದ್ದ ವೈಸರಾಯ್ ಮತ್ತು ಭಾರತದ ಗವರ್ನರ್ ಜನರಲ್ ಲಾರ್ಡ್ ಡಿಪರಿನ್ ಅವರ ನೆನಪಿಗಾಗಿ ನಿರ್ಮಿಸಲಾಯಿತು.

ಉದ್ಯಾನದ ಕಾರಂಜಿಯಿಂದ ಇದನ್ನು ಅಲಂಕರಿಸಲಾಗಿತ್ತು. ಇದೂ ಕೂಡ ನಾಲ್ಕು ದಿಕ್ಕಿಗೂ ಗಡಿಯಾರವನ್ನು ಹೊಂದಿದೆ. ಮರದಿಂದ ಕೂಡಿದ್ದು ಆಕರ್ಷಕವಾಗಿದೆ. ನಾಲ್ಕು ದಿಕ್ಕಿನಲ್ಲಿ ತೆರೆದ ಬಾಗಿಲಿದ್ದು, ಸ್ವಾಗತ ಕಮಾನುಗಳು ಸೊಗಸಾಗಿವೆ. ಈ ಗೋಪುರದ ನಾಲ್ಕು ಭಾಗಗಳಲ್ಲೂ ಆನೆ-ನಂದಿ ವಿಗ್ರಹಗಳಿವೆ.

ಬೀದಿ ಬದಿ ವ್ಯಾಪಾರಸ್ಥರ ತಾಣವಾಗಿದ್ದ ಇದನ್ನು ಮೈಸೂರು ನಗರಪಾಲಿಕೆ 125 ವರ್ಷಗಳ ನೆನಪಾಗಿ ಅಭಿವೃದ್ಧಿಗೊಳಿಸಿದೆ. ಇದೀಗ ಮತ್ತೊಂದು ರೂಪವನ್ನು ಪಡೆದುಕೊಳ್ಳುತ್ತಿದೆ.

ದೇವರಾಜ ಮಾರುಕಟ್ಟೆ ಪಕ್ಕದಲ್ಲಿಯೇ ಇರುವ ಚಿಕ್ಕಗಡಿಯಾರ ವೃತ್ತ ಶಿವರಾಂಪೇಟೆ, ಮಕ್ಕಾಜಿ ಚೌಕಕ್ಕೆ ಹೊಂದಿಕೊಂಡಂತೆ ಇದ್ದು, ಬೆಳಗ್ಗೆಯಿಂದ ರಾತ್ರಿಯವರೆಗೂ ಜನಜಂಗುಳಿಯಿಂದ ಕೂಡಿರುತ್ತದೆ. ಸಾಕಷ್ಟು ಜನರು ವೃತ್ತದ ಆವರಣದಲ್ಲಿ ವಿಶ್ರಾಂತಿ ಕೂಡ ಪಡೆಯುತ್ತಿರುತ್ತಾರೆ.

ಟೈಮ್ಸ್ ಸ್ಕ್ವೇರ್ ಮಾದರಿಯಲ್ಲಿ ಅಭಿವೃದ್ಧಿ

ಚಿಕ್ಕಗಡಿಯಾರ ವೃತ್ತವನ್ನು ಟೈಮ್ಸ್ ಸ್ಕ್ವೇರ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಈ ವೃತ್ತದಲ್ಲಿ ಅಳವಡಿಸಿರುವ ಟೈಲ್ಸ್ ತೆಗೆದು ಹೊಸ ರೀತಿಯಲ್ಲಿ ರೂಪಿಸಲಾಗುವುದು. ಇಲ್ಲಿ ವಾರಾಂತ್ಯದ ದಿನವಾದ ಶನಿವಾರ, ಭಾನುವಾರ ನಡೆಯುವ ಕಾರ್ಯಕ್ರಮ ವೀಕ್ಷಣೆಗೆ ಸಾರ್ವಜನಿಕರಿಗೆ ಅನುವು ಆಗುವಂತೆ ವಿನ್ಯಾಸಗೊಳಿಸಲಾಗುವುದು.

ಅಸಾದ್ ಉರ್ ರೆಹಮಾನ್ ಶರೀಫ್, ನಗರಪಾಲಿಕೆ ಆಯುಕ್ತ

ಸಾಂಸ್ಕೃತಿಕ ಕಾರ್ಯಕ್ರಮ

ನಗರಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಅವರಿಗೆ ಸಂಜೆಯ ಮೇಲೆ ಮನರಂಜನೆ ನೀಡುವ ಉದ್ದೇಶದಿಂದ ಚಿಕ್ಕಗಡಿಯಾರ ವೃತ್ತದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಕಲಾವಿದರಿಗೆ ಅವಕಾಶ ನೀಡಲಾಗುವುದು. ಈ ಮೂಲಕ ಪಾಲಿಕೆಯಿಂದ ಕಲಾವಿದರಿಗೆ ಉತ್ತೇಜನ ನೀಡಲಾಗುವುದು.
ಶಿವಕುಮಾರ್, ಮೇಯರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net