ಕ್ಲಾಕ್ ಟವರ್- ಹ್ಯಾಮಿಲ್ಟನ್ ವೃತ್ತ ಏಕಮುಖ ವೃತ್ತ ವ್ಯವಸ್ಥೆ ಹೇಗಿದೆ ? - ಮನಪಾದಿಂದ ಜನಾಭಿಪ್ರಾಯ ಆಹ್ವಾನ

mcc
Published on

ವಿಜಯವಾಣಿ ಸುದ್ದಿಜಾಲ ಮಂಗಳೂರು
ನಗರದ ಕ್ಲಾಕ್ ಟವರ್‌ನಿಂದ ಎ.ಬಿ.ಶೆಟ್ಟಿ ವೃತ್ತ- ಹ್ಯಾಮಿಲ್ಟನ್ ವೃತ್ತ- ರಾವ್ ಆ್ಯಂಡ್ ವೃತ್ತ ಮಾರ್ಗ ಮರಳಿ ಕ್ಲಾಕ್ ಟವರ್ ತಲುಪುವ ನೂತನ ಏಕಮುಖ ರಸ್ತೆ ವ್ಯವಸ್ಥೆ ಹೇಗಿದೆ ? ಜನ ಸ್ನೇಹಿಯಾಗಿದೆಯೇ ? ಎನ್ನುವ ಕುರಿತು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಪ್ರಾಯ ತಿಳಿಸುವಂತೆ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಈ ರಸ್ತೆಯಲ್ಲಿ ಅತ್ಯಧಿಕ ವಾಹನ ಸಂಚಾರವಿದೆ. ಅತ್ಯಧಿಕ ಸರ್ಕಾರಿ ಕಚೇರಿ, ವಾಣಿಜ್ಯ ಕೇಂದ್ರಗಳನ್ನು ರಸ್ತೆಯು ಹಾದುಹೋಗುತ್ತಿದ್ದು, ಮೈದಾನ, ಸರ್ವೀಸ್ ಬಸ್ ನಿಲ್ದಾಣಗಳಿಂದ ಈ ಪ್ರದೇಶ ಗರಿಷ್ಠ ಚಟುವಟಿಕೆಗಳ ಕೇಂದ್ರವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತಾವಿತ ಮಾರ್ಗವನ್ನು ಏಕಮುಖ ರಸ್ತೆಯನ್ನಾಗಿ ಬದಲಿಸಿ ಜಂಕ್ಷನ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಪ್ರಾಯೋಗಿಕವಾಗಿ ಆರಂಭಿಸಿರುವ ನೂತನ ವ್ಯವಸ್ಥೆಯ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಮೇಯರ್, ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ಜರುಗಿದ ಸಮನ್ವಯ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಾರ್ವಜನಿಕರು ಮಂಗಳೂರು ಮಹಾನಗರ ಪಾಲಿಕೆ ಹಾಗೂ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ಜಾಲತಾಣ, ಫೆಸ್‌ಬುಕ್, ಟ್ವಿಟ್ಟರ್, ಇನ್‌ಸ್ಟಾಗ್ರಾಂನಲ್ಲಿ ಲಭ್ಯವಿರುವ ಗೂಗಲ್ ಫಾರ್ಮ್ ಲಿಂಕ್ ಮೂಲಕ ಅಭಿಪ್ರಾಯ ಹಂಚಿಕೊಳ್ಳಬಹುದು.
ಸಾರ್ವಜನಿಕರು ಅಭಿಪ್ರಾಯ ತಿಳಿಸಲು ಕೊನೆಯ ದಿನ ಸೆಪ್ಟಂಬರ್ 4.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net